ಕಡಬ: ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ತರಬೇತಿ ಕಾರ್ಯಗಾರ

(ನ್ಯೂಸ್ ಕಡಬ) newskadaba.com ಕಡಬ, ಜ.23.  ದ.ಕ.ಜಿಲ್ಲಾ ಪಂಚಾಯತ್, ತಾ.ಪಂ., ಕಡಬ ಗ್ರಾ.ಪಂ. ಇದರ ಆಶ್ರಯದಲ್ಲಿ ಸಮುದಾಯ ಸ್ವಯಂ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ಜ.19ರಂದು ಕಡಬ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ತರಬೇತಿ ಕಾರ್ಯಗಾರ ನಡೆಯಿತು.ಕಡಬ ಗ್ರಾ.ಪಂ. ಸದಸ್ಯ ಕೋಡಿಂಬಾಳ ಕುಡಿಯುವ ನೀರಿನ ಸಮಿತಿ ಅಧ್ಯಕ್ಷ ಎ.ಎಸ್. ಶರೀಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ನೀರಿನ ಬಳಕೆಯಲ್ಲಿ ಜಾಗೃತೆ ವಹಿಸಬೇಕಾಗಿದ್ದು ನೀರನ್ನು ಮಿತವಾಗಿ ಬಳಸಬೇಕಾಗಿದೆ. ಮುಂದಿನ ದಿನಗಳಲ್ಲಿ ನೀರಿಗೂ ಆಹಾಕಾರ ಪಡಬೇಕಾಗಿದ್ದು ನಮ್ಮ ದ.ಕ., ಉಡುಪಿ ಜಿಲ್ಲೆಗಳಿಗೆ ಇಲ್ಲಿಯವರೆಗೆ ನೀರಿನ ಸಮಸ್ಯೆ ಉದ್ಭವವಾಗಿರುವುದಿಲ್ಲ, ಮುಂದೆ ಇಲ್ಲಿಯೂ ಸಮಸ್ಯೆಯಾಗಬಹುದು ಈ ನಿಟ್ಟಿನಲ್ಲಿ ಎಲ್ಲರೂ ಗಮನಹರಿಸುವುದಲ್ಲದೆ ನೀರು ಎಲ್ಲೂ ಪೋಲಾಗದಂತೆ ಜಾಗೃತೆವಹಿಸಬೇಕಾಗಿದೆ.

ನಮ್ಮ ಗ್ರಾ.ಪಂ.ನಿಂದ ಪ್ರತಿಯೊಬ್ಬರಿಗೂ ಸಮರ್ಪಕವಾಗಿ ಕುಡಿಯುವ ನೀರನ್ನು ನೀರು ನಿರ್ವಾಹಕರಿಂದ ನಿರ್ವಾಹಣೆಗೆ ಕ್ರಮಕೈಗೊಳ್ಳಲಾಗಿದ್ದು, ಫಲಾನುಭವಿಗಳು ತಿಂಗಳಿಗೆ ಕಟ್ಟಬೇಕಾದ ನೀರಿನ ತೆರಿಗೆಯನ್ನು ಕ್ಲಪ್ತ ಸಮಯಕ್ಕೆ ಪಾವತಿಸಬೇಕಾಗಿ ಸೂಚಿಸಿದ ಅವರು ಪ್ರತಿಯೊಬ್ಬರೂ ನೀರಿನ ಪ್ರತಿಯೊಂದು ಹನಿಯೂ ಅತ್ಯಮೂಲ್ಯವಾಗಿದೆ ಎಂಬುದನ್ನು ಮರೆಯಬೇಡಿ ಎಂದರು. ಜಿ.ಪಂ. ಸಮುದಾಯ ಸಂಯೋಜನಾಧಿಕಾರಿ ನರೇಂದ್ರ ಬಾಬು ನೀರು ಬಳಕೆ ಹಾಗೂ ನಿರ್ವಹಣೆ ಬಗ್ಗೆ ತರಬೇತಿ ನೀಡಿ ಸ್ವಚ್ಚ ಭಾರತ ಅಭಿಯಾನದ ಬಗ್ಗೆ ವಿವರಿಸಿ ಸ್ವಚ್ಚತೆಗೆ ಆದ್ಯತೆ ನೀಡಬೇಕೆಂದರು. ನಮ್ಮ ರಾಜ್ಯವನ್ನು ಬಯಲು ವಿಸರ್ಜನೆ ಮುಕ್ತ ರಾಜ್ಯವನ್ನಾಗಿಸಿದ್ದು ಮನೆಗೊಂದು ಶೌಚಾಲಯ ಕಡ್ಡಾಯವಾಗಿ ಇರಲೇಬೇಕು, ಅದೇ ರೀತಿ ನಮ್ಮ ಮನೆ ಪರಿಸರ ಸ್ವಚ್ಚತೆಯನ್ನು ಸದಾ ಕಾಪಾಡಿಕೊಳ್ಳಬೇಕಾಗಿದ್ದು, ಈ ನಿಟ್ಟಿನಲ್ಲಿ 2018-19ನೇ ಸಾಲಿನಲ್ಲಿ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮ ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆಸಲಾಗುತ್ತಿದ್ದು ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದರು.

