ಮಂಗಳೂರು ಮೇ 2( ನ್ಯೂಸ್ ಕಡಬ) newskadaba.com,) :- ಮೇ 1 ರಂದು ಕಾರ್ಮಿಕ ದಿನಾಚರಣೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಯೆನೆಪೋಯ ಫುಡ್ & ಬೆವರೇಜಸ್ ಇಂಡಿಯಾ ಪ್ರೈ.ಲಿ. ದೇರಳಕಟ್ಟೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಯಿತು.ಕಾರ್ಮಿಕರು ದೇಶದ ಶಕ್ತಿ, ಕಾರ್ಮಿಕರಿಗಾಗಿ ಸರ್ಕಾರ ಅನೇಕ ಕಾನೂನುಗಳನ್ನು ರೂಪಿಸಿದೆ. ಅವುಗಳ ಪ್ರಯೋಜನ ಪಡೆಯಬೇಕು. ಕಾರ್ಮಿಕರು ಮತ್ತು ಮಾಲೀಕರು ಒಬ್ಬರಿಗೊಬ್ಬರು ಸಹಕರಿಸಿ ಕೆಲಸ ಮಾಡಿದಲ್ಲಿ ಸಂಸ್ಥೆಯ ಜೊತೆಗೆ ಕಾರ್ಮಿಕ ಭದ್ರತೆಗೆ ಅನುವಾಗುತ್ತದೆ ಎಂದು ಗೌರವಾನ್ವಿತ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕಡ್ಲೂರು ಸತ್ಯನಾರಾಯಣ ಆಚಾರ್ಯ ಇವರು ಹಾಜರಿದ್ದ ಸಂಸ್ಥೆಯ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು.
ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಮಹತ್ವ, ಕಾರ್ಮಿಕರಿಗಾಗಿ ರೂಪಿಸಲಾದ ವಿವಿಧ ಕಾಯ್ದೆಗಳು, ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗಾಗಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳು, ಸರಕು ಸಾಗಾಣಿಕೆಯ ವಾಹನಗಳಲ್ಲಿ ಮಾನವ ಸಾಗಾಣಿಕೆಯ ದುಷ್ಪರಿಣಾಮಗಳ ಬಗ್ಗೆ ತಿಳಿಸುತ್ತಾ ಸರಕು ಸಾಗಾಣಿಕೆ ವಾಹನಗಳಲ್ಲಿ ಕಾರ್ಮಿಕರು ಪ್ರಯಾಣಿಸಿ ಅಪಘಾತಕ್ಕೀಡಾದಲ್ಲಿ ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ವಿವರವಾಗಿ ವಿವರಿಸುತ್ತಾ ಕಾನೂನಿನ ಅರಿವು ಪ್ರತಿಯೊಬ್ಬ ಕಾರ್ಮಿಕನಲ್ಲಿ ಇರಬೇಕು, ಎಂದು ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ.ನಾಗರಾಜ್‍ರವರು ತಿಳಿಸಿದರು.
ಯೆನೆಪೋಯ ಫುಡ್ & ಬೆವರೇಜಸ್ ಇಂಡಿಯಾ ಪ್ರೈ.ಲಿನ ಜನರಲ್ ಮ್ಯಾನೇಜರ್ ರವಿ ಖಂಡಿಗೆರವರು ಮಾತನಾಡಿ ಕಾರ್ಮಿಕರು ಮತ್ತು ಮಾಲೀಕರು ಒಮ್ಮನಸ್ಸಿನಿಂದ ಕೆಲಸ ನಿರ್ವಹಿಸಿದರೆ ಸಂಸ್ಥೆಗೆ ಒಳ್ಳೆಯ ಹೆಸರು ಹಾಗೂ ಕಾರ್ಮಿಕರಿಗೆ ಗೌರವ ದೊರೆಯುತ್ತದೆ ಎಂದರು.ಕಾರ್ಯಕ್ರಮದಲ್ಲಿ ಎ.ಜೆ.ಗಂಗಾಧರ, ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು, ವಿಲ್ಮ ಕಾರ್ಮಿಕ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಹಿರಿಯ ಕಾರ್ಮಿಕ ನಿರೀಕ್ಷಕರಾದ ವಿರೇಂದ್ರ ಕುಂಬಾರ, ಮತ್ತು ಗಣಪತಿ ಹೆಗ್ಡೆ ಭಾಗವಹಿಸಿದ್ದರು.