ಕಡಬ, ಮಾ.08. ಕಡಬದ ನಾಗರಿಕರ ಬಹುಕಾಲದ ಬೇಡಿಕೆಯೊಂದು ಕೊನೆಗೂ ಈಡೇರಿದ್ದು, ಈಗಾಗಲೇ ವಿವಿಧ ಕಾರಣಗಳಿಂದಾಗಿ ಆರು ಬಾರಿ ಮುಂದೂಡಿಕೆಯಾಗಿದ್ದ ನೂತನ ಕಡಬ ತಾಲೂಕು ಶುಕ್ರವಾರ ಸಂಜೆ ಅಧಿಕೃತವಾಗಿ ಉದ್ಘಾಟನೆಗೊಂಡಿತು.
ಉಪ್ಪಿನಂಗಡಿಯಿಂದ ಕಡಬವನ್ನು ಸಂಪರ್ಕಿಸುವ ನೂತನ ಹೊಸ್ಮಠ ಸೇತುವೆಯನ್ನು ಉದ್ಘಾಟಿಸಿ ಕಡಬಕ್ಕೆ ಆಗಮಿಸಿದ ರಾಜ್ಯ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ನೂತನ ಕಡಬ ತಾಲೂಕನ್ನು ಉದ್ಘಾಟಿಸಿ ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಆ ಬಳಿಕ ಮೇಲ್ದರ್ಜೆಗೇರಿರುವ ಕಡಬ ಸಮುದಾಯ ಆಸ್ಪತ್ರೆಯನ್ನು ಉದ್ಘಾಟಿಸಿ ಅನುಗ್ರಹ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಡಬದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಮಿನಿ ವಿಧಾನಸೌಧಕ್ಕೆ 10 ಕೋಟಿ ರೂ.ಗಳನ್ನು ಮಂಜೂರುಗೊಳಿಸಲಾಗಿದೆ. ನೂತನ ತಾಲೂಕಿಗೆ ಆಗಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿದ್ದ ಕಡಬದ ಜನತೆ ತಾಲೂಕು ಉದ್ಘಾಟನೆಗೊಂಡ ಸಂಭ್ರಮದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನವನ್ನು ತರಲು ಶ್ರಮಿಸಲಾಗುವುದು ಎಂದರು. ಸುಳ್ಯ ಶಾಸಕ ಎಸ್.ಅಂಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ.ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿದರು. ವೇದಿಕೆಯಲ್ಲಿ ವಿಧಾನಪರಿಷತ್ ಶಾಸಕರಾದ ಹರೀಶ್ ಕುಮಾರ್, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿ.ಸೋಜ, ಪುತ್ತೂರು ಶಾಸಕ ಸಂಜೀವ ಮಠಂದೂರು, ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ, ಜಿ.ಪಂ.ಆರೋಗ್ಯ-ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಎಪಿಎಂಸಿ ಅಧ್ಯಕ್ಷರಾದ ದಿನೇಶ್ ಮೆದು, ಜಿ.ಪಂ.ಸದಸ್ಯರಾದ ಪ್ರಮೀಳಾ ಜನಾರ್ಧನ್, ಸರ್ವೋತ್ತಮ ಗೌಡ ಮೊದಲಾದ ಜನಪ್ರತಿನಿಧಿಗಳು ಸೇರಿದಂತೆ ಊರವರು ಉಪಸ್ಥಿತರಿದ್ದರು.
ಪುತ್ತೂರು ಸಹಾಯಕ ಆಯುಕ್ತರಾದ ಎಚ್.ಕೆ. ಕೃಷ್ಣಮೂರ್ತಿ ಸ್ವಾಗತಿಸಿ, ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲು ಕಾರ್ಯಕ್ರಮ ನಿರೂಪಿಸಿದರು.
* ಸಭಾ ಕಾರ್ಯಕ್ರಮದ ಮಧ್ಯದಲ್ಲಿ ಆಗಮಿಸಿದ ಜಿ.ಪಂ.ಅಧ್ಯಕ್ಷರು ಹಾಗೂ ಪುತ್ತೂರು ಶಾಸಕರನ್ನು ಗುರುತಿಸದ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜನಪ್ರತಿನಿಧಿಗಳನ್ನೇ ಗುರುತಿಸುವ ಸಾಮಾನ್ಯ ಜ್ಞಾನ ಇಲ್ಲದವರು ಜನಸಾಮಾನ್ಯರಲ್ಲಿ ಹೇಗೆ ವರ್ತಿಸುವಿರಿ ಎಂದ ಆಕ್ರೋಶ ವ್ಯಕ್ತಪಡಿಸಿದರು.
* ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಿ.ಫಿಲಿಪ್ ಹಾಗೂ ಉಪಾಧ್ಯಕ್ಷ ಕುಶಾಲಪ್ಪ ಗೌಡ ರವರನ್ನು ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು.