ದೇಶದ ಉನ್ನತಿಗಾಗಿ ಮತ್ತು ರಕ್ಷಣೆಗಾಗಿ ಜೀವತೆತ್ತ ದೇಶ ಪ್ರೇಮಿಗಳನ್ನು ಸ್ಮರಿಸುವ ► ಹುತಾತ್ಮರ ದಿನ – ಜನವರಿ 30✍? ಡಾ| ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com,ಜ.30.ದೇಶದ ಉನ್ನತಿಗಾಗಿ ಮತ್ತು ರಕ್ಷಣೆಗಾಗಿ ಜೀವತೆತ್ತ ದೇಶ ಪ್ರೇಮಿಗಳನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ನಮ್ಮ ದೇಶದಲ್ಲಿ ಜನವರಿ 30ರಂದು ಹುತಾತ್ಮರ ದಿನ (ಸರ್ವೋದಯ ದಿನ ಅಥವಾ ಶಹೀದ್ ದಿವಸ್) ಎಂದು ಆಚರಿಸಲಾಗುತ್ತಿದೆ. ದೇಶಾದ್ಯಂತ ದೇಶಕ್ಕಾಗಿ ಜೀವತೆತ್ತ ಹುತಾತ್ಮರನ್ನು ಸ್ಮರಣೆ ಮಾಡಿ ಅವರ ತ್ಯಾಗ ಸೇವೆ ಮತ್ತು ದೇಶಪ್ರೇಮವನ್ನು ಕೊಂಡಾಡಿ, ಇತರರಲ್ಲಿ ದೇಶ ಪ್ರೇಮ ಮತ್ತು ರಾಷ್ಟಭಕ್ತಿಯನ್ನು ಮೂಡಿಸುವ ಸದುದ್ದೇಶ ಈ ಆಚರಣೆಯ ಮೂಲ ಉದ್ದೇಶವಾಗಿರುತ್ತದೆ.

ವಿಶ್ವದಾದ್ಯಂತ ಸುಮಾರು 15 ದೇಶಗಳು ಪ್ರತಿ ವರ್ಷ ಹುತಾತ್ಮರ ದಿನವನ್ನು ಬೇರೆ ಬೇರೆ ದಿನಗಳಲ್ಲಿ ಆಚರಣೆ ಮಾಡಿ ಜನರಲ್ಲಿ ದೇಶ ಪ್ರೇಮದ ಬಗ್ಗೆ ಭಕ್ತಿ ಮೂಡುವಂತೆ ಮಾಡುತ್ತದೆ. ಮೊದಲೆಲ್ಲಾ ಜನವರಿ 26ರ ಗಣರಾಜ್ಯೋತ್ಸವದ ದಿನದಂದು ದೇಶಕ್ಕಾಗಿ ಜೀವತೆತ್ತ ಸೈನಿಕರನ್ನು ನೆನೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಜನವರಿ 30ರಂದು ನಮ್ಮ ದೇಶದ ಸ್ವಾತಂತ್ರಕ್ಕಾಗಿ ‘ಅಹಿಂಸಾ’ ಅಸ್ತ್ರದ ಮುಖಾಂತರ ಹೋರಾಡಿದ ಮಹಾತ್ಮ ಗಾಂದೀಜಿಯವರು ಹುತಾತ್ಮರಾದ ದಿನ. 1948 ಜನವರಿ 30ರಂದು ನಾಥೂರಾಮ ಗೊಡ್ಸೆ ಗಾಂದೀಜಿಯರನ್ನು ಗುಂಡಿಕ್ಕಿ ಕೊಂದನು. ದೇಶಕ್ಕಾಗಿ ಜೀವತೆತ್ತ ಲಕ್ಷಾಂತರ ಸೈನಿಕರು, ಯೋಧರು, ಸ್ವಾತಂತ್ರ ಹೋರಾಟಗಾರರನ್ನು ನೆನೆಯುವ ಉದ್ದೇಶದಿಂದ ಈ ಆಚರಣೆಯನ್ನು ಜಾರಿಗೆ ತರಲಾಯಿತು. ಪ್ರತಿಯೊಬ್ಬ ವ್ಯಕ್ತಿಯೂ ಈ ದಿನದಂದು ದೇಶಕ್ಕಾಗಿ ಜೀವ ನೀಡಿದ ಸೈನಿಕರನ್ನು ಮತ್ತು ಹುತಾತ್ಮರನ್ನು ನೆನೆದು, ಎರಡು ನಿಮಿಷಗಳ ಕಾಲ ಮೌನ ಪ್ರಾರ್ಥನೆ ಮಾಡುವ ಸಂಪ್ರದಾಯ ನಡೆಸಲಾಗುತ್ತದೆ.

