ಕಡಬ: ತಾಲೂಕಿನಾದ್ಯಂತ ಮಂಗಗಳ ಸಾವಿನ ಸಂಖ್ಯೆ ಆರಕ್ಕೆ ► ಜನರ ಭೀತಿ ತಾರಕಕ್ಕೆ: ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ

(ನ್ಯೂಸ್ ಕಡಬ) newskadaba.com ಕಡಬ, ಜ.23. ಮಲೆನಾಡು ಜಿಲ್ಲೆಗಳಲ್ಲಿ ಇತ್ತೀಚೆಗೆ ಮಂಗನ ಖಾಯಿಲೆ ಆವರಿಸಿ ಜನರ ಸಾವು ನೋವು ಅನುಭವಿಸಿದ ಬೆನ್ನಲ್ಲೇ ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಂಗನ ಖಾಯಿಲೆ ಇರುವುದು ದೃಢಪಟ್ಟಿದ್ದು, ಕಡಬ ತಾಲೂಕಿನಾದ್ಯಂತ ಮಂಗಗಳ ಸಾವಿನ ಸಂಖ್ಯೆ ಆರಕ್ಕೆ ಏರಿದ್ದು, ಜನರ ಭೀತಿ ತಾರಕಕ್ಕೇರಿದೆ, ಇನ್ನೊಂದೆಡೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. .ಈಗಾಗಲೇ ತಾಲೂಕಿನ ಕುಟ್ರುಪ್ಪಾಡಿ ಹಾಗೂ ಹಳೆನೇರೆಂಕಿ ಗ್ರಾಮದಲ್ಲಿ ಒಂದು ಕುಟ್ರುಪ್ಪಾಡಿ ಗ್ರಾಮದಲ್ಲಿ ಮೂರು ಮಂಗಗಳು ಸತ್ತಿರುವ ಸುದ್ದಿಯಾಗುತ್ತಿದ್ದಂತೆ ತಾಲೂಕಿನ ಬೆಳಂದೂರು ಗ್ರಾಮದ ಕೋಕ್ಯಾ ಎಂಬಲ್ಲಿ ಮಂಗವೊಂದು ಸಾಯುವುದರ ಮೂಲಕ ತಾಲೂಕಿನಲ್ಲಿ ಮಂಗಗಳ ಸಾವಿನ ಸಂಖ್ಯೆ ಆರಕ್ಕೆ ಏರಿದೆ. ಇದರಿಂದ ಜನರ ಭಯ ಕೂಡಾ ಜಾಸ್ತಿಯಾಗಿದೆ, ಆದರೆ ಆರೋಗ್ಯ ಇಲಾಖೆ ಕೂಡಾ ಸಮ್ಮನೆ ಕೂತಿಲ್ಲ, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಶವ ಪತ್ತೆಯಾದ ಸುದ್ದಿ ತಿಳಿದ ತಕ್ಷಣ ಆರೋಗ್ಯ ಇಲಾಖೆ ಸ್ಥಳಕ್ಕೆ ತೆರಳಿ ಸೂಕ್ತ ಕಾರ್ಯಗಳನ್ನು ಮಾಡುತ್ತಿದೆ. ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ.

