ಆಪರೇಷನ್ ಆಡಿಯೋದ ಬಗ್ಗೆ ಚಾಟಿ ಬೀಸಿದ ಸ್ಪೀಕರ್ ➤ಸದನದಲ್ಲಿ ಭಾವುಕರಾದ ರಮೇಶ್ ಕುಮಾರ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.11. ಆಪರೇಷನ್ ಆಡಿಯೋ ಕುರಿತು ವಿಧಾನಸಭಾ ಕಲಾಪದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.ಆಪರೇಷನ್ ಆಡಿಯೋವನ್ನು ನನ್ನ ಗಮನಕ್ಕೆ ತಂದ ಸಿಎಂ ಕುಮಾರಸ್ವಾಮಿ ಅವರಿಗೆ ಧನ್ಯವಾದಗಳು. ಸದನದ ಎಲ್ಲ ಸದಸ್ಯರಿಂದ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಗೌರವ ಪೂರಕವಾಗಿ ನಡೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಅಪಚಾರವಾಗುವಂತೆ ನೀವು ನಡೆದುಕೊಳ್ಳಬಾರದು.

ದೌರ್ಭಾಗ್ಯಕ್ಕೆ ಆಪರೇಷನ್ ಡೀಲ್‍ನಲ್ಲಿ ಮಾತನಾಡಿರುವವರು ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ಶಾಸಕರು ರಾಜೀನಾಮೆ ನೀಡಿದರೆ ತಕ್ಷಣವೇ ಒಪ್ಪಿಕೊಳ್ಳಲು ಸ್ಪೀಕರ್ ಗೆ 50 ಕೋಟಿ ನೀಡಿ ಸರಿಮಾಡಿಕೊಂಡಿದ್ದೇವೆ ಎಂದು ಆಡಿಯೋದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಒಂದು ವೇಳೆ ಸ್ಪೀಕರ್ ಒಪ್ಪಿಕೊಳ್ಳದಿದ್ದರೆ ಕೊರ್ಟ್ ಗೆ ಹೋಗುತ್ತೇವೆ ಎಂದು ಮಾತನಾಡಿದ್ದಾರೆ. ಇದು ಸ್ಪೀಕರ್ ಸ್ಥಾನಕ್ಕೆ ಮಾಡಿದ ಅವಮಾನ ಎಂದು ಬೇಸರ ವ್ಯಕ್ತಪಡಿಸಿದರು.ಮತ್ತೊಂದು ದುಃಖದ ಸಂಗತಿಯೆಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಅವರನ್ನು ಇಂತಹ ಕೆಲಸಕ್ಕೆ ಎಳೆದುಬಿಟ್ಟಿದ್ದಾರೆ. ಇದು ದೇಶಕ್ಕೆ, ಸಂಸತ್ತು ಹಾಗೂ ಶಾಸನ ಸಭೆಗೆ ಗೌರವ ತರುವುದಿಲ್ಲ, ಒಳ್ಳೆಯದಲ್ಲ ಎಂದು ಅಸಮಾಧಾನ ಹೊರಹಾಕಿದರು.

Also Read  ಜಪಾನ್ ನ ʼನಿಹಾನ್ ಹಿಡಾಂಕ್ಯೊʼ ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ- 2024

ಸ್ಪೀಕರ್ ಆಗಿರುವವರು ಸದನದ ಮೌಲ್ಯವಾಗಿ ಹಾಗೂ ಎಲ್ಲ ಸದಸ್ಯರ ಪ್ರತೀಕವಾಗಿರುತ್ತಾರೆ. ಹೊರಗಿನ ಜನರು ನಮ್ಮನ್ನು ನೋಡುತ್ತಾರೆ. ಇದು ಒಂದು ಪಕ್ಷಕ್ಕೆ, ವ್ಯಕ್ತಿಗೆ ಸೀಮಿತವಾದ ವಿಚಾರವಲ್ಲ. ಸಿಎಂ ಕುಮಾರಸ್ವಾಮಿ ಅವರ ಕಚೇರಿಯಿಂದ ಫೆಬ್ರವರಿ 8 ರಂದು ಸಂಜೆ ನನಗೆ ಪತ್ರ ಕಳುಹಿಸಿದ್ದಾರೆ. ಸಂಪ್ರದಾಯವನ್ನು ಮರೆತು ಬಜೆಟ್ ಅಧಿವೇಶವನ್ನು ಮುಂದೆ ಹಾಕುವಂತಿರಲಿಲ್ಲ. ಶನಿವಾರ ಹಾಗೂ ಭಾನುವಾರ ರಜೆ ಕಳೆದಿದ್ದೇವೆ. ಹೀಗಾಗಿ ನಾನು ಇಂದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿರುವೆ ಎಂದು ತಿಳಿಸಿ ಶಾಸಕರಿಗೆ ಚಾಟಿ ಬೀಸಿದರು.ಅಭಿಮಾನದಿಂದ, ಗೌರವದಿಂದ ನನ್ನನ್ನು ಆಯ್ಕೆ ಮಾಡಿದ್ದೀರಿ. ಆದರೆ ಈಗ ದೊಡ್ಡ ಆಪಾದನೆಯನ್ನೇ ನಾನು ಹೊರಬೇಕಾಗಿ ಬಂದಿದೆ. ನಾನು ಎಂದೂ ಹೀಗೆ ನಡೆದುಕೊಂಡ ವ್ಯಕ್ತಿಯಲ್ಲ ಎಂದರು.

Also Read  ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ 2600 ಕೋಟಿ ರೂ ಅವ್ಯವಹಾರ ► ಸಿಎಂ ಹಾಗೂ ಜಾರ್ಜ್ ವಿರುದ್ಧ ಮತ್ತೆ ದೂರು 

error: Content is protected !!
Scroll to Top