ಕಡಬ: ವೃದ್ಧನಿಗೆ ಹಲ್ಲೆ ನಡೆಸಿದ ಪೊಲೀಸ್ ವಿರುದ್ಧ ಶಿಸ್ತುಕ್ರಮ – ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ➤ ಪ್ರಕರಣವನ್ನು ಮುಚ್ಚುವ ಹುನ್ನಾರ – ನೀತಿ ತಂಡ ಆರೋಪ ➤ ರಾಮಣ್ಣ ಗೌಡ ಪರ ರಂಗಕ್ಕಿಳಿದ ಕಡಬ ತಾಲೂಕು ಒಕ್ಕಲಿಗ ಗೌಡ ಸಂಘ

(ನ್ಯೂಸ್ ಕಡಬ) newskadaba.com ಕಡಬ, ಎ.24. ಮಾನಸಿಕವಾಗಿ ಅಸ್ವಸ್ಥರಾಗಿರುವ ವ್ಯಕ್ತಿಗೆ ಕಡಬ ಪೋಲೀಸ್ ಸಿಬ್ಬಂದಿ ಹಲ್ಲೆ ನಡೆಸಿರುವ ಪ್ರಕರಣದಲ್ಲಿ ಪೋಲೀಸ್ ಸಿಬ್ಬಂದಿಯ ವಿರುದ್ಧ ಶಿಸ್ತುಕ್ರಮ ಜರಗಿಸಲಾಗಿದೆ ಎಂದು ಜಿಲ್ಲಾ ಪೋಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಡಬ ಕಡಂಬಳಿತ್ತಾಯ ದೈವದ ಜಾತ್ರೆ ಸಂದರ್ಭ ಕಡಬ ಪೋಲೀಸ್ ಠಾಣಾ ಸಿಬ್ಬಂದಿಯೊಬ್ಬರು ಮಾನಸಿಕ ಅಸ್ವಸ್ಥ ವೃದ್ಧರ ಮೇಲೆ ಲಾಠಿಯಿಂದ ಹಲ್ಲೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷರಿಂದ ವಿಚಾರಣೆ ನಡೆಸಲಾಗಿದೆ ಎಂದಿದ್ದಾರೆ. ರಾಮಣ್ಣ ಗೌಡ ಎಂಬವರು ಜಾತ್ರೆ ಸಂದರ್ಭದಲ್ಲಿ ಅಮಲು ಪದಾರ್ಥ ಸೇವಿಸಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಕೈಯಲ್ಲಿ ಕಲ್ಲು ಹಿಡಿದು ತೊಂದರೆ ಪಡಿಸುತ್ತಿದ್ದರು. ಅಲ್ಲದೆ ರಕ್ಷಣಾ ಸಿಬ್ಬಂದಿಗಳಿಗೆ ತೊಂದರೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕಡಬ ಪೋಲೀಸ್ ಠಾಣಾ ಸಿಬ್ಬಂದಿಯವರು ರಾಮಣ್ಣ ಗೌಡರನ್ನು ಸ್ಥಳದಿಂದ ತೆರವು ಮಾಡಲು ಹೋದಾಗ ಮಹಿಳಾ ಸಿಬ್ಬಂದಿಯ ಮೇಲೆ ತೆಂಗಿನ ಕಾಯಿ ಬಿಸಾಡಿ ಗಾಯಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಿಬ್ಬಂದಿಯು ಸಂಭಾವ್ಯ ಅನಾಹುತ ತಪ್ಪಿಸುವ ಉದ್ದೇಶದಿಂದ ಎರಡೇಟು ಹೊಡೆದಿರುವುದು ವಿಚಾರಣೆ ವೇಳೆ ತಿಳಿದು ಬಂದಿರುತ್ತದೆ. ಸಿಬ್ಬಂದಿಯವರು ವೃದ್ಧನನ್ನು ಠಾಣೆಗೆ ಕರೆಸಿ ಮುಂದಿನ ಕ್ರಮ ಕೈಗೊಳ್ಳದೆ, ಅಥವಾ ಆಸ್ಪತ್ರೆಗೆ ದಾಖಲಿಸದೇ ಇರುವುದು ಕಂಡು ಬಂದಿದೆ. ಈ ಕಾರಣದಿಂದಾಗಿ ಸಿಬ್ಬಂದಿಯ ವಿರುದ್ಧ ಶಿಸ್ತುಕ್ರಮ ಜರಗಿಸಲಾಗಿದೆ ಎಂದು ಪೋಲೀಸ್ ವರಿಷ್ಠಾಧಿಕಾರಿಯವರು ತಿಳಿಸಿದ್ದಾರೆ. ಆದರೆ ಏನು ಶಿಸ್ತುಕ್ರಮ ಎನ್ನುವುದನ್ನು ಮಾತ್ರ ಪ್ರಕಟಿಸಿಲ್ಲ.

Also Read  Totolotek Renomowane Zakłady Bukmacherskie Z Tradycj


ಪ್ರಕರಣ ಮುಚ್ಚುವ ಹುನ್ನಾರ – ನೀತಿ ತಂಡ ಆರೋಪ:
ರಾಮಣ್ಣ ಗೌಡರಿಗೆ ಹಲ್ಲೆ ನಡೆಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಾಮಾಜಿಕ ಸಂಘಟನೆಯಾದ ನೀತಿ ತಂಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರ ನಡೆಯನ್ನು ಖಂಡಿಸಿದೆ. ಹೇಳಿಕೆ ನೀಡಿರುವ ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್, ಪೋಲೀಸ್ ಸಿಬ್ಬಂದಿ ಪಂಪಾಪತಿ ಅಮಾನವೀಯ ಕೃತ್ಯವೆಸಗಿರುವುದನ್ನು ಇಲಾಖೆ ಸಮರ್ಥಿಸಿಕೊಳ್ಳಲು ಹೊರಟಿದೆ. ಮಾತ್ರವಲ್ಲ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಸುತ್ತಿದೆ. ಪೋಲೀಸ್ ಇಲಾಖೆ ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಿದರೂ ನಾವೂ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಇದರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ. ಮಾತ್ರವಲ್ಲ ಕಡಬ ತಾಲೂಕು ಒಕ್ಕಲಿಗ ಗೌಡ ಸಂಘ ಕೂಡಾ ರಂಗಕ್ಕಳಿದಿದೆ. ಮಂಗಳವಾರ ಸಭೆ ನಡೆಸಿರುವ ಸಂಘ ರಾಮಣ್ಣ ಗೌಡರಿಗೆ ನ್ಯಾಯ ಒದಗಿಸುವ ತನಕ ವಿರಮಿಸುವುದಿಲ್ಲ. ಪೋಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸದಿದ್ದಲ್ಲಿ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಸಿದೆ.

Also Read  ಕೇಂದ್ರ ರೈಲ್ವೇ ಸಚಿವ ಶ್ರೀ.ಪಿಯೂಶ್ ಗೋಯಲ್ ಇವರ ಭೇಟಿಯಾದ ➤ ಸಂಸದ ನಳಿನ್ ಕುಮಾರ್ ಕಟೀಲ್

error: Content is protected !!
Scroll to Top