(ನ್ಯೂಸ್ ಕಡಬ) newskadaba.com ಕಡಬ, ಜೂ.01. ಇಲ್ಲಿನ ಮುಖ್ಯ ರಸ್ತೆಯ ಶ್ರೀರಾಮ್ ಟವರ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ ರಾಜಧಾನಿ ಜ್ಯುವೆಲ್ಲರ್ಸ್ ಮಳಿಗೆಯು ಸುಮಾರು ಕಳೆದ 20 ದಿನಗಳಿಂದ ಬಾಗಿಲು ಮುಚ್ಚಿದ್ದು, ಉಳಿತಾಯ ಖಾತೆ ಯೋಜನೆಯಡಿ ಹಣ ಕಟ್ಟಿದ್ದ ಗ್ರಾಹಕರೋರ್ವರು ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕಡಬದಲ್ಲಿ ಕಾರ್ಯಾಚರಿಸಿ ಉತ್ತಮ ಸೇವೆಯನ್ನು ನೀಡಿದ್ದ ರಾಜಧಾನಿ ಜ್ಯುವೆಲ್ಲರ್ಸ್ ಮಳಿಗೆಯ ಸಹ ಸಂಸ್ಥೆಯು ಇತ್ತೀಚೆಗೆ ಮೆಲ್ಕಾರಿನಲ್ಲಿ ಆರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ಕಳೆದ ಸುಮಾರು 20 ದಿನಗಳಿಂದ ಕಡಬದ ಅಂಗಡಿಯನ್ನು ಮುಚ್ಚಲಾಗಿತ್ತು. ಅಂಗಡಿ ಮುಚ್ಚಿರುವುದರಿಂದ ಆತಂಕಗೊಂಡು ಅಂಗಡಿ ಮುಚ್ಚಿದೆ ಎಂದು ಸುದ್ದಿ ಹಬ್ಬಿಸಿದ್ದರಿಂದ ಆತಂಕಕ್ಕೊಳಗಾದ ಆಲಿಸ್ ಎಂಬ ಮಹಿಳೆಯು ತಾನು ಮೋಸ ಹೋಗಿದ್ದೇನೆ ಎಂದು ಹೇಳಿ ಕಡಬ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆ ನೀಡಿದ ದೂರಿನಂತೆ ಕಡಬ ಠಾಣಾ ಉಪ ನಿರೀಕ್ಷಕರಾದ ಪ್ರಕಾಶ್ ದೇವಾಡಿಗರವರು ಜ್ಯುವೆಲ್ಲರ್ಸ್ ಮಾಲೀಕರನ್ನು ಸಂಪರ್ಕಿಸಿದ್ದು, ಆ ವೇಳೆ ತಾನು ಕಡಬಕ್ಕೆ ಆಗಮಿಸಿ ಸ್ಕೀಂಗೆ ಕಟ್ಟಿರುವ ದುಡ್ಡನ್ನು ಗ್ರಾಹಕರಿಗೆ ಹಿಂತಿರುಗಿಸುವುದಾಗಿ ತಿಳಿಸಿದ್ದಾರೆ. ಅಂಗಡಿಯ ಮುಂಭಾಗದಲ್ಲಿ ಗ್ರಾಹಕರಿಗೆ ಕಾಣುವ ಹಾಗೆ ಮಾಲೀಕರ ಮೊಬೈಲ್ ಸಂಖ್ಯೆಯನ್ನು ಹಾಕಲು ಸೂಚಿಸಲಾಗಿದ್ದು, ಅದರಂತೆ ಎಲ್ಲಾ ಗ್ರಾಹಕರು ಮಾಲೀಕರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.
ಈ ಬಗ್ಗೆ ಸಂಸ್ಥೆಯ ಮ್ಯಾನೇಜರ್ ಮುನೀರ್ ರವರನ್ನು ‘ನ್ಯೂಸ್ ಕಡಬ’ ಸಂಸ್ಥೆಯು ಸಂಪರ್ಕಿಸಿದಾಗ, ಗ್ರಾಹಕರ ಸ್ಕೀಮ್ ಹಣವನ್ನು ನೀಡಲೆಂದು ಓರ್ವ ಸಿಬ್ಬಂದಿಯನ್ನು ನೇಮಕಗೊಳಿಸಲಾಗಿತ್ತಾದರೂ, ಆತ ಯಾವುದೇ ಮಾಹಿತಿ ನೀಡದೆ ಅಂಗಡಿಯನ್ನು ಬಿಟ್ಟು ತೆರಳಿರುತ್ತಾನೆ. ಗ್ರಾಹಕರಿಗೆ ನೀಡಬೇಕಾಗಿರುವ ಹಣದ ಮೌಲ್ಯದ ಚಿನ್ನವನ್ನು ಮೆಲ್ಕಾರಿನಲ್ಲಿರುವ ನಮ್ಮ ಮಳಿಗೆಯಿಂದ ಪಡೆಯಬಹುದಾಗಿದೆ. ಅಲ್ಲದಿದ್ದಲ್ಲಿ ಕೆಲವೇ ದಿನಗಳಲ್ಲಿ ನಾವು ಅಂಗಡಿಯನ್ನು ನವೀಕರಿಸಲಿದ್ದು, ಆ ಬಳಿಕ ಪಡೆದುಕೊಳ್ಳಬಹುದಾಗಿದೆ. ಗ್ರಾಹಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಹಣ ಸಿಗಲು ಬಾಕಿಯಿರುವ ಗ್ರಾಹಕರು 9448626071 ಮಾಲೀಕರಾದ ಥಾಣಾಜಿಯವರನ್ನು ಅಥವಾ ಮ್ಯಾನೇಜರ್ ಮುನೀರ್ 8111930756 ಸಂಖ್ಯೆಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.