ದೇಶದ, ವಾಯುದಳ ನೌಕಾದಳ ಮತ್ತು ಭೂಸೇನೆಯ ಅಧ್ಯಕ್ಷರು, ಇಂಡಿಯಾ ಗೇಟ್ ಬಳಿ ಸೇರಿ ದೇಶಕ್ಕೆ ಜೀವ ತೆತ್ತವರನ್ನು ಸ್ಮರಿಸುತ್ತಾರೆ. ಸರಿಯಾಗಿ 11 ಗಂಟೆಗಳ ಸಮಯದಲ್ಲಿ ಸೈರನ್ ಮೊಳಗಿಸಲಾಗುತ್ತದೆ. ಎಲ್ಲಾ ಸರಕಾರಿ ನೌಕರರು, ಮತ್ತು ದೇಶದ ಎಲ್ಲಾ ನೌಕರ ವೃಂದದವರು ತಮ್ಮ ಕೆಲಸ ನಿಲ್ಲಿಸಿ 2 ನಿಮಿಷಗಳ ವರೆಗೆ ಮೌನ ಪ್ರಾರ್ಥನೆ ನಡೆಸುತ್ತಾರೆ. ಪುನಃ 11 ಗಂಟೆ 2 ನಿಮಿಷಕ್ಕೆ ಸೈರನ್ ಮೊಳಗಿದ ಬಳಿಕ ಎಲ್ಲರು ತಮ್ಮ-ತಮ್ಮ ಕೆಲಸಕ್ಕೆ ಹಾಜರಾಗುತ್ತಾರೆ. ಅದೇ ರೀತಿ ದೇಶದ ರಾಷ್ಡಪತಿಗಳು, ಉಪರಾಷ್ಟಪತಿ, ಪ್ರಧಾನಮಂತ್ರಿ ಮತ್ತು ರಕ್ಷಣಾ ಸಚಿವರು ಗಾಂದೀಜಿಯವರ ಸಮಾಧಿಯಾದ ರಾಜಘಾಟ್‍ಗೆ ತೆರಳಿ ಹೂಹಾರ ಹಾಕಿ ಗೌರವ ವಂದನೆ ನೀಡುತ್ತಾರೆ. ಎರಡು ನಿಮಿಷಗಳ ಮೌನದ ನಂತರ ದೇಶ ಪ್ರೇಮ ಮೂಡಿಸುವ ಭಜನೆಗಳು ಮತ್ತು ಧಾರ್ಮಿಕ ಹಾಡುಗಳನ್ನು ಹಾಡಲಾಗುತ್ತದೆ.

Also Read  'ಬೆಳಕಿನ ಹಬ್ಬ ದೀಪಾವಳಿ ವೇಳೆ ಆಹಾರದ ಸಾಂಸ್ಕೃತಿಕ ಮಹತ್ವ' ✍️ ಡಾ.ಅಜಿತ್ ಕೆ ಕೋಡಿಂಬಾಳ

