ಡಾ. ರಾಜ್‍ಕುಮಾರ್ 91ನೇ ಜನ್ಮದಿನಾಚರಣೆ

ಮಂಗಳೂರು ಏಪ್ರಿಲ್ 24 (ನ್ಯೂಸ್ ಕಡಬ) newskadaba.com,):- ಕನ್ನಡದ ಮೇರುನಟ ಡಾ ರಾಜ್ ಕುಮಾರ್ ತಮ್ಮ ಬದುಕಿನುದ್ದಕ್ಕೂ ಶ್ರದ್ಧೆ, ಸರಳತೆ ಮತ್ತು ಮಾನವೀಯತೆಯಿಂದ ಕನ್ನಡಿಗರ ಮನಗೆದ್ದವರು; ನಟನೆಯ ಜೊತೆಗೆ ಸಮಾಸೇವೆಯಲ್ಲಿ ತನ್ನನ್ನು ತಾನೂ ತೊಡಗಿಸಿಕೊಂಡವರೆಂಬುದನ್ನು ಸ್ಮರಿಸಿದ ದಕ್ಷಿಣ ಕನ್ನಡ ಜಿಲ್ಲಾ ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಮೈಸೂರಿನಲ್ಲಿ ಡಾ ರಾಜ್ ಅವರು ಆರಂಭಿಸಿದ ಅಬಲಾಶ್ರಮ ಇಂದಿಗೂ ಸೇವಾಮುಖಿಯಾಗಿರುವುದನ್ನು ವಿವರಿಸಿದರು. ಕಲಾ ಸೇವೆಯ ಜೊತೆಗೆ ಕನ್ನಡಕ್ಕಾಗಿ ಇವರು ನೀಡಿದ ಕೊಡುಗೆ ಸದಾ ಸ್ಮರಣೀಯ ಎಂದು ಹೇಳಿದರು.ಇವರು ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಂಗಳೂರು ಹಾಗೂ ಶ್ರೀನಿವಾಸ್ ಶಿಕ್ಷಣ ಮಹಾವಿಶ್ವವಿದ್ಯಾನಿಲಯ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀನಿವಾಸ್ ಮಹಾವಿಶ್ವವಿದ್ಯಾನಿಲಯ ಕಾಲೇಜು ಪಾಂಡೇಶ್ವರ ಇಲ್ಲಿ ನಡೆದ ಡಾ ರಾಜ್ ಕುಮಾರ್ 91 ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಕನ್ನಡದ ಮನಸ್ಸುಗಳಲ್ಲಿ ಅಚ್ಚಳಿಯದೆ ನಿಂತು ಚಲನಚಿತ್ರ ರಂಗದಲ್ಲಿ ಆರು ದಶಕಗಳಿಗೂ ಮಿಕ್ಕಿ ಜನಾದರವನ್ನು ಕಾಪಾಡಿಕೊಂಡ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ವಿಜೇತ ರಾಜ್ ಕುಮಾರ್, ಅವರ ಸರಳ, ಮುಗ್ಧ ಮಾನವಪ್ರೇಮ ಅವರನ್ನು ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿಸಿತು. ಯೋಗಿಯಂತೆ ಅವರು ಬದುಕಿದರು. ಅವರ ಚಿತ್ರಗಳೆಲ್ಲವೂ ಸಾಮಾಜಿಕ ಕಳಕಳಿ ಹಾಗೂ ನೀತಿಯುತ ಸಂದೇಶಗಳನ್ನೊಳಗೊಂಡಿದ್ದು, ನಮ್ಮ ಸಮಾಜದ ಮೇಲೆ ಬೀರಿದ ಪ್ರಭಾವವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಆಕಾಶವಾಣಿಯ ಡಾ ಶರಬೇಂದ್ರ ಸ್ವಾಮಿ ಇವರು ಮಾತನಾಡಿ, ಮುತ್ತುರಾಜ್ ಡಾ ರಾಜ್‍ಕುಮಾರ್ ಆಗಿ ಬೆಳೆದ ರೀತಿಯನ್ನು ವಿವರಿಸಿದರು. ತನ್ನ ಅದ್ಭುತ ನಟನೆಯ ಜೊತೆಗೆ ಇಂಪಿನ ಕಂಠದ ಗಾಯನದ ಮೂಲಕ ಎಲ್ಲರನ್ನೂ ಸೆಳೆದ ಅಪ್ರತಿಮ ಕಲಾವಿದ ಡಾ ರಾಜ್ ಕುಮಾರ್ ಎಂದು ಹೇಳಿದರು.ಕನ್ನಡಿಗರ ಮನ:ಪಠಲದಲ್ಲಿ ಸದಾಕಾಲ ಹಸಿರಾಗಿ ಉಳಿಯುವ ನಟ ಸಾರ್ವಭೌಮ ರಾಜ್ ಕುಮಾರ್ ಎಂದ ಅವರು, ಕನ್ನಡ ನಾಡುನುಡಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು. ಡಾ ರಾಜ್‍ಕುಮಾರ್ ಅವರ ಚಿತ್ರಗಳನ್ನು ನೋಡಿಯೇ ಬೆಳೆದ ಶ್ರೀನಿವಾಸ್ ಶಿಕ್ಷಣ ಮಹಾವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲರಾದ ಡಾ ಜಯಶ್ರೀ ಕೆ ಬೋಳಾರ ಮಾತನಾಡಿ, ತಮ್ಮ ಪೋಷಕರೊಂದಿಗೆ ಮೌಲ್ಯಯುತವಾದ ರಾಜ್ ಕುಮಾರ್ ಅವರ ಚಿತ್ರಗಳನ್ನು ನೋಡಿ ಬೆಳೆದಿರುವುದನ್ನು ಸ್ಮರಿಸಿಕೊಂಡರು. ಸಮಾರಂಭದಲ್ಲಿ ü ಹಿನ್ನಲೆ ಗಾಯಕ ಪ್ರಶಾಂತ್ ಡಾ ರಾಜ್ ಕುಮಾರ್ ಅವರ ಹಾಡನ್ನು ಹಾಡಿ ರಂಜಿಸಿದರು. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀನಿವಾಸ್ ಮಹಾವಿಶ್ವವಿದ್ಯಾನಿಲಯ ಕಾಲೇಜು ಉಪನ್ಯಾಸಕರಾದ ಡಾ ವಿಜಯಲಕ್ಷ್ಮಿ ನಾಯಕ್ ವಂದಿಸಿದರು. ವಾರ್ತಾ ಇಲಾಖೆಯ ಕುಮಾರಿ ಶ್ವೇತಾ ಎಲ್ ಇವರು ಕಾರ್ಯಕ್ರಮ ನಿರ್ವಹಿಸಿದರು.

error: Content is protected !!
Scroll to Top