(ನ್ಯೂಸ್ ಕಡಬ) newskadaba.comಬೆಳ್ತಂಗಡಿ,ಜ.26. ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಬೆಳೆಯಬೇಕು ಎಂಬುದು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಉದ್ದೇಶ. ಎಲ್ಲ ಧರ್ಮಗಳಲ್ಲಿಯೂ ಶಾಂತಿ ಭೋದಿಸಲು ಪೂರಕವಾಗುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಫೆ.9ರಿಂದ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.ಮುಖ್ಯಮಂತ್ರಿಗಳು, ಮಾಜಿ ಪ್ರಧಾನಿ, ಹಿರಿಯ ಸ್ವಾಮೀಜಿಗಳು ಸೇರಿದಂತೆ ಅನೇಕ ಸಚಿವರುಗಳು, ಸಂಸದರು, ಶಾಸಕರು, ಮಾಜಿ ಸಚಿವರು, ಶಾಸಕರು, ಸಂಸದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಚಾರಿತ್ರ್ಯ ಅಕ್ರವರ್ತಿ ಶ್ರೀ 108 ಶಾಂತಿಸಾಗರ ಮಹಾರಾಜರ ಅಕ್ಷುನ್ನ ಪರಂಪರೆಯ ಪಟ್ಟಾಧೀಶ ಪರಮಪೂಜ್ಯ ಆಚಾರ್ಯ ಶ್ರೀ 108 ವರ್ಧಮಾನ ಸಾಗರಜೀ ಮುನಿಮಹಾರಾಜರ ಸಾನಿಧ್ಯ ಮತ್ತು ನೇತೃತ್ವದಲ್ಲಿ ಹಾಗೂ ಪರಮ ಪೂಜ್ಯ ಆಚಾರ್ಯ ಶ್ರೀ ವಾತ್ಸಲ್ಯವಾರಿಧಿ 108 ಪುಷ್ಪದಂತ ಸಾಗರ ಮುನಿ ಮಹಾರಾಜರು, ಮುನಿಗಳು, ಆರ್ಯಿಕಾ ಮಾತಾಜಿ, ಶ್ರವಣಬೆಳಗೊಳ ಜೈನ ಮಠದ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತಿಯಲ್ಲಿ ಮಹೋತ್ಸವ ಮಹೋತ್ಸವ ನಡೆಯಲಿದೆ. ಬಾಹುಬಲಿ ಪ್ರತಿಷ್ಠಾಪನೆ ಪ್ರಾರಂಭದಿಂದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಮಾರ್ಗದರ್ಶನ ಪ್ರೋತ್ಸಾಹ ನೀಡುತ್ತಿದ್ದು, ಇನ್ನಿತರ ಹಿರಿಯ ಸ್ವಾಮೀಜಿಗಳು ಪ್ರೋತ್ಸಾಹ ನೀಡಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಫೆ.8ರಂದು ಸಂತ ಸಮ್ಮೇಳನ ಆಯೋಜಿಸಲಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಉದ್ಘಾಟಿಸಲಿದ್ದಾರೆ. ಶ್ರವಣಬೆಳಗೊಳದ ಸ್ವಸ್ತಿಶ್ರೀ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಆಶಿರ್ವಚನ ನೀಡಲಿದ್ದಾರೆ. ಕಾರ್ಕಳ ದಾನಶಾಲೆಯ ಧ್ಯಾನಯೋಗಿ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಹುಂಚ ಮಠದ ಪರಮಪೂಜ್ಯ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ವಿರಾಜಪೇಟೆ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಾಣಿಲ ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ, ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮೊದಲಾದವರು ಉಪಸ್ಥಿತರಿರುವರು ಎಂದರು.