ಹೊಸಮಠ: ಹೊಸ ಸೇತುವೆಯ ಸಂಪರ್ಕ ರಸ್ತೆ ಕಾಮಗಾರಿಗೆ  ಕೊನೆಗೂ ಮುಕ್ತಿ► ಇನ್ನೆರಡು ತಿಂಗಳಲ್ಲಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

(ನ್ಯೂಸ್ ಕಡಬ) newskadaba.com.ಕಡಬ,ಜ.09.ಕಳೆದ ಐದು ವರ್ಷಗಳಿಂದ ಕಡಬ ಸಮೀಪದ ಹೊಸಮಠ ಎಂಬಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಾಣವಾಗದೆ  ಸ್ಥಗಿತಗೊಂಡಿದ್ದ ಕಾಮಗಾರಿಗೆ ಇದೀಗ ವೇಗ ಪಡೆದುಕೊಂಡಿದ್ದು  ಇನ್ನೆರಡು ತಿಂಗಳಲ್ಲಿ ಕಾಮಗಾರಿ ಮುಗಿದು ಸಂಚಾರಕ್ಕೆ ತೆರದುಕೊಳ್ಳವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.ಸೇತುವೆ ಕಾಮಗಾರಿ ಮುಗಿದು ಎರಡು ವರ್ಷಗಳಾಗುತ್ತಾ ಬಂದರೂ ಇದರ  ಸಂಪರ್ಕ ರಸ್ತೆ ನಿರ್ಮಾಣವಾಗದೆ ಸೇತುವೆ ಅಪೂರ್ಣಗೊಂಡು ಕಳೆದ ಮಳೆಗಾಲಕ್ಕೆ ದಕ್ಕದೆ ಹೋಗಿತ್ತು. ಇದೀಗ  ಎಲ್ಲಾ ಅಡೆತಡಗಳನ್ನು ನಿವಾಸಿಕೊಂಡು ಕಾಮಗಾರಿ ಭರದಿಂದ ಸಾಗುತ್ತಿದ್ದು ಈ ಮಳೆಗಾಲಕ್ಕೆ ಸೇತುವೆ ವಾಹನ ಸಂಚಾರಕ್ಕೆ ಮುಕ್ತವಾಗುವುದರೊಂದಿಗೆ ಕಳೆದ ಅರುವತ್ತು  ವರ್ಷಗಳಿಂದ ಕಾಡುತ್ತಾ ಬಂದಿರುವ ಜ್ವಲಂತ ಸಮಸ್ಯೆಗೆ ಸಂಪೂರ್ಣ ಇತಿಶ್ರೀ ಹಾಡಲಿದೆ.

ಈ ಭಾಗದ ಜನತೆಯ ಬಹು ನಿರೀಕ್ಷೆಯ ಬೃಹತ್ ಸೇತುವೆ ಕಾಮಗಾರಿ ಮುಗಿದಿದ್ದರೂ ಸೇತುವೆಯ ಎರಡೂ ತುದಿಗಳಲ್ಲಿ  ನಿರ್ಮಾಣವಾಗಬೇಕಾದ ಸಂಪರ್ಕ ರಸ್ತೆ ಕಾಮಗಾರಿಗೆ ಅಪೂರ್ಣವಾಗಿದ್ದರಿಂದ  ಕಳೆದ ಮಳೆಗಾಲಕ್ಕೆ ಮುನ್ನ ನೂತನ ಸೇತುವೆ ಲೋಕಾರ್ಪಣೆಯಾಗಿ ಉಪಯೋಗಕ್ಕೆ ಬರಬಹುದು ಎಂದು ನಂಬಿದ್ದ ಜನತೆಗೆ ಭ್ರಮನಿರಸನವಾಗಿತ್ತು. ಕಳೆದ ಮಳೆಗಾಲದಲ್ಲಿ ಸುರಿಯುತ್ತಿದ್ದ ಕುಂಭದ್ರೋಣ ಮಳೆಯಿಂದಾಗಿ ಇಲ್ಲಿ ಹಳೆ ಸೇತುವೆ ವಾರಗಟ್ಟಲೆ ಮುಳುಗಡೆಯಾಗಿದ ಜನರು ಇನ್ನಿಲ್ಲ ತೊಂದರೆ ಅನುಭವಿಸುವಂತಾಗಿತ್ತು. ನೂತನ ಸೇತುವೆಯ ಎರಡೂ ಕಡೆ ಮಣ್ಣು ತುಂಬಿಸಿದ್ದರಿಂದ ಜನ ಸೇತುವೆ ಮೇಲೆ ನಡೆದು ದಡ ಸೇರಲು ಅವಕಾಶ ಕಲ್ಪಿಸಲಾಗಿತ್ತು. ಬಹು ಪ್ರಯಾಸದಿಂದ ಬೈಕ್ ಸವಾರರು ಕೆಸರಿನ ಓಕುಳಿಯೊಂದಿಗೆ ಸಂಚಾರ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಜನ ಶಪಿಸುತ್ತಲೇ ಇದ್ದರು. ಆದರೂ ಇಷ್ಟು ವರ್ಷ ಕಾದಿದ್ದೇವೆ ಇನ್ನೊಂದು ವರ್ಷ ಕಾದರೆ ಎಲ್ಲವೂ ಸುಗಮವಾಗುತ್ತದೆ, ಸೇತುವೆ ಕಾಮಗಾರಿ ಮುಗಿಯುತ್ತದೆ ಎಂದು ತಮ್ಮನ್ನು ತಾವೇ ಸಮಧಾನಪಡಿಸಿಕೊಳ್ಳುತ್ತಿದ್ದರು.

