(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.22. ಲೋಕಸಭಾ ಚುನಾವಣೆ ನಡೆದು ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು, ಮೇ 23 ಗುರುವಾರದಂದು ನಡೆಯುವ ಮತ ಎಣಿಕೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಮಂಗಳೂರು ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮತ ಎಣಿಕೆಯ ದಿನ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಿಎಪಿಎಫ್ ತುಕಡಿ ಸೇರಿ 5 ಕೆಎಸ್ ಆರ್ ಪಿ ತುಕಡಿ, 12 ಸಿಎಆರ್ ತುಕಡಿ, ಇಬ್ಬರು ಡಿಸಿಪಿ, 6 ಮಂದಿ ಎಸಿಪಿ, 17 ಮಂದಿ ಪಿಐ, 48 ಮಂದಿ ಪಿಎಸ್ಐ, 66 ಮಂದಿ ಎಎಸ್ಐ, 112 ಮಂದಿ ಹೆಡ್ ಕಾನ್ಸ್‌ಟೇಬಲ್, 224 ಮಂದಿ ಕಾನ್ಸ್‌ಟೇಬಲ್ ಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮತ ಎಣಿಕೆಯ ಕೇಂದ್ರವು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇರುವುದರಿಂದ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸಿ ಶಾಂತಿಯುತ ಮತ ಎಣಿಕೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಮಂಗಳೂರಿನಿಂದ ಉಡುಪಿಗೆ ಹಾಗೂ ಉಡುಪಿಯಿಂದ ಮಂಗಳೂರಿಗೆ ಸಂಚರಿಸುವಂತಹ ಘನ ವಾಹನಗಳು ಕಾವೂರು ಜಂಕ್ಷನ್-ಬಜ್ಪೆ-ಕಟೀಲು-ಕಿನ್ನಿಗೋಳಿ ಮಾರ್ಗವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದ್ದು, ಮಂಗಳೂರು-ಉಡುಪಿ ಸಂಚಾರ ನಡೆಸುವ ಬಸ್ ಗಳು ಎನ್ಐಟಿಕೆ ಬಳಿ ನಿಲ್ಲಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಅವರು ಅದೇಶ ನೀಡಿದ್ದಾರೆ.
ಉಡುಪಿಗೆ ಸಂಚರಿಸುವ ಲಘು ವಾಹನಗಳು ಎನ್ಐಟಿಕೆ ಲೈಟ್ ಹೌಸ್-ರೆಡ್ ಕ್ರಾಸ್ ನಲ್ಲಿ ಎಡಕ್ಕೆ ತಿರುಗಿ ಉಡುಪಿಗೆ ಸಂಚರಿಸುವಂತೆ ಸೂಚಿಸಿದ್ದು, ಉಡುಪಿಯಿಂದ ಮಂಗಳೂರಿಗೆ ಬರುವಂತಹ ಲಘು ವಾಹನಗಳು ಚೇಳ್ಯಾರು ಕ್ರಾಸ್ ನಿಂದ ಎಡಕ್ಕೆ ತಿರುಗಿ ಮಧ್ಯ ವೃತ್ತದ ಮೂಲಕ ಮುಂಚೂರು ಕ್ರಾಸ್ ನಲ್ಲಿ ಹೆದ್ದಾರಿಯನ್ನು ಸೇರುವಂತೆ ಅವರು ಮನವಿ ಮಾಡಿದ್ದಾರೆ.