ಹಳೆನೇರೆಂಕಿಯಲ್ಲಿ ಪತ್ತೆಯಾದ ಮಂಗನ ಕಳೇಬರಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಶಿವಮೊಗ್ಗಕ್ಕೆ ಪರೀಕ್ಷೆಗ ಕಳುಹಿಸಿಕೊಡಲಾಗಿದೆ. ಕುಟ್ರುಪ್ಪಾಡಿ ಗ್ರಾಮದ ಉಳಿಪ್ಪು ಅರಣ್ಯ ಪ್ರದೇಶದಲ್ಲಿ ಸತ್ತ ಮಂಗನ ಶವ ಸಂಪೂರ್ಣ ಕೊಳೆತು ಹೋಗಿರುವುದರಿಂದ ಅದನ್ನು ಯಾವುದೇ ಪರೀಕ್ಷೆಗೆ ಒಳಪಡಿಸಲು ಸಾಧ್ಯವಾಗಿಲ್ಲ, ಇದಕ್ಕೂ ಮುನ್ನ ಕುಟ್ರುಪ್ಪಾಡಿ ಗ್ರಾಮದ ಉರುಂಬಿ ಎಂಬಲ್ಲಿ ಕೂಡಾ ಮಂಗವೊಂದು ಸತ್ತಿರುವುದು ಬೆಳಕಿಗೆ ಬಂದಿದೆ. ಈ ಮಧ್ಯೆ ವಾರದ ಹಿಂದೆ ಕುಟ್ರುಪ್ಪಾಡಿ ಗ್ರಾಮದ ಕುಂಟೋಡಿ ಜಯಚಂದ್ರ ರೈ ಅವರಿಗೆ ಸೇರಿದ ತೋಟದಲ್ಲಿ ಪತ್ತೆಯಾಗಿದ್ದ ಮಂಗನ ಶವವನ್ನು ಸ್ಥಳೀಯರು ಮಣ್ಣಿನಲ್ಲಿ ಹೂತು ಬಳಿಕ ಕಡಬ ಸರಕಾರಿ ಆಸ್ಪತ್ರೆಗೆ ಮಾಹಿತಿ ನೀಡಿದ್ದರು. ಅದರಂತೆ ಸ್ಥಳಕ್ಕೆ ಭೇಟಿ ನೀಡಿದ ಬೆಳ್ತಂಗಡಿಯ ಕ್ಯಾಸನೂರು ಕಾಡಿನ ಕಾಯಿಲೆ (ಕೆಎಫ್‍ಡಿ) ಘಟಕದ ವೈದ್ಯಾಧಿಕಾರಿಗಳು ಪರಿಸರದಲ್ಲಿ ಕಂಡುಬಂದ ಉಣುಗುಗಳನ್ನು ಸಂಗ್ರಹಿಸಿ ಪರೀಕ್ಷೇಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಕುಟ್ರುಪ್ಪಾಡಿಯ ಉರುಂಬಿ ಶೇಖರ ಗೌಡ ಅವರ ತೋಟದಲ್ಲಿ ಹಲವು ದಿನಗಳ ಹಿಂದೆ ಮಂಗ ಸತ್ತಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಇದರಿಂದ ಕುಟ್ರುಪ್ಪಾಡಿ ಗ್ರಾಮವೊಂದರಲ್ಲೇ ನಾಲ್ಕು ಮಂಗಗಳು ಸಾವನ್ನಪ್ಪಿರುವುದು ದೃಢಪಟ್ಟಿದೆ. ಇದೀಗ ಬೆಳಂದೂರಿನಲ್ಲಿ ಕೂಡಾ ಭಾನುವಾರ ಸಂಜೆ ಸತ್ತಮಂಗನ ಶವ ಪತ್ತೆಯಾಗುವುದರೊಂದಿಗೆ ಕಡಬ ತಾಲೂಕಿನಾದ್ಯಂತ ಒಟ್ಟು ಆರು ಮಂಗಗಳ ಸಾವು ಅಧಿಕೃತವಾಗಿದೆ.

