(ನ್ಯೂಸ್ ಕಡಬ) newskadaba.com ಕಡಬ, ಜು.31. ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಸೇತುವೆಯಿಂದ ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಮೃತದೇಹ ಸೋಮವಾರದಂದು ಸೇತುವೆಯ ಸುಮಾರು 300 ಮೀಟರ್ ಕೆಳಗಡೆ ಕಂಡುಬಂದಿದೆ.
ಮೂಲತಃ ಎಡಮಂಗಲ ಗ್ರಾಮದ ಕೂಟಾಜೆ ನಿವಾಸಿ ದಿ.ಕುಶಾಲಪ್ಪ ಗೌಡರ ಪುತ್ರ ಧರ್ಮಪಾಲ(43ವ.) ಎಂಬವರೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಅವರ ಪತ್ನಿ ವಿಶಾಲಾಕ್ಷಿಯವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶನಿವಾರ ಬೆಳಿಗ್ಗೆ ಮನೆಯಿಂದ ಹೊರಟ್ಟಿದ್ದ ಅವರು ಕಡಬಕ್ಕೆ ಬಂದು ಅಲ್ಲಿಂದ ಜೀಪೊಂದರಲ್ಲಿ ಪುಳಿಕುಕ್ಕು ಎಂಬಲ್ಲಿಗೆ ಹೋಗಿದ್ದರು ಎನ್ನಲಾಗಿದ್ದು, ಸೇತುವೆ ಮೇಲೆ ನಿಂತುಕೊಂಡು ಮೊಬೈಲ್ ಮೂಲಕ ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದೆ. ನೀರಿಗೆ ದುಮುಕುವ ಸ್ವಲ್ಪ ಮೊದಲು ಅವರ ಬಾವನಿಗೆ ಕರೆ ಮಾಡಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಕೂಡಲೇ ಅವರ ಬಾವ ಪುಳಿಕುಕ್ಕು ಸೇತುವೆ ಬಳಿ ಇರುವ ಕುಂಞಣ್ಣ ಗೌಡ ಎಂಬವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಕೂಡಲೇ ಕುಂಞಣ್ಣ ಗೌಡರು ಸೇತುವೆ ಬಳಿ ಬಂದಾಗ ಧರ್ಮಪಾಲರು ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ನೀರಿಗೆ ಧುಮುಕುವ ಮುನ್ನ ಅಂಗಿ, ಮೊಬೈಲ್, ಹಾಗೂ ಚಪ್ಪಲಿಯನ್ನು ಸೇತುವೆಯ ಮೇಲಿಟ್ಟು ನೀರಿಗೆ ಹಾರಿದ್ದರು. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಆಗಮಿಸಿದ್ದರೂ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಿದ್ದ ಕಾರಣ ಹುಡುಕಾಡಲು ಸಾಧ್ಯವಾಗಿರಲಿಲ್ಲ. ಅಗ್ನಿಶಾಮಕ ದಳದವರು ನದಿಯ ಎರಡೂ ತಟಗಳಲ್ಲಿ ಹುಡುಕುವ ಪ್ರಯತ್ನ ನಡೆಸಿದ್ದು, ಸೋಮವಾರದಂದು ಮೃತದೇಹ ಕಂಡುಬಂದಿದೆ.