ಲಂಚದ ಆರೋಪ ಆಧಾರ ರಹಿತ ► ಬಿಳಿನೆಲೆ ಗ್ರಾ.ಪಂ ಅಧ್ಯಕ್ಷರ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಕಡಬ, ಆ.02. ಕಟ್ಟಡ ಪರವಾನಗಿ ನೀಡಲು ಲಂಚ ಕೇಳಿದ್ದಾರೆ ಎಂದು ಉದ್ಯಮಿ ಕೆ.ಟಿ. ತೋಮ್ಸನ್ ಮಾಡಿರುವ ಅರೋಪ ಆಧಾರ ರಹಿತವಾಗಿದ್ದು, ಈ ವಿಚಾರದಲ್ಲಿ ಯಾವುದೇ ಸತ್ಯ ಪ್ರಮಾಣಕ್ಕೆ ಸಿದ್ದ ಎಂದು ಬಿಳಿನೆಲೆ ಗ್ರಾ.ಪಂ ಅಧ್ಯಕ್ಷೆ ಶಾರದ ದಿನೇಶ್ ಹೇಳಿದರು.

ಅವರು ಬುಧವಾರ ಕಡಬ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಪಂಚಾಯಿತಿ ಸದಸ್ಯಳಾಗಿ ಅಧ್ಯಕ್ಷಳಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪುರಕವಾಗಿ ಕೆಲಸ ಮಾಡುತ್ತಿದ್ದೆನೆ. ನಾನು ಉತ್ತಮ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಿದ್ದರೂ ಕಟ್ಟಡ ಪರವಾಣಿಗೆ ನೀಡಲು ಹತ್ತು ಸಾವಿರ ರೂ. ಲಂಚ ಕೇಳಿದ್ದೇನೆ ಎಂದು ತೋಮ್ಸ್‌ನ್ ಅವರು ಆಧಾರರಹಿತ ಸುಳ್ಳು ಆರೋಪವನ್ನು ಮಾಡಿ ನನ್ನ ತೇಜೋವಧೆ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡಿದ್ದಾರೆ. ಈ ಬಗ್ಗೆ ಅವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದರು.
ನನ್ನ ಮೇಲೆ ಆರೋಪ ಮಾಡಿದವರಿಗೆ ದೇವರ ಮೇಲೆ ನಂಬಿಕೆಯಿದ್ದರೆ ಯಾವುದೇ ದೈವಸ್ಥಾನ, ದೇವಸ್ಥಾನ, ಚರ್ಚ್, ಮಸೀದಿಗೆ ಪ್ರ್ರಮಾಣಕ್ಕೆ ಬರುವುದಾದರೆ ನಾನು ಸಿದ್ದ ಎಂದು ಸವಾಲು ಹಾಕಿದ ಅವರು ಆರೋಪ ಸಾಬೀತು ಪಡಿಸಿದರೆ ನಾನು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ರಾಜಕೀಯ ನಿವೃತಿ ಪಡೆಯುತ್ತೇನೆ ಎಂದರು.

