(ನ್ಯೂಸ್ ಕಡಬ) newskadaba.com.ಕಡಬ,ಜ.11.ಕುಟ್ರುಪ್ಪಾಡಿ ಗ್ರಾಮದ ವಾಳ್ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಮಕುಂಜದ ಶ್ರೀ ರಾಮಕುಂಜೇಶ್ವರ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನ ಘಟಕದ ವತಿಯಿಂದ ನಡೆದ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಜೇಸಿಐ ಕಡಬ ಕದಂಬ ಘಟಕದ ಸಹಯೋಗದೊಂದಿಗೆ ಪರಿಸರ ಜಾಗೃತಿ ಮಾಹಿತಿ ಕಾರ್ಯಾಗಾರ ನಡೆಯಿತು.
ಸಂಪನ್ಮೂಲವ್ಯಕ್ತಿಯಾಗಿ ಆಗಮಿಸಿ ಕಾರ್ಯಾಗಾರವನ್ನು ನಡೆಸಿಕೊಟ್ಟ ಅರಣ್ಯ ಇಲಾಖೆಯ ಪಂಜ ವಲಯದ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ರೈ ಮಾತನಾಡಿ ಪರಿಸರ ಸಂರಕ್ಷಣೆಯ ಮಹತ್ವದ ವಿಚಾರ ಎನ್ನುವುದು ನಮ್ಮ ಹೃದಯದಲ್ಲಿ ಮೂಡಿದಾಗ ಮಾತ್ರ ಕಾರ್ಯರೂಪಕ್ಕೆ ಬರಲು ಸಾಧ್ಯ. ನಾವು ಕಾಡನ್ನು ಬೆಳೆಸುವ ಅಗತ್ಯವಿಲ್ಲ. ಇದ್ದ ಕಾಡನ್ನು ನಾಶ ಮಾಡದೆ ಉಳಿಸಿದೆ ಸಾಕು. ಅದೇ ನಾವು ಮಾಡುವ ಬಲುದೊಡ್ಡ ಕಾರ್ಯ. ಪ್ರಕೃತಿಗಾಗಿ ನಾವು ಅರಣ್ಯವನ್ನು ಉಳಿಸಬೇಕಿಲ್ಲ. ನಮಗಾಗಿ ಮತ್ತು ನಮ್ಮ ಮುಂದಿನ ಪೀಳಿಗೆಯ ಬದುಕಿಗಾಗಿ ಅರಣ್ಯ ಉಳಿಯಬೇಕಿದೆ ಎನ್ನುವ ಸತ್ಯವನ್ನು ನಾವು ಮನಗಾಣಬೇಕು. ಜಲ ಸಂರಕ್ಷಣೆ, ಪರಿಸರ ಶುಚಿತ್ವ, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ, ಅರಣ್ಯ ರಕ್ಷಣೆ ಇತ್ಯಾದಿ ಕಾರ್ಯಗಳು ನಮ್ಮಿಂದಲೇ ಆರಂಭವಾಗಲಿ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು. ಜೇಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ನಾಗರಾಜ್ ಎನ್.ಕೆ. ಅತಿಥಿಯಾಗಿ ಭಾಗವಹಿಸಿದ್ದರು.
ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಸದಸ್ಯ ಶಿವಪ್ರಸಾದ್ ರೈ ಮೈಲೇರಿ ಅಧ್ಯಕ್ಷತೆ ವಹಿಸಿದ್ದರು. ಜೇಸಿ ಉಪಾಧ್ಯಕ್ಷ ತಿರುಮಲೇಶ್ ಭಟ್ ಹೊಸ್ಮಠ ಕೃಷಿಯ ಕುರಿತು ಮಾಹಿತಿ ನೀಡಿದರು. ಜೇಸಿ ಪೂರ್ವಾಧ್ಯಕ್ಷರಾದ ಅಶೋಕ್‍ಕುಮಾರ್ ಪಿ., ತಸ್ಲೀಂ ಮರ್ದಾಳ, ಕಾರ್ಯದರ್ಶಿ ಕಾಶೀನಾಥ ಗೋಗಟೆ, ಉಪಾಧ್ಯಕ್ಷ ಅಬ್ದುಲ್‍ರಹಿಮಾನ್, ಶಿಬಿರಾಧಿಕಾರಿ ಗುರುಕಿರಣ್ ಶೆಟ್ಟಿ ಬಿ., ಸಹ ಶಿಬಿರಾಧಿಕಾರಿಗಳಾದ ಗಿರೀಶ್, ಅಪರ್ಣಾ, ಎನ್ನೆಸೆಸ್ ನಾಯಕ ನಿಶಾಂತ್, ನಾಯಕಿ ಮಾನಸ ಎಸ್.ಕೆ. ಉಪಸ್ಥಿತರಿದ್ದರು. ತಿರುಮಲೇಶ್ ಭಟ್ ಹೊಸ್ಮಠ ಅವರು ಶಾಲೆಗೆ ಕೊಡುಗೆಯಾಗಿ ನೀಡಿದ ಅಡಿಕೆ ಸಸಿಗಳನ್ನು ಶಾಲಾ ವಠಾರದಲ್ಲಿ ನಾಟಿ ಮಾಡಲಾಯಿತು.