ಮಹಾತ್ಮ ಗಾಂದೀಜಿಯವರ ಜೊತೆಗೆ ಹುತಾತ್ಮರ ಪಟ್ಟಿಯಲ್ಲಿ ಕಾಣಸಿಗುವ ಪ್ರಮುಖ ಇತರ ಹೆಸರುಗಳೆಂದರೆ ಭಗತ್‍ಸಿಂಗ್, ಶಿವರಾಮ್ ರಾಜಗುರು, ಸುಖದೇವ್ ತಪುರ್, ಲಾಲಾ ಲಜಪತರಾಯ್, ಝಾನ್ಸಿರಾಣಿ ಲಕ್ಷ್ಮೀಬಾಯಿ ಮುಂತಾದವರು. ಭಗತ್‍ಸಿಂಗ್, ಸುಖದೇವ ಮತ್ತು ರಾಜ್‍ಗುರು ಅವರು ದೇಶಕ್ಕಾಗಿ ನೀಡಿದ ಅಪ್ರತಿಮ ಕಾರ್ಯ, ಸಾಹಸ ಮತ್ತು ತ್ಯಾಗದ ನೆನಪಾಗಿ ಮಾರ್ಚ್ 23ನ್ನು ಕೂಡಾ ಹುತಾತ್ಮರ ದಿನ ಎಂದು ಸ್ಮರಣೆ ಮಾಡಲಾಗುತ್ತದೆ. 1907ರ ಸೆಪ್ಟಂಬರ್ 28ರಂದು ಪಂಜಾಬ್‍ನ ಸಿಖ್ ಸಮುದಾಯದಲ್ಲಿ ಜನಿಸಿದ ಭಗತ್‍ಸಿಂಗ್, ರಾಜ್‍ಗುರು, ಚಂದ್ರಶೇಖರ ಆಜಾದ್, ಸುಖದೇವ್ ಜೊತೆಗೂಡಿ ಗದರ್ ಪಾರ್ಟಿ ಎಂಬುದಾಗಿ ಸಂಘಟನೆ ಹುಟ್ಟು ಹಾಕಿ ಸ್ವಾತಂತ್ರಕ್ಕಾಗಿ ತೀವ್ರ ಚಳುವಳಿ ನಡೆಸಿದರು.

ಲಾಲಾ ಲಜಪತರಾಯ್ ಅವರ ಹತ್ಯೆಗೆ ಪ್ರತಿಕಾರ ನೀಡುವಲ್ಲಿ ಇವರೆಲ್ಲರೂ ಪ್ರಮುಖ ಪಾತ್ರವಹಿಸಿದರು. 1929, 8ನೇ ಎಪ್ರಿಲ್ ರಂದು ‘ಇಖ್ವಿಲಾಬ್ ಜಿಂದಾಬಾದ್’ ಚಳುವಳಿ ಮುಖಾಂತರ ಬ್ರಿಟಿಷ್ ಶಾಸನ ಸಭೆಗೆ ಬಾಂಬ್ ಎಸೆದು ಬ್ರಿಟಿಷ್ ಆಡಳಿತ ವೈಖರಿಗೆ ಭಾರತದ ಯುವ ಜನರ ಅಸಹನೆಯನ್ನು ಎತ್ತಿ ತೋರಿಸಿದರು. 1931ರ ಮಾರ್ಚ್ 31ರಂದು 24ರ ಹರೆಯದ ಭಗತ್‍ಸಿಂಗ್ ಮತ್ತು ಆತನ ಸಂಗಡಿಗರನ್ನು ಈಗಿನ ಪಾಕಿಸ್ತಾನದ ಲಾಹೋರ ಜೈಲಿನಲ್ಲಿ ಮುಂಜಾನೆ 7.30ಕ್ಕೆ ಗಲ್ಲಿಗೇರಿಸಲಾಯಿತು.ಇನ್ನು ಸರಿಯಾಗಿ ಮೀಸೆ ಮೂಡದ ತರುಣರು ನಗುನಗುತ್ತಾ ದೇಶಕ್ಕಾಗಿ ಜೀವ ನೀಡಿದರು. ಸಟ್ಲೆಜ್ ನದಿಯ ತಡದಲ್ಲಿ ಅವರ ದೇಹವನ್ನು ಧಫನ ಮಾಡಲಾಯಿತು. ಇಂದಿಗೂ ಅವರ ನೆನಪಲ್ಲಿ ‘ಹುತಾತ್ಮರ ಮೇಳ’ ವನ್ನು ಭಾರತ – ಪಾಕ್ ಗಡಿಯಲ್ಲಿರುವ ಹುಸೈನ್ ವಾಲಾದ ರಾಷ್ಟೀಯ ಹುತಾತ್ಮರ ಸ್ಮಾರಕವಿರುವ, ಭಗತ್ ಸಿಂಗ್ ನ ಜನ್ಮಸ್ಥಾನವಾದ ಪಿರೋಜ್‍ಪುರದಲ್ಲಿ ವರ್ಷ ವರ್ಷವೂ ನಡೆಸುವುದು ಬಹಳ ಉಲ್ಲೆಖನೀಯ ವಿಚಾರ.

