ಜಿಲ್ಲೆಯಲ್ಲಿ ಎಂಟು ಕ್ಷೇತ್ರದಲ್ಲೂ ಕಾಂಗ್ರೇಸ್ ಗೆಲುವು ನಮ್ಮ ಗುರಿ ► ಕಡಬ ಕಾಂಗ್ರೇಸ್ ಸಮಾವೇಶದಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್

(ನ್ಯೂಸ್ ಕಡಬ) newskadaba.com ಕಡಬ, ಜು.31. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರಕಾರ ನೀಡಿರುವ ಭರವಸೆಯನ್ನು ಈಡೇರಿಸಿ ಜನರ ವಿಶ್ವಾಸ ಗಳಿಸಿ ಮತ್ತೊಮ್ಮೆ ಆಧಿಕಾರಕ್ಕೆ ಬರುವುದು ಖಚಿತವಾಗಿದ್ದು ದ.ಕ. ಜಿಲ್ಲೆಯ ಎಂಟು ಕ್ಷೇತ್ರದಲ್ಲಿ ಈಗಾಗಲೇ ಏಳು ಕ್ಷೇತ್ರ ನಮ್ಮ ಕೈಯಲ್ಲಿದ್ದು, ಮುಂದಿನ ಚುನಾವಣೆಯಲ್ಲಿ ಎಂಟರಲ್ಲಿ ಎಂಟು ಕ್ಷೇತ್ರವೂ ಕಾಂಗ್ರೇಸ್ ತೆಕ್ಕೆಗೆ ತರುವುದು ನಮ್ಮಲ್ಲೆರ ಗುರಿಯಾಗಬೇಕು ಎಂದು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಕರೆ ನೀಡಿದರು.

