ಮಹಿಳೆಯರನ್ನು ಚುಡಾಯಿಸುವ ಪುಂಡು ಪೋಕರಿಗಳ ಹೆಡೆಮುರಿ ಕಟ್ಟಲು ಸಿದ್ಧವಾಗಿದೆ “ರಾಣಿ ಅಬ್ಬಕ್ಕ ಪಡೆ” ➤ ಪ್ರತೀ ತಾಲೂಕಿಗೆ ಎರಡರಂತೆ ಉತ್ಸಾಹಿ ಮಹಿಳಾ ಪೊಲೀಸರ ತಂಡ ರಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.07. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರನ್ನು ಚುಡಾಯಿಸುವ ಪುಂಡು ಪೋಕರಿಗಳ ಹೆಡೆಮುರಿ ಕಟ್ಟಲು “ರಾಣಿ ಅಬ್ಬಕ್ಕ ಪಡೆ” ಸಿದ್ಧಗೊಂಡಿದ್ದು, ಸೋಮವಾರದಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.

ಬಿ.ಸಿ.ರೋಡ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಹಿಳಾ ಪೊಲೀಸರನ್ನೊಳಗೊಂಡ “ರಾಣಿ ಅಬ್ಬಕ್ಕ ಪಡೆ”ಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ಚಾಲನೆ ನೀಡಿದರು. ಪ್ರತೀ ತಾಲೂಕಿಗೆ 06 ಜನ ಯುವ ಉತ್ಸಾಹಿ ಮಹಿಳಾ ಪೊಲೀಸ್ ಸಿಬ್ಬಂದಿಗಳಿಂದ ಕೂಡಿದ ಎರಡು ತಂಡವನ್ನು ರಚಿಸಲಾಗಿದ್ದು, ತಾಲೂಕು ಮಟ್ಟದಲ್ಲಿ ಪೊಲೀಸ್‌ ವೃತ್ತ ನಿರೀಕ್ಷಕರು ಮೇಲ್ವಿಚಾರಕಾಗಿ, ಸಹಾಯಕ ಪೊಲೀಸ್‌ ಅಧೀಕ್ಷಕರವರು ಮಾರ್ಗದರ್ಶಕರಾಗಿರುತ್ತಾರೆ. ನೀಳಿ ಬಣ್ಣದ ಟೀ-ಶರ್ಟ್‌ ಮತ್ತು ಡಾಂಗ್ರಿ ಪ್ಯಾಂಟ್‌, ಕಮಾಂಡೋ ಶೂ ಮತ್ತು ಟೋಪಿ ಸಿಬ್ಬಂದಿಯವರ ಸಮವಸ್ತ್ರವಾಗಿದ್ದು, ಪ್ರತೀ ತಾಲೂಕು ಮಟ್ಟದ ತಂಡಗಳು ರಾಣಿ ಅಬ್ಬಕ್ಕ ಪಹರೆ ಪಡೆ ವಾಹನದಲ್ಲಿ ಗಸ್ತು ತಿರುಗುತ್ತಾ ಕರ್ತವ್ಯ ನಿರ್ವಹಿಸಲಿದ್ದಾರೆ.

Also Read  ಬಿಜೆಪಿ ಯುವ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ➤   ಎನ್ ಐಎಯಿಂದ ಮತ್ತಿಬ್ಬರ ವಿರುದ್ಧ ಚಾರ್ಜ್ ಶೀಟ್..!

“ರಾಣಿ ಅಬ್ಬಕ್ಕ ಪಡೆ” ತಂಡವು ಹೆಣ್ಣುಮಕ್ಕಳು ಮತ್ತು ಮಹಿಳೆಯವರಿಗೆ ಸ್ವರಕ್ಷಣೆಯ ಬಗ್ಗೆ ಮಾಹಿತಿ ನೀಡುವುದಲ್ಲದೆ ಹಗಲು ಹೊತ್ತಿನಲ್ಲಿ ಶಾಲಾ ಕಾಲೇಜುಗಳ ಹತ್ತಿರ ರೌಂಡ್ಸ್‌ ಕರ್ತವ್ಯ ನಿರ್ವಹಿಸಿ ಬಾಲಕಿಯರಿಗೆ ರಕ್ಷಣೆ ನೀಡುವುದು, ಸಾಯಂಕಾಲದ ವೇಳೆ ವಿದ್ಯಾರ್ಥಿಗಳು ತಂಗುವ ಪಿ.ಜಿ.ಗಳು, ಹಾಸ್ಟೆಲ್‌ಗಳ ಹತ್ತಿರ ಗಸ್ತು ಕರ್ತವ್ಯ ಮಾಡುವುದು, ಕೋಟ್ಪಾ ಕಾಯ್ದೆಯನ್ವಯ ಕೇಸುಗಳನ್ನು ದಾಖಲಿಸುವುದು, ಬಸ್‌ಸ್ಟ್ಯಾಂಡ್‌ಗಳು, ರೈಲ್ವೇ ನಿಲ್ದಾಣಗಳು, ಪಾರ್ಕ್‌, ದೇವಸ್ಥಾನ, ಮಾರುಕಟ್ಟೆ ಪ್ರದೇಶಗಳು ಹಾಗೂ ಪ್ರವಾಸಿ ತಾಣಗಳ ಹತ್ತಿರ ಗಸ್ತು ತಿರುಗುವುದು, ಕಿಡಿಗೇಡಿಗಳು ಮತ್ತು ಹೆಣ್ಣುಮಕ್ಕಳನ್ನು ಚುಡಾಯಿಸುವವರ ಮೇಲೆ ಕಣ್ಣಿಟ್ಟು ಅಂತವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುವುದಲ್ಲದೆ ಜಾತ್ರೆ, ಉತ್ಸವಗಳು, ಪ್ರತಿಭಟನೆ ಮತ್ತು ಮೆರವಣಿಗೆಗಳ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸು ಅಧೀಕ್ಷಕರಾದ ವಿಕ್ರಮ್ ಆಮ್ಟೆ, ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಸೈದುಲ್ ಅದಾವತ್, ಬಂಟ್ವಾಳ ವೃತ್ತ ನಿರೀಕ್ಷಕ ಶರಣಗೌಡ ವಿ.ಹೆಚ್‌., ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್‌ ಪಿ., ಸುಳ್ಯ ವೃತ್ತ ನಿರೀಕ್ಷಕ ಸತೀಶ್‌ ಕುಮಾರ್‌, ಪುತ್ತೂರು ವೃತ್ತ ನಿರೀಕ್ಷಕ ಮಂಜುನಾಥ್‌ ಹಾಗೂ ಎಲ್ಲಾ ಪೊಲೀಸ್‌ ಉಪನಿರೀಕ್ಷಕರುಗಳು ಹಾಗೂ ಜಿಲ್ಲಾ ಮಟ್ಟದ “ರಾಣಿ ಅಬ್ಬಕ್ಕ ಪಡೆ” ತಂಡದ ಎಲ್ಲಾ ಮಹಿಳಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Also Read  ಮೂಡುಬಿದರೆ: ಸಾವಿರಕಂಬದ ಜೈನ ಬಸದಿಗೆ ಮೂರನೇ ಸ್ಥಾನ

error: Content is protected !!
Scroll to Top