ಕಡಬ ಚರ್ಚ್ ಅಂಗನವಾಡಿ ಕಾರ್ಯಕರ್ತೆ ನಳಿನಿ ರೈ ಮಾತನಾಡಿ ಕುಡಿಯುವ ನೀರನ್ನು ಮಿತವಾಗಿ ಎಲ್ಲರಿಗೂ ಸಿಗುವಂತೆ ಬಳಸಿಕೊಳ್ಳಬೇಕೆಂದು ತಾವೇನೋ ಸಲಹೆ ನೀಡುತ್ತೀರಿ ಆದರೆ ನಮ್ಮ ಕುಟ್ರುಪಾಡಿ ಗ್ರಾ.ಪಂ.ನಲ್ಲಿ ನೀರು ನಿರ್ವಹಕರೇ ತಮ್ಮ ಮನೆಗೆ ತೋಟಕ್ಕೆ ಬೇಕಾಬಿಟ್ಟಿ ನೀರು ಬಿಟ್ಟುಕೊಳ್ಳುತ್ತಾರೆ, ಉಳಿದವರಿಗೆ ಕುಡಿಯಲು ನೀರು ಸಿಗುವುದಿಲ್ಲ ಎಂದು ದೂರಿದರೆ, ಭಾಗವಹಿಸಿದ ಹೆಚ್ಚಿನವರು ಇದೇ ರೀತಿ ಎಲ್ಲಾ ಕಡೆಗಳಲ್ಲೂ ಆಗುತ್ತದೆ.ಕೋಡಿಂಬಾಳದ ಮಡ್ಯಡ್ಕದಲ್ಲಿ ನೀರಿನ ಟ್ಯಾಂಕ್‍ನ ಕೆಳಭಾಗದಲ್ಲಿ ರುವವರೂ ತಮ್ಮ ಇಷ್ಟದಂತೆ ನೀರು ಬಿಟ್ಟುಕೊಳ್ಳುತ್ತಾರೆ, ನೀರು ನಿರ್ವಾಹಕರು ನೀರು ಗೇಟ್‍ವಾಲ್ ತಿರುಗಿಸಿ ಅಲ್ಲಿಂದ ತೆರಳಿದಂತೆ ತಮ್ಮಿಷ್ಟದಂತೆ ಗೇಟ್‍ವಾಲ್ ತಿರುಗಿಸಿ ಅವರೇ ಒಂದಿಷ್ಟು ಜನ ನೀರನ್ನು ಬಳಸಿಕೊಳ್ಳುತ್ತಾರೆ, ಉಳಿದ ಎತ್ತರದಲ್ಲಿರುವವರಿಗೆ ನೀರೇ ಬರುವುದಿಲ್ಲ ಎಂದು ಆಭಾಗದ ಗ್ರಾಮಸ್ಥರು ಇದರ ಬಗ್ಗೆ ಗ್ರಾ.ಪಂ.ಗೆ ದೂರು ನೀಡಲಾಗಿದ್ದರೂ ಗ್ರಾ.ಪಂ. ಅಧ್ಯಕ್ಷರು, ಅಧಿಕಾರಿ ಸಿಬ್ಬಂದಿಗಳು ಸ್ಥಳ ತನಿಖೆ ನಡೆಸಿ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲಿ ಈಗಲೂ ಅದೇ ಪರಿಸ್ಥಿತಿ ಇದೆ ಎಂದು ದೂರಿದರು.

ಈ ಬಗ್ಗೆ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ ರವರು, ಈ ವಿಚಾರ ನಮ್ಮ ಗಮನಕ್ಕೆ ಬಂದಿದ್ದು ನಾವು ಸೂಕ್ತ ಎಚ್ಚರಿಕೆ ನೀಡಿದ್ದೇವೆ. ಇನ್ನು ಮುಂದೆ ಅಂತಹವರ ನೀರಿನ ಸಂಪರ್ಕವನ್ನೇ ನಿಲ್ಲಿಸಿ ಅವರಿಂದ ಅವರಿಂದ ದಂಡ ವಸೂಲಿ ಮಾಡಲಾಗುವುದು ಎಂದರು. ಸವಣೂರು ಗ್ರಾ.ಪಂ. ಸದಸ್ಯೆ ವೇದಾವತಿ, ಕುಟ್ರುಪಾಡಿ ಆಶಾ ಕಾರ್ಯಕರ್ತೆ ಜಯಶ್ರೀ, ಮರ್ದಾಳ ನಡುಮಜಲು ಅಂಗನವಾಡಿ ಕಾರ್ಯಕರ್ತೆ ಮೋಹಿನಿ, ಮಡ್ಯಡ್ಕ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ, ಕೋಡಿಂಬಾಳ ಆಶಾ ಕಾರ್ಯಕರ್ತೆ ಆಶಾಕುಮಾರಿ, ಎನ್.ಆರ್.ಎಂ. ಒಕ್ಕೂಟದ ಅಧ್ಯಕ್ಷೆ ಶೀಲಾ ವರ್ಗೀಸ್ ಪಿಜಕಳ ಸೇರಿದಂತೆ ಹಲವಾರು ಫಲಾನುಭವಿಗಳು, ನೀರು ನಿರ್ವಾಹಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ವಿವಿಧ ಸಲಹೆ ಸೂಚನೆ ನೀಡಿದರು. ಕಡಬ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಸ್ವಾಗತಿಸಿ, ಪಂ. ಸಿಬ್ಬಂದಿ ಹರೀಶ್ ಬೆದ್ರಾಜೆ ವಂದಿಸಿದರು. ಗುಮಾಸ್ತ ಪದ್ಮಯ್ಯ, ಸಿಬ್ಬಂದಿ ಶಶಿಕಲಾ, ರಿಯಾಜ್ ಸಹಕರಿಸಿದರು. ಗ್ರಾ.ಪಂ. ವತಿಯಿಂದ ಬೆಳಿಗ್ಗೆ ಲಘು ಉಪಹಾರ ಹಾಗೂ ಮದ್ಯಾಹ್ನ ಬೋಜನದ ವ್ಯವಸ್ಥೆ ಮಾಡಲಾಗಿತ್ತು.

 

error: Content is protected !!

Join the Group

Join WhatsApp Group