ಸಾಂದರ್ಭಿಕ ಚಿತ್ರ
ಕಡಬ, ಮಾ.27. ಕಳೆದ ಹತ್ತು ವರ್ಷಗಳಿಂದ ಸಂಸದರಾಗಿದ್ದ ನಳೀನ್ ಕುಮಾರ್ ಕಟೀಲ್ ಅವರು ಜಿಲ್ಲೆಯ ಅಭಿವೃದ್ದಿಗೆ ನೀಡಿದ ಕೊಡುಗೆ ಏನೇನೂ ಇಲ್ಲ. ಇವರ ವೈಫಲ್ಯವೇ ಈ ಬಾರಿ ದ.ಕ. ಲೋಕ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಗೆಲುವಿಗೆ ಕಾರಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಬುಧವಾರದಂದು ಕಡಬ ಕಾಂಗ್ರೇಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಜಿಲ್ಲೆಯಲ್ಲಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಜನಗಳನ್ನು ಮೋಸಮಾಡಿ ಕೋಮು ಭಾವನೆಗಳನ್ನು ಕೆರಳಿಸಿ ಮತಗಳಾಗಿ ಪರಿವರ್ತಿಸಿ ಕಳೆದ 30 ವರ್ಷಗಳಿಂದ ಗೆದ್ದಿರುವುದು ನಮ್ಮ ಜಿಲ್ಲೆಯ ದುರಂತವಾಗಿದೆ. ಹಿಂದೆ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷದ ಸಂಸದರು ಇರುವಾಗ ಮಂಗಳೂರಿನ ಬಂದರು, ವಿವಿಧ ಕೈಗಾರಿಕೆಗಳು, ರೈಲ್ವೆ ನಿಲ್ದಾಣ, ಪಾಸ್ ಪೋರ್ಟ್ ಪ್ರಾದೇಶಿಕ ಕಚೇರಿಗಳು, ವಿಮಾನ ನಿಲ್ದಾಣ, ಮುಂತಾದ ಮಹತ್ತರವಾದ ಅಭಿವೃದ್ದಿ ಕಾರ್ಯಗಳನ್ನು ಮಾಡಿ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ.
ಕಳೆದ 5 ವರ್ಷಗಳಿಂದ ಎನ್‍ಡಿಎ ಸರಕಾರಜನರ ಪಾಲಿಗೆ ಶಾಪವಾಗಿ ಪರಿಣಮಿಸಿದ್ದು, ನೋಟ್ ಬ್ಯಾನ್‍ನಂತಹ ಕಾರ್ಯ ದೇಶದ ಜನರನ್ನು ಸಂಕಷ್ಠಕ್ಕೆ ದೂಡಿದೆ. ಯುವಕರಿಗೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಭರವಸೆ ನೀಡಿ ವಂಚಿಸಿದ್ದಾರೆ. ಈ ಬಾರಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷ ಒಬ್ಬ ಯುವ ನಾಯಕನಿಗೆ ಸ್ಪರ್ಧೆಗೆ ಅವಕಾಶ ನೀಡಿದ್ದು, ಈ ಎಲ್ಲಾ ವಿಚಾರಗಳನ್ನು ಕಾಂಗ್ರೇಸ್ ಪಕ್ಷವು ಮತದಾರರಿಗೆ ಮನವರಿಕೆ ಮಾಡಿ ಗೆಲುವು ಸಾಧಿಸಲಿದ್ದೇವೆ ಎಂದರು. ಮತದಾರರು ನಮ್ಮ ಕೈ ಹಿಡಿದಲ್ಲಿ ಕಿದು ಸಿಪಿಸಿಆರ್‍ಐಯನ್ನು ಉಳಿಸಿಕೊಂಡು ಕೋಡಿಂಬಾಳ ರೈಲ್ವೇ ನಿಲ್ದಾಣವನ್ನು ಅಭಿವೃದ್ದಿಪಡಿಸುವುದರೊಂದಿಗೆ ಕಡಬ ಭಾಗದ ಅಭಿವೃದ್ದಿಗೆ ಒತ್ತು ನೀಡುತ್ತೇವೆ. ಮಾತ್ರವಲ್ಲದೇ ಜಿಲ್ಲೆಯಲ್ಲಿ ಶಾಂತಿ ನೆಮ್ಮದಿ ನೆಲೆಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದರು. ನಮ್ಮ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಬಡವರ ಖಾತೆಗೆ ವರ್ಷಕ್ಕೆ 72000 ರೂ. ಹಾಕುವುದಾಗಿ ಹೇಳಿರುವುದನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಲೇವಡಿ ಮಾಡಿದ್ದಾರೆ. ಆದರೆ ಕಾಂಗ್ರೇಸ್ ಪಕ್ಷ ಏನು ಮಾಡುತ್ತದೆೋ ಅದನ್ನೇ ಹೇಳುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ ವರ್ಗೀಸ್ , ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗಣೇಶ್ ಕೈಕುರೆ, ಕಾಂಗ್ರೇಸ್ ಮಖಂಡರಾದ ಡಾ|ರಘು ಬೆಳ್ಳಿಪ್ಪಾಡಿ, ಕೃಷ್ಣಪ್ಪ ಸಕಲೇಶಪುರ, ವಿಜಯ್ ಕುಮಾರ್ ರೈ, ರಾಯ್ ಬ್ರಾಹಂ, ಎಚ್.ಕೆ ಇಲ್ಯಾಸ್, ಸರ್ವೋತ್ತಮಗೌಡ, ಕೆ.ಪಿ ತೋಮಸ್, ಫಝಲ್ ಕೋಡಿಂಬಾಳ, ಕೆ.ಟಿ.ವಲ್ಸಮ್ಮ, ಉಷಾ ಅಂಚನ್, ಆಶಾ ಲಕ್ಷ್ಮಣ್, ಸೈಮನ್ ಸಿ.ಜೆ, ಡೆನ್ನಿಸ್ ಫೆರ್ನಾಂಡಿಸ್, ಬಾಬು ಮುಗೇರ ಮೊದಲಾದವರು ಉಪಸ್ಥಿತರಿದ್ದರು.