Also Read  ರೌಡಿ ಶೀಟರ್ ಆಕಾಶಭವನ ಶರಣ್ ಮೇಲೆ ಶೂಟೌಟ್

ಕ್ಯಾಸನೂರು ಕಾಡಿನ ಖಾಯಿಲೆ:
1956ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೆಲ ಗ್ರಾಮಗಳಲ್ಲಿ ವಿಷಮ ಶೀತ ಜ್ವರವನ್ನು ಹೋಲುವ ಹೊಸತೊಂದು ಜ್ವರ ಕಾಣಿಸಿಕೊಂಡಿತ್ತು. ಆ ಕಾಯಿಲೆ ಕಾಣಿಸಿದ ಸುತ್ತಮುತ್ತಲಿನ ಕಾಡಿನಲ್ಲಿ ಮಂಗಗಳು ಸಾಯುತ್ತಿದ್ದವು. ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಹಾಗೂ ಪುಣೆಯ ವೈರಸ್ ಸಂಶೋಧನ ಕೇಂದ್ರ (ನ್ಯಾಶನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ) ಗಳ ಸಂಶೋಧನೆಯ ಫಲವಾಗಿ ಆ ರೋಗಕ್ಕೆ ವೈರಸ್ ಕಾರಣವೆಂದು ದೃಢಪಟ್ಟಿತ್ತು. ಮೊದಲ ಬಾರಿ ಈ ರೋಗವು ಕ್ಯಾಸನೂರು ಕಾಡಿನಲ್ಲಿ ಪತ್ತೆಯಾದುದರಿಂದಾಗಿ ಅದಕ್ಕೆ ಕ್ಯಾಸನೂರು ಕಾಡಿನ ಖಾಯಿಲೆ ಎಂದೇ ಕರೆಯಲಾಗುತ್ತಿದೆ. ಈ ಕಾಯಿಲೆಯು ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರ ತಾಲೂಕುಗಳಲ್ಲಿ , ಉತ್ತರಕನ್ನಡ ಜಿಲ್ಲೆಯ ಹೊನ್ನಾವರ, ಸಿರಸಿ, ತಾಲೂಕುಗಳಲ್ಲಿ , ದ.ಕ.ಜಿಲ್ಲೆಯ ಬೆಳ್ತಂಗಡಿ, ಪುತ್ತೂರು ತಾಲೂಕುಗಳಲ್ಲಿ , ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಶೃಂಗೇರಿ ತಾಲೂಕಿನ ಸುತ್ತಮತ್ತು ಗ್ರಾಮಗಳಲ್ಲಿ ಕಾಣಿಸಿಕೊಂಡಿತ್ತು. ಇದೀಗ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಲವೆಡೆ ಈ ರೋಗ ಕಂಡುಬಂದಿದೆ ಎನ್ನುವುದು ಆತಂಕದ ವಿಚಾರವಾಗಿದೆ. ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ಮಂಗನ ಖಾಯಿಲೆ ಕಾಣಿಸಿಕೊಂಡಿದ್ದಾಗ ಕೊಕ್ಕಡ ಭಾಗದಲ್ಲಿಯೂ ಈ ಖಾಯಿಲೆ ಕಾಣಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಹಳೆನೇರೆಂಕಿಯ ಶಿವಾರು ಮಲೆಯಲ್ಲಿ ಹಲವು ಮಂಗಳು ಸಾವನ್ನಪ್ಪಿದ್ದವು. ಇದೀಗ ಶಿವಾರು ಮಲೆ ಅರಣ್ಯ ಭಾಗದಿಂದ ಹಳೆನೇರೆಂಕಿ ಪ್ರದೇಶಕ್ಕೆ ಬಂದಿರುವ ಮಂಗಗಳ ತಂಡದಲ್ಲಿದ್ದ ಒಂದು ಮಂಗ ಮೃತಪಟ್ಟಿರುವುದು ಪರಿಸರದ ಜನರಲ್ಲಿ ಆತಂಕಕ್ಕೆ ಹೆಚ್ಚಾಗಲು ಕಾರಣವಾಗಿದೆ.

Also Read  ಅಷ್ಟಮಿ, ಚೌತಿ, ವರಮಹಾಲಕ್ಷ್ಮೀ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವಂತಿಲ್ಲ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ

