(ನ್ಯೂಸ್ ಕಡಬ) newskadaba.comಸುಬ್ರಹ್ಮಣ್ಯ,ಫೆ.07.ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ಭಕ್ತರಿಗೆ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಪುಟನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಹಾಗೂ ಮುಂದಿನ ವಿಚಾರಣೆಗೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠ ಹಾಗೂ ಸಂಪುಟ ಟ್ರಸ್ಟ್‌ನ ಕಾರ್ಯನಿರ್ವಾಹಕ ಅಧಿಕಾರಿ ಆರ್.ಸಂತೋಷ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಪೀಠ, ಮಠದ ವಿರುದ್ಧ ದಾಖಲಾಗಿರುವ ಎ ಪ್ ಐ ಆರ್ ಮತ್ತದರ ಸಂಬಂಧ ಮುಂದಿನ ತನಿಖೆಗೆ ತಡೆಯಾಜ್ಞೆ ನೀಡಿತು.ಇದೇ ವೇಳೆ, ಪ್ರತಿವಾದಿಗಳಾದ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿದರು.
ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾಡಲಾಗುವ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮತ್ತಿತರ ಪೂಜೆ ಹಾಗೂ ಸೇವೆಗಳನ್ನು ಮಠದಲ್ಲಿ ಖಾಸಗಿಯಾಗಿ ಮಾಡಲಾಗುತ್ತಿದೆ. ಆದರೆ, ಈ ಸೇವೆಗಳನ್ನು ದೇವಾಲಯದಲ್ಲಿ ನೆರವೇರಿಸದರೆ ಮಾತ್ರವೇ ದೇವಲಯಕ್ಕೆ ಸೇವೆಯ ಹಣ ದೊರೆಯುತ್ತದೆ. ಇದಲ್ಲದೆ, ಮಠದ ಈ ಕ್ರಮದಿಂದ ದೇವಾಲಯದ ಆದಾಯವೂ ಕಡಿಮೆಯಾಗಲಿದೆ. ಹೀಗಾಗಿ ಮಠದಲ್ಲಿ ಪೂಜೆ ನೆರವೇರಿಸದಂತೆ ತಡೆ ಹಿಡಿಯಬೇಕೆಂದು ಕೋರಿ ದೇವಾಲಯದ ಆಡಳಿತ ಮಂಡಳಿ ಸುಳ್ಯ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿತ್ತು.ಈ ಮಧ್ಯೆ, ಮಠದಲ್ಲಿ ಪೂಜೆ ನೆರವೇರಿಸುವ ಮೂಲಕ ಭಕ್ತರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಮಠದ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ 2018ರ ನ.17ರಂದು ಪ್ರಕರಣ ದಾಖಲಿಸಲಾಗಿತ್ತು.ಇದೇ ಪ್ರಕರಣದಲ್ಲಿ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠ ಹಾಗೂ ಸಂಪುಟ ಟ್ರಸ್ಟ್‌ನ ಮುಖ್ಯಸ್ಥರು ಮತ್ತು ಪದಾಧಿಕಾರಿಗಳಿಗೆ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ 2018ರ ನ.24ರಂದು ಜಾಮೀನು ಮಂಜೂರು ಮಾಡಿತ್ತು.