(ನ್ಯೂಸ್ ಕಡಬ) newskadaba.com.ಮಂಗಳೂರು,ಜ.19.ಬೇಡಿಕೆ, ಅನ್ಯಾಯ, ಹಕ್ಕುಗಳಿಗಾಗಿ ಹೋರಾಟದ ಮೂಲಕ ಸಂಬಂಧಪಟ್ಟವರನ್ನು ಎಚ್ಚರಿಸಲು ಸಂತ್ರಸ್ತರಿಗೆ ಸಂವಿಧಾನ ಅವಕಾಶ ಕಲ್ಪಿಸಿದೆ. ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ದುಬಾರಿ ದರ ವಿಧಿಸುವ ಮೂಲಕ ಹೋರಾಟಗಳನ್ನು ಹತ್ತಿಕ್ಕಲು ಮುಂದಾಗಿದೆ.ರಾಜ್ಯದಲ್ಲಿ ನಡೆಯುತ್ತಿರುವ ರೆಸಾರ್ಟ್ ರಾಜಕೀಯ ಖಂಡಿಸಿ, ಜಿಲ್ಲೆಯ ಶಾಸಕರು ಸಾರ್ವಜನಿಕರ ಭೇಟಿಗೆ ಸಿಗದೇ ಇರುವುದನ್ನು ವಿರೋಧಿಸಿ ಡಿವೈಎಫ್‌ಐ ಜಿಲ್ಲಾ ಸಮಿತಿ ಗುರುವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಧ್ವನಿವರ್ಧಕ ಇಲ್ಲದೆ ಶಾಂತಿಯುತ ಸಾಂಕೇತಿಕ ಪ್ರತಿಭಟನೆ ಆಯೋಜಿಸಿತ್ತು. 50 ಮಂದಿ ಇದರಲ್ಲಿ ಭಾಗವಹಿಸಿದ್ದರು. ಇದಕ್ಕೆ ಪೊಲೀಸರು 500 ರೂ. ಶುಲ್ಕ ವಸೂಲಿ ಮಾಡಿ, ರಶೀದಿ ನೀಡಿದ್ದಾರೆ.
ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಆದೇಶದ ಪ್ರಕಾರ ಧ್ವನಿವರ್ಧಕ ಇಲ್ಲದೆ, ಸಾಂಕೇತಿಕವಾಗಿ 10 ಜನ ಮೌನ ಪ್ರತಿಭಟನೆ ಮಾಡಬೇಕಿದ್ದರೂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ 500 ರೂ. ಪಾವತಿಸಿ ಅನುಮತಿ ಪಡೆಯಬೇಕು. ಸರ್ಕಾರದ ಈ ಆದೇಶಕ್ಕೆ ಹೋರಾಟಗಾರರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಧ್ವನಿವರ್ಧಕ ಬಳಸಿ ಮೆರವಣಿಗೆ ಮಾಡುವುದಾದರೆ ಅದರಲ್ಲಿ ಭಾಗವಹಿಸುವ ಜನರ ಸಂಖ್ಯೆಗೆ ಅನುಗುಣವಾಗಿ ದರ ಪಾವತಿಸಬೇಕು. 10 ಸಾವಿರದಿಂದ ಲಕ್ಷಕ್ಕಿಂತಲೂ ಅಧಿಕ ರೂ. ಪಾವತಿಸಬೇಕು. ಧ್ವನಿವರ್ಧಕ ಒಂದು ದಿನಕ್ಕೆ 75 ರೂ., 30 ದಿನಗಳ ತನಕ ದಿನಕ್ಕೆ 15 ರೂ, ತಿಂಗಳಿಗೆ 450 ರೂ, ಶಾಂತಿಯುತ ಸಭೆ ಮತ್ತು ಮೆರವಣಿಗೆಗೆ 500 ರೂ. ಪಾವತಿಸಿ ಪ್ರತಿಭಟನೆ ನಡೆಯುವ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು.
ಹೆಚ್ಚಿನ ಪ್ರತಿಭಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತವೆ. ಪಾಂಡೇಶ್ವರ ಠಾಣಾ ವ್ಯಾಪ್ತಿಗೆ ಬರುವುದರಿಂದ ಇಲ್ಲಿನ ಪೊಲೀಸರ ಸಮಯ, ಪ್ರತಿಭಟನೆಗೆ ಬಂದೋಬಸ್ತ್ ವಹಿಸುವುದರಲ್ಲೇ ಕಳೆಯುತ್ತಿದೆ. ಹಾಗಾಗಿ ಇತರ ಪ್ರಕರಣಗಳ ತನಿಖೆಗೆ ತೊಡಕಾಗುತ್ತಿದೆ. ಸಾರ್ವಜನಿಕವಾಗಿ 5 ಅಥವಾ 10 ಜನರು ಶಾಂತಿಯುತವಾಗಿ, ಧ್ವನಿವರ್ಧಕ ಬಳಸದೆ ಪ್ರತಿಭಟನೆ ನಡೆಸುವುದಿದ್ದರೂ ಪೊಲೀಸ್ ಠಾಣೆಯಿಂದ ಅನುಮತಿ ಕಡ್ಡಾಯ. ಕೆಲ ಸಂಘಟನೆಯವರು ಪೊಲೀಸ್ ಬಂದೋಬಸ್ತ್ ಬೇಡ ಎನ್ನುತ್ತಿದ್ದಾರೆ. ಬಂದೋಬಸ್ತ್ ಕಲ್ಪಿಸುವುದು ಪೊಲೀಸರ ಕರ್ತವ್ಯ. ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿ ಏನಾದರೂ ಅಶಾಂತಿ ಉಂಟಾದರೆ ಪ್ರತಿಭಟನಾಕಾರರನ್ನೇ ಹೊಣೆ ಮಾಡಬೇಕಾಗುತ್ತದೆ ಎಂಬುದು ಪೊಲೀಸರ ಹೇಳಿಕೆ.