ಸತ್ತ ಮಂಗನ ಮೇಲಿದ್ದ ಉಣುಗು ಕಚ್ಚಿದಲ್ಲಿ ಖಾಯಿಲೆ:
ಮಂಗನ ಖಾಯಿಲೆ ಮನುಷ್ಯನಿಂದ ಮನುಷ್ಯನಿಗೆ ಹರುಡುವುದಿಲ್ಲ ಎಂದು ಆರೋಗ್ಯ ಇಲಾಖೆ ಹೇಳುತ್ತದೆ. ಖಾಯಿಲೆಯಿಂದ ಸತ್ತುಬಿದ್ದ ಮಂಗನ ದೇಹದಲ್ಲಿದ್ದ ಸಣ್ಣ ಸಣ್ಣ ಗಾತ್ರದ ಉಣುಗು (ಉಣ್ಣಿ) ಗಳು ಪರಿಸರದಲ್ಲಿ ಹರಡಿ ಮನುಷ್ಯನ ದೇಹಕ್ಕೆ ಕಚ್ಚಿದಲ್ಲಿ ಈ ಖಾಯಿಲೆ ಹರಡುತ್ತದೆ. ಆದ್ದರಿಂದ ಮಂಗಗಳು ಸಾಯುತ್ತಿರುವ ಪ್ರದೇಶಕ್ಕೆ ಹೋಗುವ ವೇಳೆ ಆರೋಗ್ಯ ಇಲಾಖೆಯಿಂದ ಕೊಡುವ ಡಿಎಂಪಿ ಎಣ್ಣೆಯನ್ನು ಕೈಕಾಲುಗಳಿಗೆ ಹಚ್ಚಿಕೊಂಡು ಹೋಗಬೇಕು. ಕಾಡಿನಿಂದ ಬಂದ ಕೂಡಲೇ ಸಾಬೂನು ಹಚ್ಚಿ ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಕಚ್ಚಿಕೊಂಡ ಉಣುಗುಗಳು ಉದುರಿಹೋಗುತ್ತವೆ. ಈ ವೈರಸ್ ಕಾಡಿನಲ್ಲಿರುವ ಕೆಲವು ಪ್ರಾಣಿಗಳಲ್ಲಿ ಇದ್ದು ಇವುಗಳ ಮೈಮೇಲಿರುವ ಉಣುಗುಗಳಲ್ಲಿ ಪ್ರವೇಶಿಸುತ್ತವೆ. ಈ ಉಣುಗುಗಳು ಇತರ ಪ್ರಾಣಿಗಳಿಗೆ, ಮಂಗಗಳಿಗೆ ಮತ್ತು ಮನುಷ್ಯರಿಗೆ ಕಚ್ಚುವುದರಿಂದ ಖಾಯಿಲೆ ಬರುತ್ತದೆ. ಖಾಯಿಲೆಗೆ ತುತ್ತಾದವರಿಗೆ 8-10 ದಿನಗಳ ತನಕ ಬಿಡದೇ ಜ್ವರ ಬರುತ್ತದೆ. ವಿಪರೀತ ತಲೆನೋವು, ಕೈಕಾಲು ಮತ್ತು ಸೊಂಟನೋವು. ವಿಪರೀತ ನಿಶ್ಯಕ್ತಿ, ಕಣ್ಣುಗಳು ಕೆಂಪಾಗುವುದು, ಜ್ವರ ಬಂದ ನಾಲ್ಕಾರು ದಿನದ ನಂತರ ಮೂಗು,ಬಾಯಿ, ಗುದದ್ವಾರದಿಂದ ರಕ್ತಸ್ರಾವವೂ ಆಗಬಹುದು. ಮಂಗನ ಖಾಯಿಲೆ ನಿಯಂತ್ರಿಸುವ ಲಸಿಕೆ ಬಂದಿದ್ದು ಅದನ್ನು 6 ವರ್ಷದ ಮೇಲ್ಪಟ್ಟ ಎಲ್ಲರಿಗೂ ಎರಡು ವರಸೆಗಳಲ್ಲಿ ಒಂದು ತಿಂಗಳ ಅಂತರದಲ್ಲಿ ನೀಡಲಾಗುತ್ತದೆ. ಎರಡನೇ ಚುಚ್ಚುಮದ್ದು ಹಾಕಿಸಿಕೊಂಡ 70 ದಿನಗಳ ನಂತರವೇ ರೋಗ ನಿರೋಧಕ ಶಕ್ತಿ ಬರುತ್ತದೆ ಎಂದು ಆರೋಗ್ಯ ಇಲಾಖೆ ವತಿಯಿಂದ ಹಂಚಲಾದ ಕರಪತ್ರದಲ್ಲಿ ಮಾಹಿತಿ ನೀಡಲಾಗಿದೆ.

Also Read  ಕರಾವಳಿ ಉತ್ಸವದ ಮೆರವಣಿಗೆಯಲ್ಲಿ - ಸಾಂಸ್ಕೃತಿಕ ತಂಡಗಳು

 

 

error: Content is protected !!
Scroll to Top