(ನ್ಯೂಸ್ ಕಡಬ) newskadaba.comಸುಬ್ರಹ್ಮಣ್ಯ,ಫೆ.1. ಅತೀ ಹೆಚ್ಚು ಪ್ರಾಧಾನ್ಯತೆ ನೀಡುವ ಕ್ಷೇತ್ರ ಬೇಸಾಯಕ್ಕೆ ಕೊಂಡಿಯಂತಿರುವ ಜಾನುವಾರು ಸಾಕಾಣೆಯಿಂದ ಆರ್ಥಿಕ ಲಾಭವಿದೆ. ಜಾನುವಾರು ಸಂರಕ್ಷಣೆ ಮಾಡುವ ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಹಿತ ಕಾಯಲು ಸರಕಾರ ಬದ್ಧವಿದೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಭೋಜೆಗೌಡ ಹೇಳಿದರು.
ಕರ್ನಾಟಕ ಸರಕಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಇದರ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವಲ್ಲೀಶ ಸಭಾಭವನದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಜಾನುವಾರು ಅಭಿವೃದ್ಧಿ ಅಧಿಕಾರಿಗಳ ತಾಂತ್ರಿಕ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.ಹಳ್ಳಿಗಾಡಿನ ಜನತೆಯ ಆರ್ಥಿಕತೆ ಸುಧಾರಿಸುವಲ್ಲಿಲ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳ ಕೊಡುಗೆ ಮಹತ್ವದ್ದು. ಪಶುವೈದ್ಯಕೀಯ ಪರಿವೀಕ್ಷಕರ ಸಮಸ್ಯೆ ಬಗೆಹರಿಸುವ ಸಂಬಂಧ ಮುಖ್ಯಮಂತ್ರಿ ಹಾಗೂ ಪಶುಸಂಗೋಪನೆ ಸಚಿವರ ಜತೆ ಚರ್ಚೆ ನಡೆಸುವುದಾಗಿ ಅವರು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರೀಕ್ಷಕರ ಸಂಘದ ಅಧ್ಯಕ್ಷ ಎಂ. ಎಚ್ ವೆಂಕಟರಾಜು ಮಾತನಾಡಿ ಪಶುಸಂಗೋಪನೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪರಿವೀಕ್ಷಕರು ಹಿರಿಯ ಪಶುವೈದ್ಯಾಕೀಯ ಪರಿವೀಕ್ಷಕರು, ಜಾನುವಾರು ಅಧಿಕಾರಿಗಳಾಗಿ ಜಾನುವಾರು ಆರೈಕೆಯಲ್ಲಿ ತೊಡಗಿರುವ ಅಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ರಾಜ್ಯ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಕೆ ಜಯಕೀರ್ತಿ ಧರ್ಮಸ್ಥಳ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ನೌಕರರ ಸಂಘದ ಗೌರವಾಧ್ಯಕ್ಷ ರಾಜು, ರಾಜ್ಯ ಪಶುವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಸಿ ಸೋಮಶೇಖರ, ಜಾನುವಾರು ಅಭಿವೃದ್ಧಿ ಅಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು, ರ ಸಹಕಾರಿ ಧುರೀಣ ಜಾಕೆ ಮಾಧವ ಗೌಡ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕೃಷ್ಣಮೂರ್ತಿ ಸ್ವಾಗತಿಸಿ, ವಂದಿಸಿದರು. ರಾಜ್ಯದ ವಿವಿದ ಜಿಲ್ಲೆಗಳಿಂದ ಪಶುವೈದ್ಯಕೀಯ ಪರಿವೀಕ್ಷಕರು, ಜಾನುವಾರು ಅಧಿಕಾರಿಗಳು ಆಗಮಿಸಿ ಕಾರ್ಯಗಾರದಲ್ಲಿ ಪಾಲ್ಗೊಂಡರು.