ಅವರು ಸೋಮವಾರದಂದು ಕಡಬ ಅನುಗ್ರಹ ಸಭಾಭವನದಲ್ಲಿ ಕಡಬ ಬ್ಲಾಕ್ ಕಾಂಗ್ರೇಸ್ ಸಮಿತಿ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ವಿಷ್ಣುನಾಥನ್ ಕಾಂಗ್ರೇಸ್ ಪಕ್ಷವನ್ನು ಬೂತ್ಮಟ್ಟದಿಂದ ಸಂಘಟಿಸುವ ಕಾರ್ಯವನ್ನು ಮಾಡಲಾಗುತ್ತಿದ್ದು, ಪಕ್ಷದ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದ ನಾಯಕರು ಕೂಡಾ ಒಂದು ಬೂತ್ ಒಂದು ನಾಯಕ ಎನ್ನುವ ಕಾರ್ಯಕ್ರಮದಡಿ ಕೆಲಸ ಮಾಡಲಿದ್ದೇವೆ. ಬಸವಣ್ಣನಂತಹ ದಾರ್ಶನಿಕರು ಹುಟ್ಟಿದ ನಾಡಿನಲ್ಲಿ ಮತೀಯ ಸಂಘರ್ಷಗಳನ್ನು ಹುಟ್ಟಿ ಹಾಕಿ ರಾಜಕೀಯ ಲಾಭ ಪಡೆದು ಅಧಿಕಾರ ಪಡೆಯಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರಕಾರ ಭ್ರಷ್ಟಾಚಾರ ನಡೆಸಿ ಸ್ವತಹ ಯಡಿಯೂರಪ್ಪನವರೇ ಜೈಲಿಗೆ ಹೋಗಿ ಬಂದಿದ್ದಾರೆ, ಅವರೊಟ್ಟಿಗೆ 18 ಜನ ಸಚಿವರು ಕೂಡಾ ಜೈಲುವಾಸ ಮಾಡಿದ್ದಾರೆ. ಇಂತವರಿಂದ ಅಧಿಕಾರ ನಡೆಸಲು ಸಾಧ್ಯವಿಲ್ಲ ಎಂದು ರಾಜ್ಯದ ಜನತೆ ಕಾಂಗ್ರೇಸ್ಗೆ ಅಧಿಕಾರ ನೀಡಿದ್ದಾರೆ. ನಾಲ್ಕುವರೆ ವರ್ಷ ಅಧಿಕಾರ ನಡೆಸಿರುವ ಕಾಂಗ್ರೇಸ್ ಹಲವು ಭಾಗ್ಯಗಳನ್ನು ಕರುಣಿಸಿ ಇದೊಂದು ಭಾಗ್ಯಗಳ ಸರಕಾರ ಎಂದು ಸಾಬೀತು ಮಾಡಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಇದರಿಂದ ವಿಚಲಿತರಾಗಿರುವ ವಿರೋಧ ಪಕ್ಷ ಬಿಜೆಪಿ ಮತೀಯ ಸಂಘರ್ಷ ಹುಟ್ಟುಹಾಕಿ ರಾಜಕೀಯ ಮಾಡಲು ಹೊರಟಿದೆ. ಜಿಲ್ಲೆಯಲ್ಲಿನ ಸಂಸದರು ಜಿಲ್ಲೆಗೆ ಬೆಂಕಿ ಇಡುವ ಮಾತನಾಡುತ್ತಾರೆ. ಹಲವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಸಮಾದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಆದರೆ ಜಿಲ್ಲೆಯ ಜನತೆ ಪ್ರಜ್ಞಾವಂತರಾಗಿದ್ದು, ಬಿಜೆಪಿಯವರ ಕೋಮು ಷಡ್ಯಂತರಗಳಿಗೆ ಕಿವಿಕೊಡಬಾರದು ಎಂದು ಹೇಳಿದ ಸಿದ್ದರಾಮಯ್ಯ ಸರಕರಾದ ಸಾಧನೆಯನ್ನು ಪ್ರತೀ ಮನೆ ಮನೆಗೆ ತಲುಪಿಸಿ ಮತಗಳಾಗಿ ಪರಿವರ್ತನೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸುಳ್ಯ ಕ್ಷೇತ್ರದಲ್ಲಿ ನಮ್ಮ ಶಾಸಕರು ಇಲ್ಲದಿದ್ದರೂ ಕ್ಷೇತ್ರಕ್ಕೆ ಉಸ್ತುವಾರಿ ಸಚಿವ ರಮನಾಥ ರೈಯವರ ಮುಖಾಂತರ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಇದನ್ನು ನೆನಪಿಟ್ಟುಕೊಂಡು ಜನತೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಡಬವನ್ನು ತಾಲೂಕು ಮಾಡಿರುವುದು ಹಾಗೂ ಅದಕ್ಕೆ ಪುರಕವಾದ ವಾತಾವರಣವನ್ನು ಈ ಹಿಂದೆ ನಿರ್ಮಾಣ ಮಾಡಿರುವುದು ಕಾಂಗ್ರೇಸ್ ಸರಕಾರ. ಆದರೆ ಈ ಜಿಲ್ಲೆಗೆ ಬೆಂಕಿ ಇಡುತ್ತೇನೆ ಎಂದು ಹೇಳುವ ಸಂಸದ ನಳಿನ್ ಕುಮಾರ್ ಕಟೀಲ್ ಕಡಬಕ್ಕೆ ಏನು ನೀಡಿದ್ದಾರೆ ಎಂದು ಪ್ರಶ್ನಿಸಿದರು. ದೇಶದಲ್ಲಿ ಎಲ್ಲಾ ವರ್ಗದವರನ್ನು ಒಂದೇ ರೀತಿಯಲ್ಲಿ ನೋಡಿಕೊಂಡು ಹೋಗುವ ಪಕ್ಷ ಕಾಂಗ್ರೇಸ್ ಮಾತ್ರ. ಆದರೆ ಬಿಜೆಪಿ ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆದು ಆಳುವ ಹಂತಕ್ಕೆ ಹೋಗಿದೆ. ದ.ಕ ಜಿಲ್ಲೆ ಮತೀಯವಾದಿಗಳ ಪ್ರಯೋಗ ಶಾಲೆಯಾಗುತ್ತಿದೆ. ಈಗಾಗಲೇ ಗುಜರಾತ್, ಉತ್ತರ ಪ್ರದೇಶ ಮುಂತಾದ ರಾಜ್ಯಗಳು ಮತೀಯವಾದಿಗಳ ಪ್ರಯೋಗ ಶಾಲೆಯಾಗಿದೆ, ಇದನ್ನು ದೇಶವ್ಯಾಪಿ ಹರಡುವ ಕೆಲಸವಾಗುತ್ತದೆ. ಇದರಿಂದ ದೇಶ ಮುಂದೊಂದು ದಿನ ರಕ್ತಸಿಕ್ತ ಅಧ್ಯಾಯದ ದೇಶವಾಗುವ ಆತಂಕವಿದೆ. ಆದರೆ ಕಾಂಗ್ರೇಸ್ ಪಕ್ಷ ಶಾಂತಿ ಸೌಹಾರ್ದದಿಂದ ಜಾತ್ಯಾತೀತ ನೆಲೆಯಲ್ಲಿ ರಾಜಕಾರಣ ಮಾಡಿ ದೇಶಕಟ್ಟಲಿದೆ ಎಂದರು. ಕರ್ನಾಟಕ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜಾ, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿದರು.

