(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಫೆ.09.ರಾಜ್ಯದಲ್ಲಿ ಶಿಕ್ಷಣ ಸಚಿವರನ್ನು ನೇಮಿಸದೆ ಬಜೆಟ್ ಮಂಡಿಸಿದ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಕ್ಯಾಂಪಸ್ ಫ್ರಂಟ್ ಉಪ್ಪಿನಂಗಡಿ ವಲಯ ಸಮಿತಿ ಉಪ್ಪಿನಂಗಡಿ ಬಸ್ ನಿಲ್ದಾಣದ ಸರ್ಕಲ್ ಬಳಿ ಪ್ರತಿಭಟನೆ ನಡೆಸಿತು.ಈ ವೇಳೆ ಮಾತನಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ, ಶಿಕ್ಷಣ ಸಚಿವರಾದ ಎನ್. ಮಹೇಶ್ ರವರು ರಾಜೀನಾಮೆ ನೀಡಿ ನಾಲ್ಕು ತಿಂಗಳುಗಳೇ ಕಳೆಯಿತು. ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದರೂ ಶಿಕ್ಷಣ ಇಲಾಖೆಗೆ ಇನ್ನೂ ಸಚಿವರನ್ನು ನೇಮಿಸಿಲ್ಲ. ಇದರ ವಿರುದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೂ ಸಚಿವರನ್ನು ನೇಮಿಸದೆ ಮುಖ್ಯಮಂತ್ರಿಗಳು ವಿದ್ಯಾರ್ಥಿಗಳಿಗೆ ದ್ರೋಹಬಗೆಯುತ್ತಿದ್ದಾರೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ತಾಲೂಕು ಕಾರ್ಯದರ್ಶಿ ಸಮದ್ ಪೆರ್ನೆ ಅಣಕು ಪ್ರದರ್ಶನಗೈದರು. ಸರ್ವ ಕಾಲೇಜು ವಿದ್ಯಾರ್ಥಿ ಸಂಘ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ನೌಫಲ್ ಮತ್ತು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪುತ್ತೂರು ತಾಲೂಕು ಕಾರ್ಯದರ್ಶಿ ಗರೀಬ್ ನವಾಜ್ ಉಪಸ್ಥಿತರಿದ್ದರು. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ವಲಯ ಅಧ್ಯಕ್ಷ ಉಸ್ಮಾನ್ ಸ್ವಾಗತಿಸಿ, ನಿರೂಪಿಸಿದರು.