(ನ್ಯೂಸ್ ಕಡಬ) newskadaba.com.ಕಡಬ,ಜ.09. ಕಡಬ ಬ್ಲಾಕ್ ಕಾಂಗ್ರೆಸ್‍ನ ಸಮಿತಿ ಸಭೆ ಹಾಗೂ ಜ.14ರಂದು ನಡೆಯಲಿರುವ ಪಾದಯಾತ್ರೆಯ ಪೂರ್ವಭಾವಿ ಸಭೆ ಜ.7ರಂದು ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.ಕಡಬ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ, ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆಯಿಂದ ಬಿಸಿ ರೋಡ್ ವರೆಗಿನ ಚಥುಷ್ಪತ ಕಾಮಗಾರಿಯನ್ನು ಪ್ರಾರಂಭಿಸಿ ಇದೀಗ ಅರ್ಧದಲ್ಲಿ ಕಾಮಾಗಾರಿ ನಿಲ್ಲಿಸಿದ್ದು, ಇದರಿಂದಾಗಿ ವಾಹನ ಸವಾರರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಕಾಮಗಾರಿಯನ್ನು ಶೀಘ್ರ ಮರು ಪ್ರಾರಂಭಿಸುವಂತೆ ಒತ್ತಾಯಿಸಲು ಜ.14ರಿಂದ ಮೂರು ದಿನ ಮಾಜಿ ಉಸ್ತುವಾರಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ನೆಲ್ಯಾಡಿಯಿಂದ ಪಾದಯಾತ್ರೆ ಆರಂಭಿಸಲಿದ್ದು ಈ ಪಾದಯಾತ್ರೆಗೆ ಕಡಬ ಬ್ಲಾಕ್‍ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸುವಂತೆ ಕಾಂಗ್ರೆಸ್ ನ ಎಲ್ಲಾ ಕಾರ್ಯಕರ್ತರನ್ನು ಮುಖತಃ ಬೇಟಿ ಮಾಡಿ ಸಹಕಾರ ಕೋರಲು ಪ್ರತಿಯೊಬ್ಬ ಬ್ಲಾಕ್, ವಲಯ, ಬೂತ್, ಗ್ರಾಮ ಮಟ್ಟದ ಕಾರ್ಯಕರ್ತರು ಶ್ರಮಿಸಬೇಕಾಗಿದ್ದು, ಇವರೊಂದಿಗೆ ಗ್ರಾ.ಪಂ., ತಾ.ಪಂ., ಜಿ.ಪಂ.ನ ಸದಸ್ಯರುಗಳು ತಮ್ಮ ಕ್ಷೇತ್ರದ ಕಾರ್ಯಕರ್ತರನ್ನು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಹೇಳಿ ಮುಂದೆ ನಡೆಯುವ ಪಾದಯಾತ್ರೆಯನ್ನು ಯಶಸ್ವಿಗೊಳಿಸೋಣ ಎಂದರು.
ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಿ, ಜನರ ಪ್ರಾಣ ರಕ್ಷಿಸಿ;
ಕೆ.ಪಿ.ಸಿ.ಸಿ. ಕಾರ್ಯದರ್ಶಿ, ಸುಳ್ಯ ವಿಧಾನ ಸಭಾ ಕ್ಷೇತ್ರದ ಕಡಬ ಬ್ಲಾಕ್‍ನ ಉಸ್ತುವಾರಿ ವೆಂಕಪ್ಪ ಗೌಡ ಮಾತನಾಡಿ, ಅಡ್ಡಹೊಳೆಯಿಂದ ಬಿಸಿ ರೋಡ್ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸಾಧ್ಯದ ಪರಿಸ್ಥಿತಿಯಲ್ಲಿದ್ದು, ಚಥುಸ್ಪತ ಕಾಮಗಾರಿ ವರ್ಷಗಳ ಹಿಂದೆ ಪ್ರಾರಂಭಿಸಿ ಇದೀಗ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಈ ಬಗ್ಗೆ ಮಾದ್ಯಮಗಳಲ್ಲೂ ಸಾಕಷ್ಟು ವರದಿಗಳು ಬಂದಿವೆ. ಆಗಸ್ಟ್ ತಿಂಗಳಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಬೇಕಿತ್ತು ಆದರೆ ಇಂದು ಹೆದ್ದಾರಿ ಕಾಮಗಾರಿ ಅಪೂರ್ಣವಸ್ಥೆಯಲ್ಲಿದ್ದು ಇದರ ವಿರುದ್ಧ “ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಿ ಜನರ ಪ್ರಾಣ ರಕ್ಷಿಸಿ” ಘೋಷಣೆಯೊಂದಿಗೆ ಜ.14ರಂದು ನೆಲ್ಯಾಡಿಯಿಂದ ಪ್ರಾರಂಭವಾಗುವ ಪಾದಯಾತ್ರೆಯು ಜ.15ರಂದು ಉಪ್ಪಿನಂಗಡಿಯಿಂದ ಮಾಣಿಗೆ ಜ.16ರಂದು ಮಾಣಿಯಿಂದ ಬಿಸಿರೋಡ್‍ಗೆ ಪಾದಯಾತ್ರೆಯ ಮೂಲಕ ರಾಷ್ಟ್ರೀಯ, ರಾಜ್ಯ, ಶಾಸಕರು, ಜನಪ್ರತಿನಿಧಿಗಳ ಒಗ್ಗೂಡುವಿಕೆಯೊಂದಿಗೆ ಕೇಂದ್ರ ಸರಕಾರವನ್ನು ಎಚ್ಚರಿಸುವ ಪಾದಯಾತ್ರೆ ಇದಾಗಿದ್ದು, ಶೀಘ್ರದಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಪಾದಯಾತ್ರೆಯ ಮುಖಾಂತರ ಆಗ್ರಹಿಸಲಾಗುವುದು ಈ ಪಾದಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಬೇಕಿದೆ ಎಂದರು.