Also Read  ಆನಂದ ಭೈರವಿ ದೇವಿಯ ಸ್ಮರಿಸುತ್ತ ಈ ದಿನದ ರಾಶಿ ಫಲ ನೋಡೋಣ.

ಅದೇ ರೀತಿ ಜುಲೈ 13ರಂದು 22 ಮಂದಿ ಜನರನ್ನು ಮಹಾರಾಜ ಹರಿಸಿಂಗ್‍ನ ದರ್ಬಾರಿನ ಸೈನಿಕರು ಪ್ರತಿಭಟನೆಯ ವೇಳೆ ಕೊಂದಿದ್ದರು. ಅವರ ನೆನಪಿಗಾಗಿ ಜುಲೈ13ರಂದು ಕಾಶ್ಮೀರದಲ್ಲಿ ಹುತಾತ್ಮರ ದಿನ ನಡೆಸಲಾಗುತ್ತದೆ. ಅದೇ ರೀತಿ ನವಂಬರ್ 17ರಂದು ‘ಪಂಜಾಬ್‍ನ ಹುಲಿ’ ಎಂದೇ ಖ್ಯಾತರಾದ ಲಾಲಾಲಜಪತರಾಯ್ ಅವರು ಹುತಾತ್ಮರಾದ ದಿನದ ಸ್ಮರಣೆಗಾಗಿ ಒರಿಸ್ಸಾದಲ್ಲಿ 17ನೇ ನವೆಂಬರ್‍ದಂದು ಹುತಾತ್ಮರ ದಿನ ಎಂದು ಆಚರಿಸಲಾಗುತ್ತದೆ. ಲಾಲಾಲಜಪತರಾಯ್ ಭಾರತ ಕಂಡ ಮಹಾನ್ ಸ್ವಾತಂತ್ರ ಹೋರಾಟಗಾರ ಮತ್ತು ಬ್ರಿಟಿಷರನ್ನು ಭಾರತದಿಂದ ಹೊರದಬ್ಬಲು ತಮ್ಮ ಜೀವವನ್ನೇ ಬಲಿದಾನ ಮಾಡಿದರು. ಇನ್ನು ನವಂಬರ್ 19ರಂದು ದೇಶ ಜನ್ಮ ನೀಡಿದ ಆಪ್ರತಿಮ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮೀಬಾಯಿಯವರ ಜನ್ಮದಿನ. 1857ರ ಸಿಪಾಯಿದಂಗೆಯ ಸಮಯದಲ್ಲಿ ಬ್ರಿಟೀಷರ ವಿರುದ್ಧದ ಸಮರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಳು. ಅದೇ ಯುದ್ಧ ಮುಂದೆ ಬ್ರಿಟೀಷ್ ವಿರುದ್ಧದ ಸ್ವಾತಂತ್ರ್ಯ ಹೋರಾಟಕ್ಕೆ ಹೆಚ್ಚಿನ ಕಿಚ್ಚು ಹಚ್ಚಿಸಿ ರಾಷ್ಟವ್ಯಾಪ್ತಿ ಹರಡಲು ಕಾರಣವಾಯಿತು. ಈ ಸಿಪಾಯಿದಂಗೆಯಲ್ಲಿ ಬಲಿದಾನಗೈದ ಸೈನಿಕರು ಮತ್ತು ಸಿಪಾಯಿಗಳ ನೆನಪಿಗಾಗಿ ಝಾನ್ಸಿ ರಾಣಿ ಹುಟ್ಟಿದ ನವೆಂಬರ್ 19ರಂದು ಹುತಾತ್ಮರ ಸ್ಮರಣೆ ಮಾಡಲಾಗುತ್ತದೆ. 

