(ನ್ಯೂಸ್ ಕಡಬ) newskadaba.com.ಸುಬ್ರಹ್ಮಣ್ಯ,ಜ.13.ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಶನಿವಾರ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವ ನೆರವೇರಿತು. ಸಹಸ್ರಾರು ಭಕ್ತರ ಪರಾಕುಗಳೊಂದಿಗೆ ತಳಿರು, ತೋರಣ, ಸೀಯಾಳ, ಅಡಕೆ, ಬಾಳೆ, ಬಾಳೆಗೊನೆ ಮತ್ತು ವಿದ್ಯುತ್ ಅಲಂಕಾರದ ರಥದಲ್ಲಿ ದೇವರ ಉತ್ಸವ ನೆರವೇರಿತು.ರಥಾರೋಹಣದ ಬಳಿಕ ಶ್ರೀ ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ದೇವರಿಗೆ ಪೂಜೆ ನೆರವೇರಿಸಿದರು. ಬಳಿಕ ಸವಾರಿ ಮಂಟಪದ ಕಿರುಷಷ್ಠಿ ಕಟ್ಟೆಯಲ್ಲಿ ದೇವರಿಗೆ ಪೂಜೆ ನಡೆಯಿತು. ಈ ಸಂದರ್ಭ ಸುಡುಮದ್ದು ಪ್ರದರ್ಶನ, ಬಳಿಕ ದೇವಳದ ಹೊರಾಂಗಣದಲ್ಲಿ ಪಾಲಕಿ ಉತ್ಸವ, ಬಂಡಿ ಉತ್ಸವ ನಡೆಯಿತು.
ಮಧ್ಯಾಹ್ನ ಮಹಾಪೂಜೆ ನಂತರ ಹೊರಾಂಗಣದಲ್ಲಿ ಎಡೆಸ್ನಾನ ನಡೆಯಿತು. ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತ ಪಂಡಿತ ಪ್ರೊ.ಶಿವಕುಮಾರ್ ಅವರು ಎಡೆಸ್ನಾನದ ಕುರಿತು ಮಾರ್ಗದರ್ಶನ ನೀಡಿದರು.ರಥೋತ್ಸವ ಬಳಿಕ ನಡೆದ ಒಳಾಂಗಣ ಉತ್ಸವದಲ್ಲಿ ತಮಿಳುನಾಡು, ಕೇರಳ, ಮೈಸೂರು, ಶ್ರೀರಂಗಪಟ್ಟಣ ಮೊದಲಾದ ಪ್ರದೇಶಗಳ ಕಲಾವಿದರಿಂದ ಸ್ಯಾಕ್ಸೋಪೋನ್, ನಾದಸ್ವರ, ತವಿಲ್, ಬ್ಯಾಂಡ್, ಚೆಂಡೆ ಮೊದಲಾದ ಸಂಗೀತ ವಾದ್ಯ ಸುತ್ತು ನೆರವೇರಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಮಹೇಶ್ ಕುಮಾರ್ ಕೆ.ಎಸ್., ಬಾಲಕೃಷ್ಣ ಗೌಡ ಬಳ್ಳೇರಿ, ಕೇನ್ಯ ರವೀಂದ್ರನಾಥ ಶೆಟ್ಟಿ, ಮಾಧವ.ಡಿ, ರಾಜೀವಿ ಆರ್.ರೈ, ದಮಯಂತಿ ಕೆ.ಎಸ್. ಕೂಜುಗೋಡು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಶಿವರಾಮ ರೈ, ಲೋಲಾಕ್ಷ ಕೈಕಂಬ, ಕೆ.ಪಿ.ಗಿರಿಧರ್, ಶ್ರೀ ದೇವಳದ ಹೆಬ್ಬಾರ್ ಷಣ್ಮುಖ ಉಪಾರ್ಣ ಸೇರಿದಂತೆ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.