(ನ್ಯೂಸ್ ಕಡಬ) newskadaba.com ಕಡಬ, ಜೂ.03. ತಾಯಿಯ ಹೆಸರಿನಲ್ಲಿದ್ದ ದಾಖಲೆಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡುವುದಕ್ಕೆಂದು ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೋರ್ವರು ಸೋಮವಾರದಂದು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.
ಕಡಬ ತಾಲೂಕಿನ ಐತ್ತೂರು ಗ್ರಾಮ ಪಂಚಾಯತ್ ನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿರುವ ಪ್ರೇಮ್ ಸಿಂಗ್ ನಾಯಕ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಐತ್ತೂರು ಗ್ರಾಮದ ಶಾಹುಲ್ ಹಮೀದ್ ಎಂಬವರು ತನ್ನ ತಾಯಿಯ ಹೆಸರಿನಿಂದ ತನ್ನ ಹೆಸರಿಗೆ 9&11 ವರ್ಗಾಯಿಸಲೆಂದು ಅರ್ಜಿ ಸಲ್ಲಿಸಿದ್ದು, ಈ ವೇಳೆ ಪ್ರೇಮ್ ಸಿಂಗ್ 10 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದಾರೆನ್ನಲಾಗಿದೆ. ಅದರಂತೆ ಮೇ 21 ರಂದು 2 ಸಾವಿರ ರೂ.ಗಳನ್ನು ಕೈಯಲ್ಲಿ ಹಾಗೂ 8 ಸಾವಿರ ರೂ.ಗಳನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದು, ಪುನಃ 10 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದಾಗ ಶಾಹುಲ್ ಹಮೀದ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.
ಅದರಂತೆ ಸೋಮವಾರದಂದು ಬೆಳಿಗ್ಗೆ ಒಂದು ಸಾವಿರ ರೂ.ಗಳನ್ನು ಪ್ರೇಮ್ ಸಿಂಗ್ ಗೆ ನೀಡಿದ್ದು, ಸಂಜೆ ವೇಳೆಗೆ ಗುರುವಾಯನಕೆರೆ ಜಂಕ್ಷನ್ ನಲ್ಲಿ 9 ಸಾವಿರ ರೂ.ಗಳನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಉಮಾ ಪ್ರಶಾಂತ್, ಡಿವೈಎಸ್ಪಿ ಮಂಜುನಾಥ್ ಕೌರಿ, ಇನ್ಸ್‌ಪೆಕ್ಟರ್ ಗಳಾದ ಮೋಹನ್ ಕೊಠಾರಿ, ಯೋಗೀಶ್ ಕುಮಾರ್, ಉಡುಪಿಯ ಇನ್ಸ್‌ಪೆಕ್ಟರ್ ಗಳಾದ ಸತೀಶ್, ಜಯರಾಂ ಗೌಡ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.