ದ.ಕ.ಹಾಲು ಒಕ್ಕೂಟ ವತಿಯಿಂದ ಉಚಿತವಾಗಿ  ಜಾನುವಾರುಗಳಿಗೆ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com .ಮಂಗಳೂರು, ಜ.24.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 246517 (ದನ, ಕರು, ಎಮ್ಮೆ, ಹಂದಿ) ಜಾನುವಾರುಗಳಿಗೆ ಪಲ್ಸ್ ಪೋಲಿಯೋ ಮಾದರಿ 15 ನೇ ಸುತ್ತಿನ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮವನ್ನು ಜನವರಿ 28 ರಿಂದ ಫೆಬ್ರವರಿ 16 ರವರೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮತ್ತು ದ.ಕ.ಹಾಲು ಒಕ್ಕೂಟ ವತಿಯಿಂದ ಉಚಿತವಾಗಿ ಹಮ್ಮಿಕೊಳ್ಳಲಾಗುತ್ತಿದೆ.

ಕಾಲು ಬಾಯಿ ಜ್ವರವು ವೈರಾಣುವಿನಿಂದ ಹರಡುವ ರೋಗವಾಗಿದ್ದು, ರೋಗ ತಗುಲಿದ ನಂತರ ಚಿಕಿತ್ಸೆ ಮತ್ತು ನಿಯಂತ್ರಣ ಕಷ್ಟಸಾಧ್ಯವಾಗಿರುತ್ತದೆ. ಆದುದರಿಂದ ರೋಗವು ಬಾರದ ರೀತಿಯಲ್ಲಿ ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ಜಾನುವಾರುಗಳಿಗೆ ಲಸಿಕೆಯನ್ನು ಹಾಕುವುದು ಏಕೈಕ ಮಾರ್ಗವಾಗಿರುತ್ತದೆ.ರೋಗ ಬಂದ ಜಾನುವಾರುಗಳಲ್ಲಿ ಸಾವು ಸಂಭವಿಸುವುದು ವಿರಳವಾದರೂ 2013 ರಲ್ಲಿ ರಾಜ್ಯದಾದ್ಯಂತ ತೀವ್ರವಾಗಿ ಹರಡಿದ ರೋಗವು ಸಾವಿರಾರು ಜಾನುವಾರುಗಳನ್ನು ಬಲಿ ತೆಗೆದುಕೊಂಡಿರುತ್ತದೆ.

ಸದರಿ ರೋಗದ ಚಿಕಿತ್ಸಾ ವಿಧಾನವೂ ಸಹ ಬಹಳ ತ್ರಾಸದಾಯಕ ಮತ್ತು ಆರ್ಥಿಕವಾಗಿ ನಷ್ಟ ಉಂಟು ಮಾಡುವಂತಹದ್ದಾಗಿರುತ್ತದೆ. ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿದ್ದರೂ ಸಹ ಪ್ರತಿ 6 ತಿಂಗಳಿಗೊಮ್ಮೆ ಕೈಗೊಳ್ಳುವ ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ ತಪ್ಪದೇ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸಿ ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದು ಅವಶ್ಯಕವಾಗಿರುತ್ತದೆ.ಜಿಲ್ಲೆಯಾದ್ಯಂತ ಪಶುಪಾಲನಾ ಇಲಾಖೆ ಮತ್ತು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಗ್ರಾಮಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ನೀಡಲಿದ್ದಾರೆ.

Also Read  ಹಿಂದಿ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ

ಸದರಿ ಕಾರ್ಯಕ್ರಮದ ಯಶಸ್ವಿಗಾಗಿ 286 ಸಿಬ್ಬಂದಿಗಳನ್ನೊಳಗೊಂಡ ಒಟ್ಟು 34 ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡಕ್ಕೆ ಒಂದು ವಾಹನದ ವ್ಯವಸ್ಥೆ ಮಾಡಿಕೊಳ್ಳಲಾಗಿರುತ್ತದೆ. ಲಸಿಕೆ ಹಾಕುವ ಹಿಂದಿನ ದಿನ ಇಲಾಖೆಯ ಸಿಬ್ಬಂದಿಗಳು ಹಳ್ಳಿಗಳಲ್ಲಿ ಪ್ರಚಾರ ನಡೆಸಲಿರುವರು.   ನಿಗಧಿತ ದಿನಾಂಕ ಮತ್ತು ಸಮಯದಂದು ಜಾನುವಾರು ಮಾಲೀಕರುಗಳು ದನ, ಕರು, ಎಮ್ಮೆ ಮತ್ತು ಹಂದಿಗಳಿಗೆ ಲಸಿಕೆ ಹಾಕಿಸುವುದರ ಮೂಲಕ ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಇಲಾಖಾವತಿಯಿಂದ ಕೋರಲಾಗುತ್ತಿದೆ.  ಅದೇ ರೀತಿ ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳ ಸರ್ವ ಸದಸ್ಯರು ಮತ್ತು ಅಧ್ಯಕ್ಷರುಗಳು, ಹಾಲು ಒಕ್ಕೂಟದ ಅಧ್ಯಕ್ಷರು ಮತ್ತು ನಿರ್ದೇಶಕರುಗಳು, ಗ್ರಾಮ ಪಂಚಾಯತ್‍ಗಳು ಇತರೆ ಸಂಘ ಸಂಸ್ಥೆಗಳು ಸಕ್ರಿಯವಾಗಿ ಈ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದರಿ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಹಕರಿಸಲು ಇಲಾಖಾವತಿಯಿಂದ ವಿನಂತಿಸಿದೆ. ರಾಜ್ಯಾದ್ಯಂತ ಜನವರಿ 28 ರಿಂದ ಪ್ರಾರಂಭವಾಗುವ 15 ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮದಲ್ಲಿ ರೈತಬಾಂಧವರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಉಪನಿರ್ದೇಶಕರು (ಆಡಳಿತ), ಪಶುಪಾಲನಾ ಇಲಾಖೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಪ್ರಧಾನ ತಾಂತ್ರಿಕ್ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

error: Content is protected !!
Scroll to Top