ಬೆಳಂದೂರು ಬಿಜೆಪಿ ವತಿಯಿಂದ ಆಲಂಕಾರು ಮೆಸ್ಕಾಂ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ➤ ಕೃಷಿ ಉಳಿಸುವುದಕ್ಕಾಗಿ ರಕ್ತ ಕೊಟ್ಟಾದರೂ ವಿದ್ಯುತ್ ಪಡೆಯುತ್ತೇವೆ – ದಯಾನಂದ ಗೌಡ ಆಲಡ್ಕ

(ನ್ಯೂಸ್ ಕಡಬ) newskadaba.com ಕಡಬ, ಮಾ.31. ಇಲ್ಲಿನ ಆಲಂಕಾರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 110ಕೆವಿ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಕೆಪಿಟಿಸಿಎಲ್ ಮೀನಾಮೇಷಾ ಎಣಿಸುತ್ತಿದ್ದು, ಕಳೆದ ಹಲವು ದಿನಗಳಿಂದ ಆಲಂಕಾರು, ಕುಂತೂರು, ಪೆರಾಬೆ ಗ್ರಾಮಗಳ ವ್ಯಾಪ್ತಿಯಲ್ಲಿ ಬಹಳಷ್ಟು ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಗುಣಮಟ್ಟದ ವಿದ್ಯುತ್ ನೀಡದೆ ಇರುವುದರಿಂದಾಗಿ ರೈತಾಪಿ ಜನತೆಗೆ ತಮ್ಮ ಕೃಷಿಯನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ರೈತ ಬೆಳೆದ ಕೃಷಿಯನ್ನು ಉಳಿಸುವುದಕ್ಕಾಗಿ ರಕ್ತವನ್ನು ಕೊಟ್ಟಾದರು ವಿದ್ಯುತ್ತನ್ನು ಪಡೆದೇ ಪಡೆಯುತ್ತೇವೆ ಎಂದು ಮಾಜಿ ತಾ. ಪಂಚಾಯತ್ ಸದಸ್ಯ ದಯಾನಂದ ಗೌಡ ಆಲಡ್ಕ ಹೇಳಿದರು.

ಅವರು ಶನಿವಾರದಂದು ಆಲಂಕಾರು ಮೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಬಿಜೆಪಿ ಸುಳ್ಯ ಮಂಡಲದ ಬೆಳಂದೂರು ಶಕ್ತಿ ಕೇಂದ್ರದ ಆಶ್ರಯದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಇಂದು ಶಾಂತಿಯುತ ಪ್ರತಿಭಟನೆಗೆ ನಾವು ಇಳಿದಿದ್ದೇವೆ. ಮುಂದಿನ 10 ದಿನಗಳಲ್ಲಿ ವಿದ್ಯುತ್ ಸಮಸ್ಯೆಯನ್ನು ನಿವಾರಿಸದಿದ್ದಲ್ಲಿ ಉಗ್ರ ಹೋರಾಟವನ್ನು ಮೆಸ್ಕಾಂ ಕಚೇರಿ ಮುಂದೆ ಮಾಡಲಾಗುವುದಲ್ಲದೆ ಮುತ್ತಿಗೆಯನ್ನು ಹಾಕಲಾಗುವುದು ಎಂದು ಎಚ್ಚರಿಸಿದರು. ಇದೇ ವೇಳೆ ಆಲಂಕಾರು ಶಾಂತಿಮೊಗರು ರಸ್ತೆಯನ್ನು ಸಾಂಕೇತಿಕವಾಗಿ ಬಂದ್ ಮಾಡುವ ಮೂಲಕ ರಸ್ತೆ ಬಂದ್ ಮಾಡುತ್ತೇವೆ ಎಂಬ ಎಚ್ಚರಿಕೆಯ ಮನವಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡಲಾಯಿತು.

