ಕಡಬ ಪೊಲೀಸ್ ಠಾಣೆಯಲ್ಲಿ ದಲಿತರಿಗೆ ಮರೀಚಿಕೆಯಾದ ನ್ಯಾಯ..!! ➤ ಠಾಣೆಯಲ್ಲಿ ನಡೆದ ಸ್ಫೋಟದ ತನಿಖೆ ನಡೆಸದವರು ಹೇಗೆ ನ್ಯಾಯ ಒದಗಿಸುತ್ತಾರೆ..? ➤ ಕಡಬ ಪೊಲೀಸ್ ಅವ್ಯವಸ್ಥೆಯ ವಿರುದ್ದ ಉಗ್ರ ಹೋರಾಟ – ಸುಗುಣ ದೇವಯ್ಯ 

(ನ್ಯೂಸ್ ಕಡಬ) newskadaba.com ಕಡಬ, ಎ.26. ಕಡಬ ಪೋಲಿಸ್ ಠಾಣೆಯಲ್ಲಿ ದಲಿತರಿಗೆ ಯಾವುದೇ ನ್ಯಾಯ ಸಿಗುತ್ತಿಲ್ಲ, ತಿಂಗಳಿಗೊಮ್ಮೆ ನಡೆಯಬೇಕಿದ್ದ ದಲಿತ ಕುಂದು ಕೊರತೆ ಸಭೆ ನಡೆಯುತ್ತಿಲ್ಲ. ಇದರಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದೆ ನಮಗೆ ತೊಂದರೆ ಉಂಟಾಗಿದೆ. ಈ ಬಗ್ಗೆ ನಮಗೆ ನ್ಯಾಯ ಬೇಕಾಗಿದೆ ಎಂದು ದ.ಸಂ.ಸ ಸದಸ್ಯೆ ಸುಗುಣಾ ದೇವಯ್ಯ ಹೇಳಿದ್ದಾರೆ.

ಗುರುವಾರದಂದು ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕಡಬ ಪೋಲಿಸ್ ಠಾಣೆಯಲ್ಲಿ ಇತ್ತೀಚೆಗೆ ಪರಿಶಿಷ್ಟ ಜಾತಿ, ಪಂಗಡದ ಸಭೆಗಳನ್ನು ನಡೆಸುತ್ತಿಲ್ಲ. ಇದರಿಂದ ದಲಿತರಿಗಿರುವ ಯಾವುದೇ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ, ಅಲ್ಲದೆ ಮಹಿಳೆಯರಿಗೆ ಯಾವುದೇ ರೀತಿಯಲ್ಲಿ ನ್ಯಾಯ ಒದಗಿಸದ ಕಾರಣ ನಮ್ಮ ಕುಂದು ಕೊರತೆಗಳನ್ನು ಗಮನಿಸದೆ ಇರುವುದು ನಮಗೆ ಸಮಸ್ಯೆಯಾಗಿದೆ. ನಮಗೆ ನ್ಯಾಯ ಬೇಕಾಗಿದ್ದು, ನಾವು ಇದಕ್ಕಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದ ಸುಗುಣಾ ದೇವಯ್ಯ ಮಾಧ್ಯಮಗಳ ಮೂಲಕ ನಾವು ನಮ್ಮ ಬೇಡಿಕೆಗಳನ್ನು ಇಡುತ್ತೇವೆ. ಕಡಬ ಠಾಣೆಯಲ್ಲಿ ಯಾವುದೇ ರೀತಿಯಲ್ಲಿ ರಕ್ಷಣೆ ಮತ್ತು ನ್ಯಾಯ ಸಿಗುವುದಿಲ್ಲ ಎಂದರು.

