(ನ್ಯೂಸ್ ಕಡಬ) newskadaba.com.ಬೆಂಗಳೂರು, ಜ.24. ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕದ ಮಾಹಿತಿಯಿರುವ ಫಲಕಗಳನ್ನು ಎಲ್ಲಾ ಶಾಲೆಗಳ ಮುಂದೆ ಅಳವಡಿಸುವ ಸಲುವಾಗ ಸುತ್ತೋಲೆ ಹೊರಡಿಸಲು ಎರಡು ವಾರಗಳ ಗಡುವು ನೀಡಲಾಗಿದೆ. 2015ರಲ್ಲಿಯೇ ಶುಲ್ಕ ಮಾಹಿತಿ ಫಲಕ ಕಡ್ಡಾಯಗೊಳಿಸಿ ಹೊರಡಿಸಿರುವ ಸುತ್ತೋಲೆಯನ್ನು ಎರಡು ವಾರಗಳಲ್ಲಿ ಅನುಷ್ಠಾನಗೊಳಿಸಿ ಆ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ವಕೀಲ ಎನ್‌ಪಿ ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಮತ್ತು ನ್ಯಾ. ಪಿಎಸ್ ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ವಿಚಾರಣೆ ವೇಳೆ ಸರ್ಕಾರಿ ವಕೀಲರು ವಾದ ಮಂಡಿಸಿ ಶುಲ್ಕದ ವಿವರ ಫಲಕಗಳನ್ನು ಎಲ್ಲಾ ಶಾಲೆಗಳ ಮುಂದೆ ಅಳವಡಿಸುವುದು ಕಡ್ಡಾಯಗೊಳಿಸಿ 2015ರ ಏ.13ರಂದು ಶಿಕ್ಷಣ ಇಲಾಖೆಗೆ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯನ್ನು ಅನುಷ್ಠಾನಗೊಳಿಸಿ ಪ್ರಮಾಣಪತ್ರ ಸಲ್ಲಿಸಲಾಗುವುದು ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಪೀಠ ಮುಂದಿನ ವಿಚಾರಣೆಯೊಳಗೆ ರಾಜ್ಯದ ಎಲ್ಲ ಖಾಸಗಿ ಶಾಲೆಗಳ ಮುಂದೆ ಶುಲ್ಕದ ವಿವರ ಫಲಕ ಹಾಕುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದೆ.