(ನ್ಯೂಸ್ ಕಡಬ) newskadaba.com ಕಡಬ, ಆ.04. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅಕ್ರಮ ಆಸ್ತಿಯ ಬಗ್ಗೆ ಐಟಿ ದಾಳಿಯನ್ನು ಖಂಡಿಸಿ ಕಡಬದಲ್ಲಿ ಕಾಂಗ್ರೇಸ್ ಮಾಡಿರುವ ಪ್ರತಿಭಟನೆ ಭ್ರಷ್ಟಾಚಾರ ಪರ ಹೋರಾಟವಾಗಿದ್ದು ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಲೇವಡಿ ಮಾಡಿದ್ದಾರೆ.
ಹೇಳಿಕೆ ನೀಡಿರುವ ಅವರು ಕಳೆದ 70 ವರ್ಷಗಳಿಂದ ದೇಶವನ್ನು ಲೂಟಿ ಮಾಡಿರುವ ಕಾಂಗ್ರೇಸ್ ಮುಖಂಡರ ಅಕ್ರಮವನ್ನು ಅಧಿಕಾರಿಗಳು ತನಿಖೆ ನಡೆಸುವುದಕ್ಕೂ ಕಾಂಗ್ರೇಸ್ ಅಡ್ಡಿಪಡಿಸುತ್ತಿದೆ. ಇವರ ಹೋರಾಟ ಭ್ರಷ್ಟಾಚಾರದ ಪರವಾಗಿದೆ ಎನ್ನುವುದನ್ನು ರಾಜ್ಯದ ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದರು. ಅಂದು ಕೇಂದ್ರದಲ್ಲಿ ಆಡಳಿತದಲ್ಲಿ ಯುಪಿಎ ಸರಕಾರ ಯಡಿಯೂರಪ್ಪನವರ ಮನೆಗೆ ಕರುಣಾಕರ ರೆಡ್ಡಿಯವರ ಮನೆಗೆ ಐಟಿ ದಾಳಿ ನಡೆಸಿದಾಗ ಕಾಂಗ್ರೇಸ್ ಸತ್ಯಕ್ಕೆ ಸಂದ ಜಯ ಎಂದು ಬಣ್ಣಿಸುತ್ತಿದ್ದರು. ಆದರೆ ಕಾಂಗ್ರೇಸಿಗರ ಅಕ್ರಮ ಆಸ್ತಿಯ ವಿವರ ಬಹಿರಂಗವಾದಾಗ ಇಷ್ಟೊಂದು ಬೊಬ್ಬೆ ಹೊಡೆಯುವ ಅವಶ್ಯಕತೆ ಏನಿದೆ ಎಂದು ಹೇಳಿರುವ ಕೃಷ್ಣ ಶೆಟ್ಟಿ ಈ ದೇಶವನ್ನು ಭ್ರಷ್ಟಾಚಾರ ಮುಕ್ತ ದೇಶವನ್ನಾಗಿ ಮಾಡಬೇಕೆಂದು ಪಣತೊಟ್ಟಿರುವ ನರೇಂದ್ರ ಮೋದಿಯವರ ಕನಸನ್ನು ಸಾಕಾರಗೊಳಿಸುತ್ತಿರುವ ಅಧಿಕಾರಿಗಳು ದಾಳಿ ನಡೆಸುತ್ತಿರುವುದನ್ನು ಸ್ವಾಗತಿಸುವ ಉದಾರತೆಯನ್ನು ಕಾಂಗ್ರೇಸ್ ತೋರಲಿ. ಕಾಂಗ್ರೇಸ್, ಬಿಜೆಪಿ, ದಳ ಯಾವುದೇ ಪಕ್ಷದ ಮುಖಂಡರ ಅಕ್ರಮ ಸಂಪಾದನೆ ಮಾಡಿದವರ ಮೇಲೆ ದಾಳಿ ನಡೆಸಿದರೆ ನಾವು ಸ್ವಾಗತಿಸುತ್ತೇವೆ. ಕಾಂಗ್ರೇಸ್ ರೀತಿಯಲ್ಲಿ ಭ್ರಷ್ಟಾಚಾರದ ಪರವಾಗಿ ಹೋರಾಟ ಮಾಡುವುದಿಲ್ಲ ಎಂದಿದ್ದಾರೆ.