ಇನ್ನೂ ಪತ್ತೆಯಾಗದ ಪುಳಿಕುಕ್ಕು ಸೇತುವೆಯಿಂದ ನದಿಗೆ ಹಾರಿದ ವ್ಯಕ್ತಿ ► ಶೋಧ ಕಾರ್ಯದಲ್ಲಿ ತೊಡಗಿದ ಅಗ್ನಿಶಾಮಕ ದಳ

(ನ್ಯೂಸ್ ಕಡಬ) newskadaba.com ಕಡಬ, ಜು.30. ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಸೇತುವೆಯಿಂದ ಕುಮಾರಧಾರ ನದಿಗೆ ವ್ಯಕ್ತಿಯೋಬ್ಬರು ಹಾರಿದ್ದು, ಅವರು ನದಿ ನೀರಿನಲ್ಲಿ ನಾಪತ್ತೆಯಾದ ಘಟನೆ ಜು.29ರಂದು ಮಧ್ಯಾಹ್ನ ವೇಳೆ ನಡೆದಿತ್ತು.

ಮೂಲತಃ ಎಡಮಂಗಲ ಗ್ರಾಮದ ಕೂಟಾಜೆ ನಿವಾಸಿ ದಿ.ಕುಶಾಲಪ್ಪ ಗೌಡರ ಪುತ್ರ ಧರ್ಮಪಾಲ(43ವ.) ಎಂಬವರೇ ನದಿಗೆ ಹಾರಿದ ವ್ಯಕ್ತಿ. ಈ ಬಗ್ಗೆ ಅವರ ಪತ್ನಿ ವಿಶಾಲಾಕ್ಷಿಯವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧರ್ಮಪಾಲರವರು ಬೆಂಗಳೂರಿನಲ್ಲಿ ಗಾರ್ಮೆಂಟ್ಸ್‌ ಒಂದರಲ್ಲಿ ಉದ್ಯೋಗದಲ್ಲಿದ್ದು ಒಂದು ವಾರದ ಹಿಂದೆಯಷ್ಟೆ ಊರಿಗೆ ಬಂದಿದ್ದರು. ಶನಿವಾರ ಬೆಳಿಗ್ಗೆ ಮನೆಯಿಂದ ಹೊರಟ್ಟಿದ್ದ ಅವರು ಕಡಬಕ್ಕೆ ಬಂದು ಅಲ್ಲಿಂದ ಜೀಪೊಂದರಲ್ಲಿ ಪುಳಿಕುಕ್ಕು ಎಂಬಲ್ಲಿಗೆ ಹೋಗಿದ್ದರು ಎನ್ನಲಾಗಿದ್ದು, ಸೇತುವೆ ಮೇಲೆ ನಿಂತುಕೊಂಡು ಮೊಬೈಲ್ ಮೂಲಕ ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದೆ. ನೀರಿಗೆ ದುಮುಕುವ ಸ್ವಲ್ಪ ಮೊದಲು ಅವರ ಬಾವನಿಗೆ ಕರೆ ಮಾಡಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಕೂಡಲೇ ಅವರ ಬಾವ ಪುಳಿಕುಕ್ಕು ಸೇತುವೆ ಬಳಿ ಇರುವ ಕುಂಞಣ್ಣ ಗೌಡ ಎಂಬವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಕೂಡಲೇ ಕುಂಞಣ್ಣ ಗೌಡರು ಸೇತುವೆ ಬಳಿ ಬಂದಾಗ ಧರ್ಮಪಾಲರು ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ನೀರಿಗೆ ಧುಮುಕುವ ಮುನ್ನ ಅಂಗಿ, ಮೊಬೈಲ್, ಹಾಗೂ ಚಪ್ಪಲಿಯನ್ನು ಸೇತುವೆಯ ಮೇಲಿಟ್ಟು ನೀರಿಗೆ ಹಾರಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಆಗಮಿಸಿದ್ದರೂ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಿದ್ದ ಕಾರಣ ಹುಡುಕಾಡಲು ಸಾಧ್ಯವಾಗಿರಲಿಲ್ಲ. ಇಂದು ಬೆಳಿಗ್ಗೆ ಅಗ್ನಿಶಾಮಕ ದಳದವರು ನದಿಯ ಎರಡೂ ತಟಗಳಲ್ಲಿ ಹುಡುಕುವ ಪ್ಯಯತ್ನ ನಡೆಸಿದ್ದಾರೆ. ಕುಮಾರಧಾರ ನದಿಯ ತಟದಲ್ಲಿ ಹಾಗೂ ಪಾಲೋಳಿಗಳಲ್ಲಿ ನದಿಯ ದಡದಲ್ಲಿ ಸಾರ್ವಜನಿಕರು ಹುಡುಕಾಟದಲ್ಲಿ ತೊಡಗಿದ್ದಾರೆ. ಇವರ ಹುಡುಕಾಟಕ್ಕೆ ತಣ್ಣಿರುಬಾವಿಯ ಮುಳುಗು ತಂಡ ಭಾನುವಾರದಂದು ಆಗಮಿಸುತ್ತದೆ ಎನ್ನಲಾಗಿದೆ.

ಸಹೋದರನ ಜತೆ ಜಾಗದ ತಕರಾರು ಆತ್ಮಹತ್ಯೆ ಯತ್ನಕ್ಕೆ ಕಾರಣ?
ಧರ್ಮಪಾಲರವರು ಅನೇಕ ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು ಸ್ವಲ್ಪ ಸಮಯ ಅವರ ಪತ್ನಿಯೂ ಅವರ ಜತೆ ಇದ್ದರು, ಬಳಿಕ ಪತ್ನಿ ಹಾಗೂ ಇಬ್ಬರು ಮಕ್ಕಳು ಊರಿನಲ್ಲಿ ಇದ್ದರೂ ಅವರು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರಿಗೆ ನವೀನ ಹಾಗೂ ಲೋಹಿತ್ ಎಂಬವರು ಸಹೋದರರಿದ್ದು ಲೋಹಿತ್ರವರು ಮನೆಯಲ್ಲಿರುವ ಜಾಗದಲ್ಲಿ ಕೃಷಿ ಮಾಡಿಕೊಂಡಿದ್ದಾರೆ, ಜಾಗದ ಪಾಲಿನ ವಿಚಾರದಲ್ಲಿ ಸಹೋದರ ಲೋಹಿತ್ರವರೊಂದಿಗೆ ತಕರಾರು ಇತ್ತೆನ್ನಲಾಗಿದ್ದು, ಅವರ ಆತ್ಮಹತ್ಯೆ ಯತ್ನಕ್ಕೆ ಇದೇ ಕಾರಣ ಎಂದು ಸ್ಥಳೀಯರಿಂದ ತಿಳಿದು ಬಂದಿದೆ.

error: Content is protected !!

Join the Group

Join WhatsApp Group