ಹೊಸಮಠದಲ್ಲಿ ನಮ್ಮ ಅಂಗಡಿ ಸುಟ್ಟು ಹೋದ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ತನಿಖೆಯಾಗಲಿ ನಡೆದಿಲ್ಲ, ಅಲ್ಲದೇ ನ್ಯಾಯ ಕೇಳಲು ಹೋದಾಗ ಠಾಣಾ ಸಿಬ್ಬಂದಿಗಳು, ಮಹಿಳಾ ಸಿಬ್ಬಂದಿಗಳು ನಮ್ಮ ಮೇಲೆಯೇ ಸವಾರಿ ಮಾಡುತ್ತಾರೆ. ಹೊಸಮಠದ ನಮ್ಮ ಅಂಗಡಿ ಸುಟ್ಟು ಹೋಗಿರುವ ಬಗ್ಗೆ ಸಿಸಿ ಟಿವಿ ದೃಶ್ಯಗಳನ್ನು ತನಿಖೆ ಮಾಡಿದ್ದೇವೆ, ಸುಟ್ಟು ಹೋದ ಮಣ್ಣನ್ನು ಪ್ರಯೋಗಾಲಕ್ಕೆ ಕಳುಹಿಸುತ್ತೇವೆ ಎಂದು ಹೇಳಿದ್ದರು. ಈ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಕಡಬ ಆರಕ್ಷಕ ಠಾಣೆಯ ಹಳೆ ಕಟ್ಟಡದಲ್ಲಿ ಸ್ಪೋಟ ಸಂಭವಿಸಿದ್ದರೂ ಅದರ ತನಿಖೆ ಇದುವರೆಗೆ ಆಗಿಲ್ಲ, ಇನ್ನು ನಮ್ಮ ಸುಟ್ಟು ಹೋದ ಅಂಗಡಿಯ ಬಗ್ಗೆ ಏನು ತನಿಖೆ ಮಾಡುತ್ತಾರೆ, ಕುಟ್ರುಪ್ಪಾಡಿಯಲ್ಲಿ ನಡೆಯುವ ಬಿಟ್ ಪೋಲೀಸ್ ಸಭೆಯನ್ನು ಗ್ರಾಮದಲ್ಲಿ ಕಾಟಾಚಾರಕ್ಕೆ ನಡೆಸಿದರೂ ಅದರ ಸದಸ್ಯರಾಗಿರುವ ನಮ್ಮನ್ನು ಕರೆಯುವುದಿಲ್ಲ. ಅಲ್ಲದೇ ಅವರಿಗೆ ಬೇಕಾದ ಜನರನ್ನು ಕರೆಸಿ ಬೀಟ್ ಪೊಲೀಸ್ ಸಭೆ ನಡೆಸುತ್ತಿದ್ದಾರೆ. ತಿಂಗಳಿಗೊಮ್ಮೆ ನಡೆಯುವ ಪರಿಶಿಷ್ಟ ಜಾತಿ/ಪಂಗಡದ ಸಭೆ ನಡೆಸದೇ ನಮಗೆ ಸಿಗುವ ಕಾನೂನು ಮಾಹಿತಿಯನ್ನು ನೀಡದೇ ಅದರ ಬಗ್ಗೆ ಅರಿವು ಮೂಡಿಸುವುದಿಲ್ಲ ಎಂದರು.

Also Read  ಅಗ್ನಿ ಚಿತ್ರಕಲೆಯ ಮೂಲಕ ವಿಶ್ವ ದಾಖಲೆ ಮಾಡಿದ ಗ್ರಾಮೀಣ ಪ್ರತಿಭೆ ಪರೀಕ್ಷಿತ್‌‌ ನೆಲ್ಯಾಡಿ

ಬಿಳಿನೆಲೆಯಲ್ಲಿ ಹುಡುಗಿಯೋರ್ವಳಿಗೆ ಲೈಂಗಿಕ ಕಿರುಕುಳ ನಡೆದಾಗಲೂ ಸತ್ಯಾ ಸತ್ಯತೆಯನ್ನು ಪೋಲಿಸರ ಗಮನಕ್ಕೆ ತಂದರೂ ಅದನ್ನು ಪರಿಶೀಲಿಸದೆ ಅದನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ.  ಕೆಲ ದಿನಗಳ ಹಿಂದೆ ಸಾರ್ವಜನಿಕವಾಗಿ ವೃದ್ದರ ಮೇಲೆ ದಬ್ಬಾಳಿಕೆ ಮಾಡುವ ಆರಕ್ಷಕ ಠಾಣೆ ನಮಗೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದ ಅವರು ನ್ಯಾಯ ಸಿಗದಿದ್ದರೆ ಮುಂದಿನ ದಿನದಲ್ಲಿ ಕಡಬ ಠಾಣೆಯ ಪೋಲಿಸ್ ಅವ್ಯವಸ್ಥೆಯ ವಿರುದ್ಧ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.

Also Read  ದ.ಕ. ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಬೆಳ್ಳಿಪ್ಪಾಡಿ ಸಂಕಪ್ಪ ರೈ ಇನ್ನಿಲ್ಲ

ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ತಾಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಕಾರ್ಯದರ್ಶಿ ಜಯಶ್ರೀ, ಚಿನ್ನಮ್ಮ ಹೊಸಮಠ, ದಲಿತ ಮುಖಂಡ ಗುರುವಪ್ಪ ಕಲ್ಲುಗುಡ್ಡೆ, ವಿ.ಕೆ.ಕಡಬ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top