(ನ್ಯೂಸ್ ಕಡಬ) newskadaba.com.ಕಡಬ,ಜ.26.ಶ್ರೀ ಧರ್ಮಸ್ಥಳ ಭಗವಾನ್ ಶ್ರೀ ಬಾಹುಬಲಿ ಚತುರ್ಥ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಇನ್ನು 14 ದಿನಗಳಷ್ಟೇ ಬಾಕಿ. ವೈಭವಪೂರ್ಣ ಮಹಾಮಜ್ಜನ ವೀಕ್ಷಿಸಲು ಲಕ್ಷಾಂತರ ಭಕ್ತರು ಕಾತರರಾಗಿದ್ದು, ಬಾಹುಬಲಿ ಬೆಟ್ಟದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.ಆಚಾರ್ಯ ವರ್ಧಮಾನ ಸಾಗರ್‌ಜಿ ಮಹಾರಾಜ್ ಮತ್ತು ಆಚಾರ್ಯ ಪುಷ್ಪದಂತ ಸಾಗರ್‌ಜಿ ಮಹಾರಾಜ್, ಶ್ರವಣಬೆಳಗೊಳದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಯವರ ಮಾರ್ಗದರ್ಶನ ಹಾಗೂ ಕಾರ್ಕಳ ದಾನ ಶಾಲಾ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕರ ನೇತೃತ್ವದಲ್ಲಿ ಫೆ.9ರಿಂದ 18ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ.
ಪೂರ್ವತಯಾರಿಯ ಪ್ರಮುಖ ಭಾಗವಾಗಿರುವ ಅಟ್ಟಳಿಗೆ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದೆ. 13.7 ಮೀಟರ್ ಅಗಲ, 62 ಅಡಿ ಎತ್ತರದ ಆರು ಅಂತಸ್ತಿನ ಅಟ್ಟಳಿಗೆಯನ್ನು ಸುಮಾರು 80 ಟನ್ ಸ್ಟೀಲ್ ಬಳಸಿ ನಿರ್ಮಿಸಲಾಗಿದೆ. 400ರಿಂದ 500 ಜನ ಅಟ್ಟಳಿಗೆಯ ಮೇಲೆ ನಿಂತು ಅಭಿಷೇಕ ನಡೆಸಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಅಭಿಷೇಕ ದ್ರವ್ಯ ಸಂಗ್ರಹಿಸಿಡಲು ಅಗತ್ಯ ಸ್ಥಳಾವಕಾಶ ಕಲ್ಪಿಸಲಾಗಿದೆ. ಅಟ್ಟಳಿಗೆಯ ಹಿಂಭಾಗದಿಂದ ಮೆಟ್ಟಿಲು, ವಸ್ತುಗಳನ್ನು ಕೊಂಡೊಯ್ಯಲು ಮತ್ತು ಜನರನ್ನು ಸಾಗಿಸಲು ಎರಡು ಪ್ರತ್ಯೇಕ ಲಿಫ್ಟ್‌ಗಳನ್ನೂ ಅಳವಡಿಸಲಾಗಿದೆ. ಮಾಣಿಯ ಮಹಾವೀರ ಪ್ರಸಾದ್ ಇಂಡಸ್ಟ್ರಿಯ ಮಹಾಪದ್ಮಪ್ರಸಾದ್ ಮತ್ತು ಮಹಾವೀರ ಅಟ್ಟಳಿಗೆ ನಿರ್ಮಾಣವನ್ನು 15 ದಿನಗಳಲ್ಲಿ ಪೂರೈಸಿದ್ದಾರೆ. ಅಟ್ಟಳಿಗೆ ನಿರ್ಮಾಣದ ಪೂರಕ ಕೆಲಸಗಳು ನಡೆಯುತ್ತಿವೆ.
