(ನ್ಯೂಸ್ ಕಡಬ) newskadaba.com. ಬೆಂಗಳೂರು,ಜ.18. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ವಾರ್ಷಿಕೋತ್ಸವ ಸಮಾರಂಭಗಳಲ್ಲಿ ಸಿನಿಮಾ ಹಾಡು ಹಾಡುವಂತಿಲ್ಲ ಹಾಗೂ ಯಾವುದೇ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡುವಂತಿಲ್ಲ.ಈ ಸಿನಿಮಾ ಹಾಡುಗಳಿಂದ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಲಿದೆ, ಈ ಎಲ್ಲಾ ನಿಯಮಗಳು ರಾಜ್ಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಅನ್ವಯಿಸಲಿದೆ, ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಅವರ ಆಸಕ್ತಿಗಳನ್ನು ಪರಿಗಣಿಸಿಲ್ಲ, ಸಣ್ಣ ಮಕ್ಕಳು ದೊಡ್ಡ ವಯಸ್ಸಿನವರ ಹಾಡುಗಳಿಗೆ ಡ್ಯಾನ್ಸ್ ಮಾಡುವುದು ಸರಿಯಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ನನ್ನನ್ನು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು, ವಿದ್ಯಾರ್ಥಿಗಳು ಹಾಡುಗಳನ್ನು ಸೆಲೆಕ್ಟ್ ಮಾಡಿದ್ದನ್ನು ನೋಡಿ ನನಗೆ ಶಾಕ್ ಆಯಿತು, ಅವರು ಮಾಡಿದ ಹಾಡುಗಳ ಡ್ಯಾನ್ಸ್ ಅವರ ವಯಸ್ಸಿಗೆ ಮೀರಿದ್ದಾಗಿದೆ.ಇದನ್ನು ನಾನು ನನ್ನ ಸಹೋದ್ಯೋಗಿಗಳಿಗೆ ತಿಳಿಸಿದೆ, ಅವರು ಕೂಡ ಇದೇ ರೀತಿಯ ಭಾವನೆ ವ್ಯಕ್ತ ಪಡಿಸಿದರು, ಹೀಗಾಗಿ ಮುಂದಿನ ವರ್ಷದಿಂದ ಶಾಲಾ ವಾರ್ಷಿಕೋತ್ಸವದಲ್ಲಿ ಹಾಡುಗಳ ಡ್ಯಾನ್ಸ್ ಮಾಡುವಂತಿಲ್ಲ,ಮಕ್ಕಳು ಇತಿಹಾಸ, ದೇಶಭಕ್ತಿ, ಸಂಸ್ಕೃತಿ ಹಾಗೂ ದೇಶದ ಪರಂಪರೆ ಸಾರುವ ಹಾಡುಗಳನ್ನು ಹಾಡಿ ಡ್ಯಾನ್ಸ್ ಹಾಗೂ ಡ್ರಾಮಾ ಮಾಡಬೇಕು, ಈಗಾಗಲೇ ಕೆಲ ಶಾಲೆಗಳಲ್ಲಿ ಇದನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದ್ದಾರೆ.