ನಮ್ಮ ದೇಶದ ಸ್ವಾತಂತ್ರ ಸಮರದಲ್ಲಿ ಲಕ್ಷಾಂತರ ಮಂದಿ ಜೀವ ತೆತ್ತಿದ್ದಾರೆ. ಇಂದು ನಾವು ಅನುಭವಿಸುವ ಸ್ವಾತಂತ್ರದ ಸಿಹಿ ಜೇನಿನ ಸವಿಗಾಗಿ ಕೊಟ್ಯಾಂತರ ಮಂದಿ ನೋವು, ದುಖಃ ದುಮ್ಮಾನ ಮತ್ತು ಕಹಿ ಗಳಿಗೆಗಳನ್ನು ಉಂಡಿದ್ದಾರೆ. ಇಂದಿನ ಈ ಸಂತಸದ ಸುಖ ಜೀವನದ ಸಮಯದಲ್ಲಿ ಈ ದೇಶದ ಒಳಿತಿಗಾಗಿ, ಸ್ವಾತಂತ್ರಕ್ಕಾಗಿ ಬಲಿದಾನಗೈದ ಎಲ್ಲಾ ಯೋಧರನ್ನು, ಸೈನಿಕರನ್ನು, ಸಿಪಾಯಿಗಳನ್ನು, ಮತ್ತು ಆಪ್ರತಿಮ ಹೋರಾಟಗಾರರನ್ನು ಪ್ರತಿನಿತ್ಯ ನೆನೆಯುವುದು ಅಸಾಧ್ಯವಾದರೂ, ವರ್ಷದಲ್ಲಿ ಒಮ್ಮೆಯಾದರೂ ಅವರನ್ನು ನೆನೆದು ಕಣ್ಣಂಚಿನಲ್ಲಿ ಒಂದೆರಡು ಹನಿ ಕಣ್ಣೀರು ಸುರಿಸುವುದರಲ್ಲಿ ಮತ್ತು ಅವರು ನುಡಿದು ನಡೆದ ಆದರ್ಶದ ಹಾದಿಯಲ್ಲಿ ನಾವು ದಿನ ನಿತ್ಯ ನಡೆದಲ್ಲಿ ಈ ಹುತಾತ್ಮರ ದಿನದ ಆಚರಣೆಗೂ ಹೆಚ್ಚಿನ ಮೌಲ್ಯ ಬಂದಿತು. ಮಹಾತ್ಮ ಗಾಂದಿ üಭಗತ್‍ಸಿಂಗ್, ಸುಖದೇವ್ ರಾಜಗುರು, ಝಾನ್ಸಿ ರಾಣಿಲಾಲಾ ಲಜಪತರಾಯ್ ಮುಂತಾದ ಅಪ್ರತಿಮ ದೇಶ ಭಕ್ತರನ್ನು ದಿನಂಪ್ರತಿ ಸ್ಮರಿಸೋಣ ಮತ್ತು ಅವರು ತೋರಿ ಕೊಟ್ಟ ಧೈರ್ಯ, ಸಾಹಸ, ಸತ್ಯ, ಅಹಿಂಸೆ ಮತ್ತು ತ್ಯಾಗದ ದಾರಿಯಲ್ಲಿ ಭಾರತೀಯರಾದ ನಾವೆಲ್ಲ ಹೆಜ್ಜೆ ಹಾಕೋಣ ಮತ್ತು ಅದರಲ್ಲಿಯೇ ನಮ್ಮ ನಿಮ್ಮೆಲ್ಲರ ಹಾಗೂ ದೇಶದ, ವಿಶ್ವದ ಶಾಂತಿ ಮತ್ತು ಸಾಮರಸ್ಯ ಅಡಗಿದೆ.
ಡಾ|| ಮುರಲೀಮೋಹನ್ ಚೂಂತಾರು
ಸುರಕ್ಷಾದಂತ ಚಿಕಿತ್ಸಾಲಯ

Also Read  ಬಸ್ ಹರಿದು ಶಾಲಾ ವಿದ್ಯಾರ್ಥಿನಿ ಮೃತ್ಯು

 

 

error: Content is protected !!
Scroll to Top