(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ,ಫೆ.07.ಪಶ್ಚಿಮ ಘಟ್ಟಗಳಿಂದ ಆವೃತವಾಗಿರುವ ಕುಕ್ಕೆಯ ಕುಮಾರ ಪರ್ವತವಿರುವ ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯೊಳಕ್ಕೆ ಸಾರ್ವಜನಿಕರ ಪ್ರವೇಶವನ್ನು ಫೆ. 1ರಿಂದ ವನ್ಯಜೀವಿ ವಿಭಾಗ ನಿಷೇಧಿಸಿದೆ. ಕುಮಾರ ಪರ್ವತಕ್ಕೆ ತೆರಳಲು ಚಾರಣಿಗರಿಗೂ ಅವಕಾಶವಿಲ್ಲ. ರಾಜ್ಯದ 21 ವನ್ಯಜೀವಿ ಅಭಯಾರಣ್ಯಗಳ ಪೈಕಿ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯವೂ ಒಂದು. ಇದು ಕೊಡಗಿನ ಸೋಮವಾರ ಪೇಟೆ ವ್ಯಾಪ್ತಿಯಲ್ಲಿದೆ. ಇದು 102 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಪಸರಿಸಿದೆ.
ಒಂದೆಡೆ ಹಸುರು, ಇನ್ನೊಂದಡೆ ಮುಳಿ ಹುಲ್ಲಿನಿಂದ ಕೂಡಿದ ನುಣುಪಾದ ಶಿಖರ. ಬಂಡೆಗಳ ಕಡಿದಾದ ಪ್ರದೇಶವೂ ಇಲ್ಲಿದ್ದು, ಚಾರಣಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕೃತಿಯ ಸೌಂದರ್ಯ ಸವಿಯಲು ಇಲ್ಲಿ ಬೆಟ್ಟ ಹತ್ತುತ್ತಾರೆ. ದಿನಕ್ಕೆ 25ರಿಂದ 30 ತಂಡಗಳು ಚಾರಣಕ್ಕೆ ತೆರಳುತ್ತವೆ. ಮಳೆಗಾಲದ ಕೆಲ ತಿಂಗಳು ಹೊರತು ಪಡಿಸಿ ಇತರ ಅವಧಿಯಲ್ಲಿ ಇಲ್ಲಿ ಚಾರಣಿಗರು ಕಂಡುಬರುತ್ತಿದ್ದರೂ ಅಕ್ಟೋಬರ್‌ನಿಂದ ಫೆಬ್ರವರಿ ತನಕ ಚಾರಣಕ್ಕೆ ಪ್ರಶಸ್ತ ಅವಧಿಯಾಗಿದೆ.ಬೇಸಗೆ ದಿನಗಳಾದ್ದರಿಂದ ಅರಣ್ಯದೊಳಗೆ ಬೆಂಕಿ ಬೀಳುವ ಸಾಧ್ಯತೆಗಳು ಹೆಚ್ಚಿವೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ. ವನ್ಯಧಾಮ ವ್ಯಾಪ್ತಿಯಲ್ಲಿ ಸಾರ್ವಜನಿಕರ ಚಲನವಲನಕ್ಕೆ ಈಗಾಗಲೇ ನಿಷೇಧ ಹೇರಲಾಗಿದೆ. ಮುಂಗಾರು ಆರಂಭವಾಗುವ ತನಕ ಈ ನಿಷೇಧ ಜಾರಿಯಲ್ಲಿರುತ್ತದೆ.ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.ವನ್ಯಧಾಮ ಪ್ರವೇಶಿಸದಂತೆ ನಾಮಫಲಕ ಹಾಕಲಾಗಿದೆ. ಆದೇಶ ಉಲ್ಲಂಘಿಸಿದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಕಾನೂನಿನಡಿ ಶಿಕ್ಷೆಗೆ ಗುರಿಪಡಿಸುವ ಎಚ್ಚರಿಕೆ ನೀಡಲಾಗಿದೆ.