ಮಂಗಳೂರು ಏಪ್ರಿಲ್ 25 (ನ್ಯೂಸ್ ಕಡಬ) newskadaba.com,):- ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆಯನ್ನು ಏಪ್ರಿಲ್ 29 ಮತ್ತು 30ರಂದು ಒಟ್ಟು 13290 ವಿದ್ಯಾರ್ಥಿಗಳು ಬರೆಯಲಿದ್ದು, ಪರೀಕ್ಷೆಯನ್ನು ಸುಸೂತ್ರವಾಗಿ ನೆರವೇರಿಸಲು ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ಇವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಪರೀಕ್ಷೆಯ ವೇಳೆ ಯಾವುದೇ ರೀತಿಯ ತೊಂದರೆಗಳಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬೆಸೆಂಟ್ ಹೊರತುಪಡಿಸಿ ಕಳೆದ ಸಾಲಿನಲ್ಲಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿರುವುದರಿಂದ ಪ್ರಸಕ್ತ ಸಾಲಿನಲ್ಲೂ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿ ಎಂದು ಅಪರ ಜಿಲ್ಲಾಧಿಕಾರಿಗಳು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರುಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ತಹಸೀಲ್ದಾರರು ಮತ್ತು ಪರೀಕ್ಷೆ ನಡೆಯುವ 26 ಕಾಲೇಜುಗಳ ಪ್ರಾಂಶುಪಾಲರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆಗೆ ಸಜ್ಜಾಗುತ್ತಿರುವ ಕಾಲೇಜುಗಳಲ್ಲಿ ಮೂಲಸೌಕರ್ಯ ಒದಗಿಸಿ ಎಂಬ ಸೂಚನೆಯನ್ನು ನೀಡಿದರು. ಪರೀಕ್ಷಾ ಹಾಲ್‍ಗಳಲ್ಲಿ ಗೋಡೆ ಗಡಿಯಾರ ಕಡ್ಡಾಯವಾಗಿರಬೇಕೆಂದು ಕೇಂದ್ರಗಳ ಮುಖ್ಯಸ್ಥರಿಗೆ ಸೂಚಿಸಿದರು. ಇಲಾಖೆಗೆ ಜಿಲ್ಲಾಡಳಿತ ಎಲ್ಲ ಸಹಕಾರವನ್ನು ನೀಡಲಿದ್ದು, ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿರುವುದನ್ನು ಖಾತರಿಪಡಿಸಿಕೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ಹೇಳಿದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನೀಡಲಾಗಿರುವ ಮಾರ್ಗಸೂಚಿ ಮತ್ತು ನಿರ್ದೇಶನಗಳಿಗನುಸಾರ ವ್ಯವಸ್ಥೆಗಳನ್ನು ಮಾಡಿ, ವಿದ್ಯಾರ್ಥಿಗಳ ಅನುಕೂಲವನ್ನು ಗಮನದಲ್ಲಿರಿಸಿ ಎಂದು ಹೇಳಿದರು. ಪಿಯು ವಿಭಾಗದ ಉಪನಿರ್ದೇಶಕರಾದ ವಾಸುದೇವ ಕಾಮತ್ ಮಾಹಿತಿ ನೀಡಿ, ಮಂಗಳೂರು ತಾಲೂಕಿನಲ್ಲಿ 13, ಮೂಡಬಿದ್ರೆಯಲ್ಲಿ 8, ಬೆಳ್ತಂಗಡಿಯಲ್ಲಿ 2, ಪುತ್ತೂರಿನ 3 ಕೇಂದ್ರಗಳು ಸೇರಿದಂತ ಒಟ್ಟು 26 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು. ಜಿಲ್ಲಾ ಖಜಾನಾಧಿಕಾರಿಎಂ ಮಾಧವ ಹೆಗ್ಡೆ ಉಪಸ್ಥಿತರಿದ್ದರು.