Also Read  ಉಡುಪಿ: KSRTC ಬಸ್ ಢಿಕ್ಕಿ   ➤ ಪಾದಚಾರಿ ಮೃತ್ಯು

ತೋಮ್ಸ್‌ನ್ ಅವರು 6-7-17 ರಂದು ಮೇರೊಂಜಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಆ ಬಳಿಕ ಗ್ರಾ,ಪಂನಲ್ಲಿ ಸಾಮಾನ್ಯ ಸಭೆ ನಡೆದಿರುವುದಿಲ್ಲ. ಕಟ್ಟಡ ಕಟ್ಟಲು ಯಾವುದೇ ವಿಚಾರದಲ್ಲಿ ಅರ್ಜಿ ಸಲ್ಲಿಸಿದಾಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಸಾಮಾನ್ಯ ಸಭೆಯಲ್ಲಿ ಮಂಡಿಸಿ ದಾಖಲಾತಿಗಳನ್ನು ಪರಿಶೀಲಿಸಿ ನಿರ್ಣಯ ಕೈಗೊಂಡು ಪರವಾನಿಗೆ ನೀಡುವುದು ಪಂಚಾಯಿತಿ ವ್ಯವಸ್ಥೆ. ಆದರೆ ತೋಮ್ಸನ್ ಅರ್ಜಿ ಸಲ್ಲಿಸಿದ ಬಳಿಕ ಅವರು ನಿರ್ಮಿಸುವ ಕಟ್ಟಡದಲ್ಲಿ ಮದ್ಯದಂಗಡಿ ತೆರೆಯಲು ಹುನ್ನಾರ ನಡೆಸಲಾಗುತ್ತಿದೆ ಎಂದು ಸಾರ್ವಜನಿಕರು ಹಾಗೂ ವಿವಿಧ ಸಂಘಸಂಸ್ಥೆಗಳು ಪರವಾನಿಗೆ ನೀಡದಂತೆ ಮನವಿ ಸಲ್ಲಿಸಿದ್ದವು. ಆ ಮೇಲೆ ಗ್ರಾಮ ಸಭೆಯಲ್ಲೂ ವಿರೋಧ ವ್ಯಕ್ತವಾಗಿ ಮದ್ಯಮುಕ್ತ ಗ್ರಾಮವಾಗಬೇಕೆಂದು ನಿರ್ಣಯ ಕೈಗೊಳ್ಳಲಾಗಿತ್ತು. ಕಟ್ಟಡ ನಿರ್ಮಾಣ ಮಾಡಲು ಪಂಚಾಯತ್ನಿಂದ ಪರವಾನಿಗೆ ನೀಡದಿದ್ದರೂ ತೋಮ್ಸನ್ರವರು ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ಇದನ್ನು ನಿಲ್ಲಿಸಲು ಪಂಚಾಯತ್ ವತಿಯಿಂದ ನೋಟಿಸು ನೀಡಿದರೂ ಕ್ಯಾರೆ ಅನ್ನಲಿಲ್ಲ. ಇದರ ವಿರುದ್ದ ಸಾರ್ವಜನಿಕರು ಕಟ್ಟಡ ನಿರ್ಮಾಣ ಸ್ಥಳಕ್ಕೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಕಡಬ ತಹಸೀಲ್ದಾರ್ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿದ್ದರು. ಆದರೂ ಕಟ್ಟಡ ನಿರ್ಮಾಣ ಕಾರ್ಯವನ್ನು ಮತ್ತೆ ಮುಂದುವರಿಸಿದ್ದಾರೆ. ನಾವು ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಶರತ್ತುಬದ್ದ ಪರವಾನಿಗೆ ನೀಡಲು ಬದ್ದರಿದ್ದೆವೆ, ಆದರೆ ಅವರು ವಿನಾ ಕಾರಣ ಆರೋಪಗಳನ್ನು ಮಾಡುತ್ತಾ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ ಅಧ್ಯಕ್ಷರು ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಿದ ದಿನ ತೋಮ್ಸನ್ ಹಾಗೂ ಅವರ ಮಕ್ಕಳಿಗೆ ಹಲ್ಲೆ ಮಾಡಲು ಮಹಿಳೆಯರ ಗುಂಪು ಯತ್ನಿಸಿದೆ ಎಂದು ಸುಳ್ಳು ಆರೋಪ ಮಾಡಿರುವುದಲ್ಲದೆ, ಅಮಾಯಕ ಮಹಿಳೆಯರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನಮ್ಮ ಮೇಲೆ ಆರೋಪ ಮಾಡುವವರು ಸ್ಪಷ್ಠ ಸಾಕ್ಷಾಧಾರಗಳೊಂದಿಗೆ ಸಾಬೀತು ಮಾಡಬೇಕು. ಇಲ್ಲದಿದ್ದರೆ ಅವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.

Also Read  ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಕಚೇರಿ ಸ್ಥಳಾಂತರ

ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಮೇಫಿ ಚೆರಿಯನ್, ಸದಸ್ಯರಾದ ಮನೋಜ್ ಕುಮಾರ್, ಸತೀಶ್ ಕಳಿಗೆ, ಪ್ರಮುಖರಾದ ವಿನೇಶ್, ಸುಖೇಶ್, ಶೈಲಾ, ರಮ್ಯ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top