(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು.29. ಗುರು ದೇವೋಭವ ಎನ್ನುವ ಮಾತಿಗೆ ಬಹಳ ಮಹತ್ವವಿದೆ. ಗುರು ಎನ್ನುವವನು ತನ್ನಲ್ಲಿರುವ ಉತ್ತಮ ಗುಣ ನಡತೆಯನ್ನು ಶಿಷ್ಯಂದಿರಿಗೆ ಕಲಿಸಿಕೊಡುವ ಕಾರಣಕ್ಕಾಗಿ ಗುರುವನ್ನು ಶ್ರೇಷ್ಠ ಭಾವನೆಯಿಂದ ಕಾಣುತ್ತಾರೆ. ಆದರೆ ಅದೇ ಗುರು ಕೀಚಕನಾದ್ರೆ ಎಂತಹ ಅಸಹ್ಯ ಅಲ್ವಾ? ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದ ಕಾಲೇಜೊಂದರ ಪ್ರಾಧ್ಯಾಪಕನ ಅಸಲಿತನ ಇದೀಗ ಬಯಲಾಗಿದೆ.
ಇಲ್ಲಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಕಳೆದ ಸುಮಾರು ಹದಿನೈದು ವರ್ಷಗಳಿಂದ ಪೊಲಿಟಿಕಲ್ ಸೈನ್ಸ್ ಪ್ರಾಧ್ಯಾಪಕನಾಗಿರುವ ಪುಷ್ಪರಾಜ್ ಕೆ. ಎಂಬಾತ ವಿದ್ಯಾರ್ಥಿನಿಯೋರ್ವಳಿಗೆ ಪೋಲಿ ಸಂದೇಶಗಳನ್ನು ಕಳುಹಿಸಿ ಸುದ್ದಿಯಾಗಿದ್ದಾನೆ. ಫೇಸ್‍ಬುಕ್ ಮೆಸೆಂಜರ್ ನಲ್ಲಿ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್ ಗಳನ್ನು ಪೋಲಿ ಲೆಕ್ಚರ್ ಕಳುಹಿಸುತ್ತಿದ್ದುದರಿಂದ ಗುರುವಿನ ಉಪಟಳ ತಡೆಯಲಾರದೆ ಸಂತ್ರಸ್ತ ವಿದ್ಯಾರ್ಥಿನಿ ಪುಷ್ಪರಾಜನ ಕಾಮ ಪುರಾಣವನ್ನು ಬಯಲು ಮಾಡಿದ್ದಾಳೆ. ತನ್ನ ಕಾಮಕಾಂಡ ಬಯಲಾಗುತ್ತಿದ್ದಂತೆಯೇ ಪುಷ್ಪರಾಜ್ ಕಾಲೇಜಿಗೆ ರಜೆ ಹಾಕಿದ್ದು, ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾನೆ ಎಂದು ತಿಳಿದುಬಂದಿದೆ. ಗುರುವಾಗಿದ್ದುಕೊಂಡು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದು ಸಾರ್ವಜನಿಕರನ್ನು ಭಾರೀ ಆಕ್ರೋಶಿತರನ್ನಾಗಿಸಿದೆ. ಈತನ ಕರ್ಮಕಾಂಡದ ಬಗ್ಗೆ ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.