ಇನ್ನುಳಿದಂತೆ ಲೋಕೋಪಯೋಗಿ ಇಲಾಖೆಯಿಂದ ಧರ್ಮಸ್ಥಳದಲ್ಲಿ ರಸ್ತೆಗಳ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ನೇತ್ರಾವತಿ ಸ್ನಾನಘಟ್ಟದಿಂದ ಮುಖ್ಯದ್ವಾರ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮೂಲಕ ನೇತ್ರಾವತಿ, ರತ್ನಗಿರಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾರ್ಯ ಬಿರುಸಿನಿಂದ ಸಾಗಿದೆ. ಕ್ಷೇತ್ರದಲ್ಲಿ ಇತರ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು, ಅಂದಗೊಳಿಸುವ ಕೆಲಸಗಗಳೂ ನಡೆಯುತ್ತಿವೆ.ಫೆ.9ರಂದು ಬೆಳಗ್ಗೆ 6 ಗಂಟೆಯಿಂದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜೆ ಬಳಿಕ ರತ್ನಗಿರಿಗೆ ಅಗ್ರೋದಕ ಮೆರವಣಿಗೆಯೊಂದಿಗೆ ಮಹಾಮಸ್ತಕಾಭಿಷೇಕದ ಮೆರವಣಿಗೆಗೆ ಚಾಲನೆ. ಬಾಹುಬಲಿ ಬೆಟ್ಟದಲ್ಲಿ ಇಂದ್ರ ಪ್ರತಿಷ್ಠೆ. 8.45ಕ್ಕೆ ತೋರಣ ಮುಹೂರ್ತ, ವಿಮಾನ ಶುದ್ಧಿ, 12.35ಕ್ಕೆ ಮುಖವಸ್ತ್ರ ಉದ್ಘಾಟನೆ, ಬಾಹುಬಲಿ ಸ್ವಾಮಿಗೆ 24 ಕಲಶಗಳಿಂದ ಪಾದಾಭಿಷೇಕ ನಡೆಯಲಿದೆ. 10ರಂದು 12.35ಕ್ಕೆ ಧ್ವಜಾರೋಹಣ ವಿಧಿ ಬಳಿಕ 54 ಕಲಶಗಳಿಂದ ಪಾದಾಭಿಷೇಕ. 11ರಂದು 108 ಕಲಶಗಳಿಂದ ಪಾದಾಭಿಷೇಕ. 12ರಿಂದ 15ರವರೆಗೆ 216 ಕಲಶಗಳಿಂದ ಪಾದಾಭಿಷೇಕ ಸಹಿತ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಫೆ.16ರಂದು ಬೆಳಗ್ಗೆ 8.45ಕ್ಕೆ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ 1008 ಪುಣ್ಯಾಮೃತ ಕಲಶಗಳಿಂದ ವಿಗ್ರಹ ಪ್ರತಿಷ್ಠಾಪಕರಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬಸ್ಥರಿಂದ ಪ್ರಥಮ ಮಸ್ತಕಾಭಿಷೇಕ ನಡೆಯಲಿದೆ. ಸಂಜೆ ಧ್ವಜಪೂಜೆ, ಶ್ರೀಬಲಿ ವಿಧಾನ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಫೆ.17 ಮತ್ತು 18ರಂದೂ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಲಿದೆಮಹಾಮಸ್ತಕಾಭಿಷೇಕದ ವ್ಯವಸ್ಥಿತ ನಿರ್ವಹಣೆಗಾಗಿ 26 ಸಮಿತಿ ರಚಿಸಲಾಗಿದ್ದು, ಪ್ರಧಾನ ಸಂಚಾಲಕರಾಗಿ ಡಿ.ಸುರೇಂದ್ರ ಕುಮಾರ್, ಮತ್ತು ಸಹಸಂಚಾಲಕರಾಗಿ ಡಿ.ಹರ್ಷೇಂದ್ರ ಕುಮಾರ್ ಮತ್ತು ಕಾರ್ಯದರ್ಶಿಯಾಗಿ ಮಹಾವೀರ ಅಜ್ರಿ ಮತ್ತು ಎ.ವಿ. ಶೆಟ್ಟಿಯವರನ್ನೊಳಗೊಂಡ ಸಮಿತಿ ರಚಿಸಲಾಗಿದೆ.ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ ಸಚಿವರು, ಮುನಿಗಳ ಸಹಿತ ದೇಶ-ವಿದೇಶಗಳ ಲಕ್ಷಾಂತರ ಭಕ್ತರು 10 ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.