(ನ್ಯೂಸ್ ಕಡಬ) newskadaba.com.ಕಡಬ,ಜ.26. ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಸಡಕ್ ಸುರಕ್ಷಾ-ಜೀವನ ರಕ್ಷಾ ಎಂಬ ಧ್ಯೇಯದೊಂದಿಗೆ ಫೆಬ್ರವರಿ 4 ರಿಂದ 10 ರವರೆಗೆ ಏರ್ಪಡಿಸಲಾಗುವುದು. ಈ ಸಂದರ್ಭದಲ್ಲಿ ವಿವಿಧ ಶಾಲಾ ಕಾಲೇಜುಗಳಲ್ಲಿ ರಸ್ತೆ ಸುರಕ್ಷತೆ, ವಾಹನ ಚಾಲನೆ ರಸ್ತೆ ನಿಯಮಗಳು ವಾಹನ ಚಲಾವಣೆ ಸಮಯದಲ್ಲಿ ಸೀಟ್‍ಬೆಲ್ಟ್ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮಟ್ ಧರಿಸುವ ಅಗತ್ಯತೆ ಕುರಿತು ಕಾರ್ಯಾಗಾರವನ್ನು ಏರ್ಪಡಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂಥ್ ಸೆಂಥಿಲ್ ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಸ್ತೆ ಸುರಕ್ಷತಾ ಸಪ್ತಾಹದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ರಾಷ್ಟ್ರೀಯ ಸುರಕ್ಷತಾ ಸಪ್ತಾಹವನ್ನು ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟಿಸಲಾಗುವುದು ಹಾಗೂ ಸಾರ್ವಜನಿಕರಿಗೆ ರಸ್ತೆ ನಿಯಮಗಳ ಕುರಿತು ಅರಿವು ನೀಡಲಾಗುವುದು. ವಾಹನ ಚಾಲನಾ ತರಬೇತಿ ಸಂಸ್ಥೆಗಳಿಂದ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. 2ನೇ ದಿನದಿಂದ 7ನೇ ದಿನದವರೆಗೂ ಶಾಲಾ ಮಕ್ಕಳಿಗೆ ಸ್ಲೋಗನ್ ಹಾಗೂ ಬಿತ್ತಿಪತ್ರ ಸ್ಪರ್ಧೆ, ಚರ್ಚಾ ಸ್ಪರ್ಧೆ, ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. 18 ವರ್ಷದಿಂದ ಕೆಳಗಿನ ಮಕ್ಕಳು ವಾಹನಚಲಾವಣೆ ಮಾಡದಂತೆ ಪಾಲಕರು ಗಮನ ಹರಿಸಬೇಕು. ರಸ್ತೆ ಸುರಕ್ಷತಾ ನಿಯಮವನ್ನು ಪಾಲಿಸಿದಲ್ಲಿ ಯಾವುದೇ ಅಪಘಾತವಾಗುವುದಿಲ್ಲ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಪಿ ಗಂಗಾಧರ್ ತಿಳಿಸಿದರು. ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಎಲ್ಲಾ ಇಲಾಖಾಧಿಕಾರಿಗಳು ಜಾಗೃತಿ ಸಿಟಿ ಕೌನ್ಸಿಲ್ ತರಬೇತುದಾರ ಭುಜಂಗ ಶೆಟ್ಟಿ ಉಪಸ್ಥಿತರಿದ್ದರು.