(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.01. ಓಲಾ, ಉಬರ್ ನಂತಹ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಯ ಸಂಸ್ಥೆಗಳಿಗೆ ಸಡ್ಡು ಹೊಡೆದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಚಾಲಕರೇ ಸೇರಿ ಆರಂಭಿಸುತ್ತಿರುವ ಆ್ಯಪ್ ಆಧಾರಿತ ಕ್ಯಾಬ್ ಸೇವೆ ‘ನಮ್ಮ ಟೈಗರ್‘ ಶೀಘ್ರದಲ್ಲೇ ಆರಂಭವಾಗಲಿದೆ.
ಈ ಮೊದಲು HDK Cab ಎಂದು ಹೆಸರಿಡಲು ಚಾಲಕ ಮುಖಂಡರು ನಿರ್ಧರಿಸಿದ್ದರು. ಆದರೆ ಎಚ್.ಡಿ. ಕುಮಾರಸ್ವಾಮಿಯವರ ನಿರ್ದೇಶನದಂತೆ ತಮ್ಮ ಹೆಸರಿನ ಬದಲು ‘ನಮ್ಮ ಟೈಗರ್’ ಎಂದು ಹೆಸರಿಸಲಾಗಿದೆ. ಈ ನೂತನ ಕ್ಯಾಬ್ ಸೇವೆ ಆಗಸ್ಟ್ 15ರೊಳಗೆ ಸಾರ್ವಜನಿಕ ಸೇವೆಗೆ ಮುಕ್ತವಾಗುವ ಸಾಧ್ಯತೆಯಿದೆ. ಸ್ಟಾರ್ಟ್ ಆ್ಯಪ್ ಮಾದರಿಯ ‘ಹುಲಿ ಟೆಕ್ನಾಲಜಿಸ್’ ಎಂಬ ಕಂಪನಿಯ ಅಧೀನದಲ್ಲಿ ಸೇವೆಯು ಲಭ್ಯವಾಗಲಿದ್ದು, ನಾಗವಾರ ಮತ್ತು ಹೆಣ್ಣೂರು ನಡುವಿನ ರಿಂಗ್ ರಸ್ತೆಯಲ್ಲಿ ನೂತನ ಕಚೇರಿ ನಿರ್ಮಾಣ ಕಾರ್ಯಭರದಿಂದ ಸಾಗಿದೆ ಎಂದು ಹುಲಿ ಟೆಕ್ನಾಲಜಿಸ್‌ನ ಮುಖ್ಯಸ್ಥರು ತಿಳಿಸಿದ್ದಾರೆ. ಈಗಾಗಲೇ ಸುಮಾರು 25 ಸಾವಿರ ಚಾಲಕರು ಸಂಸ್ತೆಗೆ ಸೇರಿದ್ದು, ಸೇವೆ ಆರಂಭಗೊಂಡ ನಂತರ ಮತ್ತಷ್ಟು ಚಾಲಕರು ಸಂಸ್ಥೆಗೆ ಸೇರುವ ನಿರೀಕ್ಷೆಯಿದೆ. ನಮ್ಮ ಟೈಗರ್ ಸಂಸ್ತೆಯಲ್ಲಿ ಚಾಲಕರಿಗೆ ಇತರೆ ಕ್ಯಾಬ್ ಸೇವಾ ಸಂಸ್ಥೆಗಳು ನೀಡುತ್ತಿರುವ ಸೌಲಭ್ಯಗಳಿಗಿಂತ ಉತ್ತಮವಾದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.