(ನ್ಯೂಸ್ ಕಡಬ) newskadaba.com ಕಡಬ, ಜೂ.05. ಠಾಣಾ ವ್ಯಾಪ್ತಿಯ ಕೋರಿಯಾರ್ ಎಂಬಲ್ಲಿ ಅಕ್ರಮ ಮರಳುಗಾರಿಕೆಯ ವರದಿಗೆ ತೆರಳಿದ್ದ ಖಾಸಗಿ ವಾಹಿನಿಯ ವರದಿಗಾರನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇತ್ತಂಡದಿಂದಲೂ ದೂರು ದಾಖಲಾಗಿದೆ.
ಕಹಳೆ ನ್ಯೂಸ್ ವರದಿಗಾರ ಗಣೇಶ್ ಇಡಾಳ ಹಾಗೂ ತಂಡದವರು ಜೂನ್ 03 ರಂದು ಕೋಡಿಂಬಾಳ ಗ್ರಾಮದ ಕೋರಿಯಾರ್ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯ ವರದಿ ಮಾಡಲೆಂದು ತೆರಳಿದ್ದರು. ಈ ವೇಳೆ ತನ್ನ ವಿರುದ್ಧ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಗಣೇಶ್ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಕಡಬ ಠಾಣೆಗೆ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ 102ನೇ ನೆಕ್ಕಿಲಾಡಿ ಗ್ರಾಮದ ಅಂದುಕುಂಞ ಎಂಬವರ ಪತ್ನಿ ಸಫಿಯಾ ಹಾಗೂ ಪಟ್ರೋಡಿ ನಿವಾಸಿ ರಮೇಶ ಎಂಬವರ ಪತ್ನಿ ಲಲಿತ ಎಂಬವರು ದೂರು ನೀಡಿ, ಜೂ.3ರಂದು ಸಂಜೆ ವೇಳೆ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಕಹಳೆ ನ್ಯೂಸ್ ಎಂದು ಬರೆದಿದ್ದ ಓಮ್ನಿ ಕಾರಿನಲ್ಲಿ ಬಂದ ಆರು ಜನರ ತಂಡ ನಮ್ಮ ಅಶ್ಲೀಲ ಫೋಟೋ ತೆಗೆದಿದ್ದು, ಅದನ್ನು ವಿರೋಧಿಸಿದಾಗ ಮೈಗೆ ಕೈ ಹಾಕಿ ಎಳೆದು ಲೈಂಗಿಕ ಕಿರುಕುಳ ನೀಡಿ ಅವಮಾನ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಇನ್ನೊಂದೆಡೆ 102 ನೆಕ್ಕಿಲಾಡಿ ಗ್ರಾಮದ ಮೇಲಂಟ ನಿವಾಸಿ ಶೀನಪ್ಪ ಗೌಡರ ಪುತ್ರ ಗಣೇಶ್ ಎಂಬವರು ದೂರು ನೀಡಿ, ನಾನು ಜೆಸಿಬಿಯಲ್ಲಿ ಕೆಲಸ ನಿರ್ವಸಿಕೊಂಡಿದ್ದು ಜೂ.3ರಂದು ಕರ್ಮಾಯಿ ಕೋರಿಯಾರ್ ಕಡೆ ಚಾಲಕ ಕರುಣಾಕರರೊಂದಿಗೆ ನನ್ನ ಬೊಲೆರೊ ಜೀಪಿನಲ್ಲಿ ಕೆರ್ಮಾಯಿ ಕೋರಿಯಾರ್ ಜಿಲ್ಲಾ ಪಂಚಾಯತ್ ರಸ್ತೆಯ ದುರಸ್ತಿಗೆ ಪಿಡಬ್ಲ್ಯೂಡಿಯವರ ಮೂಲಕ ಮರಳು ಖರೀದಿಸಿದ್ದೇನೆ. ಈ ಮರಳಿನ ಹಣ ಕೊಡಲು ಹೋಗುತ್ತಿದ್ದಾಗ ಕಹಳೆ ನ್ಯೂಸ್ ವರದಿಗಾರರ 6 ಜನರ ತಂಡ ಓಮ್ನಿ ಕಾರಿನಲ್ಲಿ ಬಂದು ನನ್ನ ವಾಹನಕ್ಕೆ ಅಡ್ಡ ಇಟ್ಟು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ನನ್ನಲ್ಲಿದ್ದ 1 ಲಕ್ಷ ರೂಪಾಯಿಯನ್ನು ಎಳೆದುಕೊಂಡಿದ್ದಾರೆ. ಇದೀಗ ಗಾಯಗೊಂಡಿರುವ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಪ್ರತ್ಯೇಕ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಡಬ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.