ಕಡಬದಲ್ಲಿ ಪದೇ ಪದೇ ಕೈಕೊಡುತ್ತಿರುವ ವಿದ್ಯುತ್ ➤ ಶೀಘ್ರ ಸರಿಪಡಿಸುವಂತೆ ಬಿಜೆಪಿ ನೇತೃತ್ವದ ನಿಯೋಗದಿಂದ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಮಾ.28. ಕಳೆದ ಕೆಲವು ಸಮಯದಿಂದ ನಿರಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಮುಖರು ಹಾಗೂ ಕಾರ್ಯಕರ್ತರು ಕಡಬ ಮೆಸ್ಕಾಂ ಉಪ ವಿಭಾಗದ ಕಚೇರಿಗೆ ತೆರಳಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳನ್ನು ಆಗ್ರಹಿಸಿದರು.

ಬಿಜೆಪಿ ಮುಖಂಡ ಸೀತಾರಾಮ ಗೌಡ ಪೊಸವಳಿಕೆಯವರ ನೇತೃತ್ವದಲ್ಲಿ ತೆರಳಿದ ಕಾರ್ಯಕರ್ತರು, ಕಡಬ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿಕುಮಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ವಿದ್ಯುತ್ ಸಮಸ್ಯೆಯಿಂದಾಗಿ ಕಡಬ ಪರಿಸರದಲ್ಲಿನ ಅಡಿಕೆ ತೋಟಗಳು ಹಾಗೂ ಇತರ ಕೃಷಿಗಳು ನೀರಿಲ್ಲದೇ ಬಿಸಿಲಿನ ಬೇಗೆಗೆ ಸಾಯುತ್ತಿವೆ. ಸಮಸ್ಯೆಗಳನ್ನು ಬಗೆಹರಿಸಿ ಬಳಕೆದಾರರಿಗೆ ಗುಣಮಟ್ಟದ ವಿದ್ಯುತ್ ನೀಡುವುದು ನಿಮ್ಮ ಜವಾಬ್ದಾರಿ. ಇದೇ ರೀತಿ ಮುಂದುವರಿದಲ್ಲಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವುದು ಅನಿವಾರ್ಯ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಈಗ ಕೇವಲ ಮನವಿ ಮಾತ್ರ ನೀಡುತ್ತಿದ್ದೇವೆ. ಸಮಸ್ಯೆ ಬಗೆಹರಿಯದೇ ಹೋದಲ್ಲಿ ಚುನಾವಣೆ ಕಳೆದ ಕೂಡಲೇ ಮೆಸ್ಕಾಂ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು.

Also Read  ಆಸ್ಪತ್ರೆ, ಮೆಡಿಕಲ್ ಹೊರತುಪಡಿಸಿ ನಾಳೆ ಜಿಲ್ಲಾದ್ಯಂತ ಸಂಪೂರ್ಣ ಬಂದ್ ➤ ಹೊರಬಂದರೆ ಬೀಳುತ್ತೆ ದಂಡ

ಮನವಿಗೆ ಪ್ರತಿಕ್ರಿಯಿಸಿ ಮಾತನಾಡಿದ ಕಡಬ ಮೆಸ್ಕಾಂ ಎಇಇ ಸಜಿಕುಮಾರ್ ಅವರು ಕಡಬ ಮೆಸ್ಕಾಂ ಸಬ್‌ಸ್ಟೇಶನ್‌ನಲ್ಲಿ ಸುಮಾರು 4.5 ಕೋಟಿ ರೂ. ವೆಚ್ಚದಲ್ಲಿ 12.5 ಎಂವಿಎ ಸಾಮರ್ಥ್ಯದ ಹೆಚ್ಚುವರಿ ಪರಿವರ್ತಕ ಅಳವಡಿಕೆಗೆ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಸಲಕರಣೆಗಳು ಬಂದಿದ್ದು, 4 ತಿಂಗಳೊಳಗೆ ಕಾಮಗಾರಿ ಪೂರ್ತಿಗೊಳ್ಳಲಿದೆ. ಈ ಕಾಮಗಾರಿ ಮುಗಿದ ಬಳಿಕ ಸಬ್‌ಸ್ಟೇಶನ್‌ನ ಸಾಮರ್ಥ್ಯ ವೃದ್ಧಿಯಾಗಲಿದ್ದು ಬಹುತೇಕ ಸಮಸ್ಯೆಗಳು ಪರಿಹಾರಗೊಳ್ಳಲಿವೆ ಎಂದರು.

ಎಪಿಎಂಸಿ ಸದಸ್ಯರಾದ ಪುಲಸ್ತ್ಯಾ ರೈ, ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕೆ., ಮೇದಪ್ಪ ಗೌಡ ಡೆಪ್ಪುಣಿ, ಬಿಜೆಪಿ ಪ್ರಮುಖರಾದ ಎ.ಬಿ.ಮನೋಹರ ರೈ, ಸತೀಶ್ ನಾಯಕ್ ಕಡಬ, ಪ್ರಕಾಶ್ ಎನ್.ಕೆ., ಆದಂ ಕುಂಡೋಳಿ, ಗಿರೀಶ್ ಎ.ಪಿ., ಅಶೋಕ್‌ ಕುಮಾರ್ ಪಿ., ಫಯಾಝ್ ಕೆನರಾ, ಸರ್ವೋತ್ತಮ ಪಂಜೋಡಿ, ಪ್ರಮೋದ್‌ ಕುಮಾರ್ ರೈ ನಂದುಗುರಿ, ನಾಗೇಶ್ ಪಿಜಕಳ, ಸಿದ್ದೀಕ್ ಪೊರಂತು, ಸೋಮಯ್ಯ ದೇರೊಡಿ ಮೊದಲಾದವರು ಉಪಸ್ಥಿತರಿದ್ದರು.

Also Read  ಬಿಎಲ್‌ಆರ್ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಸೇವೆಗಳಿಗಾಗಿ ಮಣಿಪಾಲ್ ಆಸ್ಪತ್ರೆಯು ಬಿಐಎಎಲ್ ಜೊತೆ ಪಾಲುದಾರಿಕೆ

error: Content is protected !!
Scroll to Top