Also Read  ಕಡಬ: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು

ದ.ಕ. ಜಿಲ್ಲಾ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ಸಭೆಯ ಅಧ್ಯಕ್ಷತೆವಹಿಸಿದ್ದರು. ಮಾಜಿ ಶಾಸಕ ಶೂಂಟಿಕೊಪ್ಪ ಇಬ್ರಾಹಿಂ, ಕೆಪಿಸಿಸಿ ಕಾರ್ಯದರ್ಶಿ ಸವಿತಾ ರಮೇಶ್, ಪದವೀಧರ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಎಸ್.ಪಿ. ದಿನೇಶ್ ಮೊದಲಾದವರು ಮಾತನಾಡಿದರು. ವೇದಿಕೆಯಲ್ಲಿ ದ.ಕ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ದ.ಕ ಜಿಲ್ಲಾ ಕಾಂಗ್ರೇಸ್ ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ, ಕಿಸಾನ್ ಘಟಕದ ಅಧ್ಯಕ್ಷ ಉಮಾನಾಥ ಶೆಟ್ಟಿ, ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ|ರಘು ಬೆಳ್ಳಿಪ್ಪಾಡಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ.ಪಿ.ವರ್ಗೀಸ್, ಎಂ.ಎಸ್.ಮಹಮ್ಮದ್, ಸರ್ವೋತ್ತಮ ಗೌಡ, ಕಾಂಗ್ರೇಸ್ ಮುಖಂಡರಾದ ವಿಜಯಕುಮಾರ್ ರೈ ಕರ್ಮಾಯಿ, ಜಯಪ್ರಕಾಶ್ ರೈ, ಭರತ್ ಮುಂಡೋಡಿ, ದಿವ್ಯಪ್ರಭಾ ಚಿಲ್ತಡ್ಕ, ಉಷಾ ಅಂಚನ್, ರಾಯ್ ಅಬ್ರಹಾಂ. ಕೆ.ಪಿ.ತೋಮಸ್, ಎಚ್.ಕೆ.ಇಲ್ಯಾಸ್, ಕುಮಾರಿ ವಾಸುದೇವನ್, ಸುಧೀರ್ ಕುಮಾರ್ ಶೆಟ್ಟಿ, ಶೀನಪ್ಪ ಗೌಡ ಬೈತಡ್ಕ, ಸತೀಶ್ ಕುಮಾರ್ ಕೆಡೆಂಜಿ, ಕೆ.ಟಿ.ವಲ್ಸಮ್ಮ, ಆಶಾ ಲಕ್ಷ್ಮಣ, ಗಣೇಶ್ ಕೈಕುರೆ, ಫಝಲ್ ಕೋಡಿಂಬಾಳ, ಅಶೋಕ್ ನೆಕ್ರಾಜೆ, ಬಾಬು ಮುಗೇರ, ಟಿ.ಎಂ.ಶಹೀದ್, ಸಿದ್ದಿಕ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಡಬವನ್ನು ತಾಲೂಕು ಘೋಷಣೆ ಮಾಡಿರುವ ಸಚಿವ ರಮನಾಥ ರೈ ಅವರನ್ನು ಸನ್ಮಾನಿಸಲಾಯಿತು.
ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ ಸ್ವಾಗತಿಸಿ, ಕೆ.ಕೆ.ಸಬಾಸ್ಟಿಯನ್, ಅಶ್ರಫ್ ಶೇಡಿಗುಂಡಿ, ಗಂಗಾಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Also Read  ನೆರೆ ಹಾವಳಿಯ ಸಂತ್ರಸ್ತರಿಗೆ ನೆರವು ನೀಡಲು ಬಯಸುತ್ತೀರಾ...? ► ಅವಶ್ಯಕ ಸಾಮಾಗ್ರಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲು ಜಿಲ್ಲಾಡಳಿತದಿಂದ ತಂಡ ರಚನೆ

 

error: Content is protected !!
Scroll to Top