Also Read  ಅನಾರೋಗ್ಯ ಪೀಡಿತ ಮಹಿಳೆಗೆ ಸರ್ವೆ ಯುವಕ ಮಂಡಲದಿಂದ ಧನಸಹಾಯ

ಅಂದು ಆಧಿಕಾರಕ್ಕೆ ಬರುವ ಮೊದಲು ರೈತರಿಗೆ 24 ಗಂಟೆಯು ಗುಣಮಟ್ಟದ ವಿದ್ಯುತ್‍ನ್ನು ನೀಡುತ್ತೇವೆ ಎಂದು ಬೊಗಳೆ ಬಿಟ್ಟ ಮುಖ್ಯಮಂತ್ರಿಗಳು ಇದೀಗ ಎಲ್ಲಿ ಅಡಗಿದ್ದಾರೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಕೇವಲ ಅಧಿಕಾರದ ಆಸೆಯಿಂದ ಜನತೆಗೆ ಪುಕ್ಕಟೆ ಭರವಸೆ ಕೊಟ್ಟರೆ ಸಾಲದು. ಅದನ್ನು ಕಿಂಚಿತ್ತಾದರು ಅನುಷ್ಠಾನಗೊಳಿಸುವಲ್ಲಿ ಪ್ರಯತ್ನಿಸಬೇಕು. ನಮಗೆ ದಿನದ 24 ಗಂಟೆಯು ವಿದ್ಯುತ್ ಬೇಡ. ಇದೀಗ ಕೊಡುತ್ತಿರುವ ವಿದ್ಯುತ್‍ನಲ್ಲೇ ಗುಣಮಟ್ಟದ ವಿದ್ಯುತ್ ನೀಡಿ. ರೈತರಿಗೆ ಸಮರ್ಪಕ ವಿದ್ಯುತ್ ನೀಡದೆ ನೀವು ವಿದ್ಯುತ್ ಉಳಿತಾಯ ಮಾಡಿ ಪ್ರಶಸ್ತಿಗೆ ಪ್ರಯತ್ನಿಸುತ್ತಿದ್ದೀರಿ ಎಂದು ಪ್ರತಿಭಟನಾಕಾರರು ಮೆಸ್ಕಾಂ ಶಾಖಾಧಿಕಾರಿಗಳನ್ನು ಆಗ್ರಹಿಸಿದರು. ನಿಗದಿತ ದಿನದೊಳಗೆ ವಿದ್ಯುತ್ ಸಮಸ್ಯೆ ನಿವಾರಣೆಯಾಗದಿದ್ದಲ್ಲಿ ಮುಂದಿನ ದಿನದ ಮನೆಯ ವಿದ್ಯುತ್ ಬಿಲ್ಲನ್ನು ಪಾವತಿಸುವುದಿಲ್ಲ. ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಬರುವ ಲೈನ್‍ಮ್ಯಾನ್‍ಗಳನ್ನೇ ಮನೆಯಲ್ಲಿ ಕಟ್ಟಿಹಾಕುತ್ತೇವೆ. ಅದನ್ನು ಕೇಳಲು ಯಾವ ಮೇಲಾಧಿಕಾರಿಯು ಬಂದರೂ ಅವರನ್ನು ಬಿಡದೆ ಕಟ್ಟಿ ಹಾಕುತ್ತೇವೆ ಎಂದು ಎಚ್ಚರಿಸಿದರು.

ಆಲಂಕಾರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ 110 ಸಬ್ ಸ್ಟೇಷನ್ ವಿಳಂಬಕ್ಕೆ ನಾವು ಕಾರಣರಲ್ಲ. ಕೆಪಿಟಿಸಿಎಲ್ ಸಬ್ ಸ್ಟೇಷನ್ ನಿರ್ಮಾಣದ ಕಾರ್ಯವನ್ನು ಮಾಡಬೇಕಾಗಿದೆ. ಈಗಾಗಲೇ ಈ ಕಾಮಗಾರಿಯ ಸರ್ವೇ ಕಾರ್ಯವು ನಡೆಯುತ್ತಿದೆ. ಸರ್ವೇ ಕಾರ್ಯಕ್ಕೆ ಹಲವಾರು ಅಡ್ಡಿ ಆತಂಕಗಳು ಎದುರಾಗಿದೆ. ಈಗಿರುವ ವಿದ್ಯುತ್ ಬೇಡಿಕೆಯಂತೆ ಈ ಭಾಗಕ್ಕೆ 37ಮೆಗಾವ್ಯಾಟ್ ವಿದ್ಯುತ್ ಅವಶ್ಯಕತೆಯಿದೆ. ಆದರೆ ಕೇವಲ 20 ಮೆಗಾ ವ್ಯಾಟ್ ವಿದ್ಯುತ್ ಮಾತ್ರ ಸರಬರಾಜಾಗುತ್ತದೆ. ಉಳಿದ ವಿದ್ಯುತನ್ನು ಸರಿಹೊಂದಿಸುವುದಕ್ಕಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಈ ಭಾಗದ ಜನತೆಯ ಭವಣೆಗಳನ್ನು ಮೇಲಾಧಿಕಾರಿಗಳಿಗೆ ಮನವರಿಕೆ ಮಾಡಲಾಗುವುದು ಎಂದು ಆಲಂಕಾರು ಮೆಸ್ಕಾಂ ಶಾಖಾಧಿಕಾರಿ ಗೌತಂ ಪ್ರತಿಭಟನಾಕಾರರಿಗೆ ಭರವಸೆಯಿತ್ತರು. ಪ್ರತಿಭಟನೆಯಲ್ಲಿ ಕುಂತೂರು, ಪೆರಾಬೆ, ಆಲಂಕಾರು ಗ್ರಾಮದ ಸುಮಾರು 300ಕ್ಕೂ ಆಧಿಕ ಗ್ರಾಮಸ್ಥರು ಭಾಗವಹಿಸಿದ್ದರು.

Also Read  ಇದೀಗ ಮತ್ತಷ್ಟು ಹೊಸತನದೊಂದಿಗೆ "ಟಿವಿಎಸ್ ಜುಪಿಟರ್"; ಕಡಬದ ಅಡಿಗ ಮೋಟಾರ್ಸ್ ನಲ್ಲಿ ಬಿಡುಗಡೆ

error: Content is protected !!
Scroll to Top