ಕೆ.ಪಿ.ಸಿ.ಸಿ.ಸದಸ್ಯ ಡಾ.ರಘು, ತಾ.ಪಂ.ಸದಸ್ಯ, ನಿಯೋಜಿತ ಅಧ್ಯಕ್ಷ ಗಣೇಶ್ ಕೈಕುರೆ, ಕಡಬ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಅಬ್ದುಲ್ ಖಾದರ್, ಸುಳ್ಯ ವಿಧಾನ ಸಭಾ ಕ್ಷೇತ್ರದ ಯುವಕ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್, ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಬಳ್ಳೇರಿ, ಶೀನಪ್ಪ ಗೌಡ ಬೈತಡ್ಕ, ವಿಜಯ ಕುಮಾರ್ ಕೆರ್ಮಾಯಿ, ಜಿಲ್ಲಾ ಯುವಕ ಕಾಂಗ್ರೆಸ್ ಮುಖಂಡ ಸತೀಶ್ ಕುಮಾರ್ ಕೆಡೆಂಜಿ, ಪ್ರವೀಣ್ ಕುಮಾರ್ ಕೆಡೆಂಜಿ, ಕಡಬ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ತಾ.ಪಂ. ಸದಸ್ಯೆ ಉಷಾ ಅಂಚನ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಎಸ್.ಸಿ.ಎಸ್.ಸಿ.ಘಟಕದ ಅಧ್ಯಕ್ಷ ಶಶಿಧರ ಬೊಟ್ಟಡ್ಕ ಮಾತನಾಡಿದರು.
ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ, ಕಡಬ ಬ್ಲಾಕ್ ಕಾಂಗ್ರೆಸ್ ಶಕ್ತಿ ಸಂಚಾಲಕ ಎ.ಎಸ್.ಶರೀಪ್, ಡಿಸಿಸಿ ಪದಾಧಿಕಾರಿಗಳಾದ ನೀಲಾವತಿ ಶಿವರಾಮ್, ಕೆ.ಪಿ. ತೋಮಸ್, ಸಿ.ಜೆ.ಸೈಮನ್, ಎಚ್.ಕೆ.ಇಲ್ಯಾಸ್,ತಾ.ಪಂ.ಸದಸ್ಯೆ ಆಶಾ ಲಕ್ಷ್ಮಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಕಡಬ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಜೆ.ತೋಮಸ್, ರಬ್ಬರ್ ಬೆಳೆಗಾರರ ಮಾರಾಟ ಸಹಕಾರಿ ಸಂಘದ ನಿರ್ದೇಶಕ ಸತ್ಯಾನಂದ ಬೊಳ್ಳಾಜೆ, ಕಡಬ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಾಲಿನಿ ಸತೀಶ್ ನಾೈಕ್, ತೋಮಸ್ ಇಡೆಯಾಳ, ಕಾಂಗ್ರೆಸ್‍ನ ಮರ್ದಾಳ ಗ್ರಾಮ ಸಮಿತಿ ಅಧ್ಯಕ್ಷ ಭವಾನಿ ಶಂಕರ್, ನೂಜಿಬಾಳ್ತಿಲ ಗ್ರಾಮ ಸಮಿತಿ ಅಧ್ಯಕ್ಷ ಅಭಿಲಾಷ್ ಪಿ.ಕೆ., ಕಡಬ ಯುವ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಫೈಝಲ್ ಎಸ್.ಇ.ಎಸ್. ಸೇರಿದಂತೆ ಬ್ಲಾಕ್ ಮಟ್ಟದ, ವಲಯ ಮಟ್ಟದ, ಗ್ರಾಮ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಡಬ ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ ವಂದಿಸಿದರು.