ಮೂರ್ತೆದಾರರ ಸಹಕಾರಿ ಸಂಘದಿಂದ ಮರ್ಧಾಳ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಗೆ ಸಹಾಯಧನ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಆ.03. ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಮರ್ಧಾಳ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಗೆ ಸಹಾಯಧನ ನೀಡಿ ಸಹಕರಿಸಲಾಯಿತು.

ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರರವರು ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲಾ ನಿರ್ದೇಶಕರಾದ ರೆ|ಫಾ| ಆ್ಯಂಟನಿ ಒಐಸಿಯವರಿಗೆ ಸಹಾಯಧನ ಹಸ್ತಾಂತರಿಸಿ ಮಾತನಾಡಿ, ಹಣಕಾಸು ಸಂಸ್ಥೆಗಳು, ಸಹಕಾರಿ ಸಂಘಗಳು, ಉದ್ಯಮಿಗಳು ನಿಜವಾಗಿ ಸಹಕರಿಸಬೇಕಾದ ದೇವರ ಮಕ್ಕಳು ಇರುವ ಈ ಶಾಲೆಗೆ ಅತೀ ಅಗತ್ಯವಾಗಿದೆ. ಇಲ್ಲಿ ಅದೆಷ್ಟೋ ವಿವಿಧ ರೀತಿಯಲ್ಲಿ ಅಂಗವಿಕಲತೆಯನ್ನು ಹೊಂದಿರುವ ಎಲ್ಲಾ ಜಾತಿ ಧರ್ಮದ ಮಕ್ಕಳು ವಿದ್ಯಾಭ್ಯಾಸ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇಲ್ಲಿಯ ವಿಶೇಷ ಮಕ್ಕಳು ರಾಷ್ಟ್ರ ಮಟ್ಟ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಅದ್ಬುತವೇ ಸರಿ. ಇವರಿಗೆ ಎಲ್ಲರ ಪ್ರೋತ್ಸಾಹ ಅತೀ ಅಗತ್ಯವಾಗಿದೆ ಎಂದರು. ನೂಜಿಬಾಳ್ತಿಲ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸಲಹಾ ಸಮಿತಿ ಅಧ್ಯಕ್ಷ ವಸಂತ ಪುಜಾರಿ ಮಾತನಾಡಿ, ಈ ವಿಶೇಷ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ದೇವರ ಮಕ್ಕಳು, ಇಂತಹವರ ಸೇವೆಯೇ ದೇವರಿಗೆ ಸಲ್ಲುವ ನಿಜವಾದ ಸೇವೆ ನಾವು ನಮ್ಮ ದುಡಿಮೆಯಲ್ಲಿ ಅಲ್ಪ ಸಂಪತ್ತನ್ನು ಇಂತಹ ಜನಪರ ಕಾಳಜಿ ಇರುವ ಸಂಸ್ಥೆಗಳಿಗೆ ಸಹಾಯ ನೀಡಿ ಅವರನ್ನು ಪ್ರೋತ್ಸಾಹಿಸುವುದು ನಮ್ಮ ಸಂಘದ ಧ್ಯೇಯವಾಗಿದೆ ಎಂದರು.

Also Read  ಪುತ್ತೂರು :ಮೆಡಿಕಲ್‌ ಕಾಲೇಜ್‌ಗೆ ಮೀಸಲಿಟ್ಟಿದ್ದ ಜಾಗ ಸೀ ಫುಡ್‌ ಪಾರ್ಕ್‌ಗೆ ನೀಡಿದ ಸರ್ಕಾರ

ಕಡಬ ವಲಯ ಮೂರ್ತೆದಾರರ ಸಲಹಾ ಸಮಿತಿ ಅಧ್ಯಕ್ಷ ಜಿನ್ನಪ್ಪ ಸಾಲಿಯಾನ್, ಆಲಂಕಾರು ವಲಯ ಉಪಾಧ್ಯಕ್ಷ ಜಯಕರ ಪುಜಾರಿ ಮಾತನಾಡಿದರು. ಆಲಂಕಾರು ವಲಯ ಮೂರ್ತೆದಾರರ ಸೇ.ಸ.ಸಂಘದ ನಿರ್ದೇಶಕರಾದ ತಿಮ್ಮಪ್ಪ ಕರ್ಕೇರ, ಶೇಷಪ್ಪ ಪುಜಾರಿ, ಲಕ್ಷ್ಮೀಶ ಬಂಗೇರ, ಆನಂದ ಪುಜಾರಿ, ಆಲಂಕಾರು ಸಂಘದ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಪುಜಾರಿ, ಕಡಬ ಶಾಖಾಧಿಕಾರಿ ಯೋಗೀಶ್ ಉಪಸ್ಥಿತರಿದ್ದರು. ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲಾ ನಿರ್ದೇಶಕ ರೆ|ಫಾ| ಆ್ಯಂಟನಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶೇಷ ಶಾಲಾ ಮುಖ್ಯ ಶಿಕ್ಷಕಿ ಶೈಲ ವಿಶೇಷ ಶಾಲಾ ಶಿಕ್ಷಣದ ಬಗ್ಗೆ ಮಾಹಿತಿ ನೀಡಿ ವಂದಿಸಿದರು.

error: Content is protected !!
Scroll to Top