Also Read  ಇಂಟರ್ನೆಟ್ ನೋ ಕನೆಕ್ಟ್ ಹಳ್ಳಿಜನರ ಗೋಳು

ಜನರ ಈ ಸಮಧಾನಕ್ಕೆ ಪೂರಕ ಎಂಬಂತೆ ಈ ವರ್ಷ ಮಳೆಗಾಲಕ್ಕೆ ಮುನ್ನ ನೂತನ ಸೇತುವೆಯ ಎಲ್ಲಾ ಕಾಮಗಾರಿ ಮುಗಿಯಲಿದೆ ಎನ್ನುವ ಭರವಸೆ ದೊರೆತಿದೆ. ಕಳೆದ ವರ್ಷ ಸೇತುವೆ ದಕ್ಷಿಣ ಭಾಗದ ಸಂಪರ್ಕ ರಸ್ತೆಯ ಒತ್ತುವರಿ ಕಾರ್ಯವನ್ನು ಮುಗಿಸಿ  ಕಾಮಗಾರಿ ಪ್ರಾರಂಭವಾಗಿ  ಅಂತಿಮ ಹಂತಕ್ಕೆ ತಲುಪಿತ್ತು. ಆದರೆ  ಸೇತುವೆಯ ಪೂರ್ವ ಭಾಗದ ಸಂಪರ್ಕ ರಸ್ತೆಯ ಒತ್ತುವರಿ ಕಾರ್ಯ ಮಾತ್ರ ನಾನಾ ಸಮಸ್ಯೆಗಳಿಂದ ತಡವಾಗಿತ್ತು. ಈ ಬಗ್ಗೆ ಹಲವು ಸುತ್ತಿನ ಮಾತುಕತೆಗಳು ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ನಡೆದಿತ್ತು. ಇಲ್ಲಿ ಪಟ್ಟಾ ಸ್ಥಳ ಇದ್ದ ಕಾರಣ ಸೂಕ್ತ ಪರಿಹಾರಕ್ಕೆ ಒತ್ತಾಯಿಸಲಾಗುತ್ತಿತ್ತು. ಜಾಗ ಬಿಟ್ಟುಕೊಡಲು ಒಪ್ಪಿದ ಬಳಿಕ ಅಧಿಕಾರಿಗಳು ಪರಿಹಾರಕ್ಕೆ ಅಂದಾಜು ಪಟ್ಟಿ ಸಲ್ಲಿಸಿದ್ದರು. ಕಳೆದ ನವಂಬರ್‍ನಲ್ಲಿ ಎಲ್ಲಾ ಪರಿಹಾರ ಕಾರ್ಯಗಳಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು ಸುಮಾರು 0.17 ಸೆಂಟ್ಸ್ ಜಾಗಕ್ಕೆ ಪರಿಹಾದ ವ್ಯವಸ್ಥೆ ಆದ  ಬಳಿಕ ಈಗ ಸಂಪರ್ಕ ರಸ್ತೆಯ ಕಾಮಗಾರಿ ನಡೆಸಲಾಗುತ್ತಿದೆ. ಸಂಪರ್ಕ ರಸ್ತೆಯ ತಡೆಗೋಡೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಇದಾದ ಬಳಿಕ ಡಾಮರೀಕರಣ ನಡೆಸಲಾಗುವುದು, ಒಂದುವರೆಯಿಂದ ಎರಡು ತಿಂಗಳಲ್ಲಿ ಎಲ್ಲಾ ಕಾಮಗಾರಿಗಳು ಮುಗಿದು ಸುಸಜ್ಜಿತ ಸೇತುವೆ ಜನರಿಗೆ ದಕ್ಕಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ(ಕೆಆರ್‍ಡಿಸಿಎಲ್)ದ  ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ದಕ್ಷಿಣ ಭಾರತದ ಅತೀ ದೊಡ್ಡ ದೇವಾಲಯ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸುಲಭ ಸಂಪರ್ಕ ಕಲ್ಪಿಸುವ ಈ ಸೇತುವೆ ಮೈಸೂರು ರಾಜ್ಯ ಆಡಳಿತಾವಧಿಯಲ್ಲಿ 1955 ರಲ್ಲಿ ಗುಂಡ್ಯ ಹೊಳೆಗೆ ಹೊಸಮಠದಲ್ಲಿ ನಿರ್ಮಾಣವಾಯಿತು. ಅಂದಿನಿಂದ ಇಂದಿನ ತನಕ ಮಳೆಗಾಲದಲ್ಲಿ ನೆರೆನೀರಿಗೆ  ಮುಳುಗಿ ಅನೇಕ ದುರಂತಗಳಿಗೆ ಸಾಕ್ಷಿಯಾಗಿ ಆರು ದಶಕಗಳಿಂದ ಈ ಭಾಗದ ಜನರಿಗೆ ದುಸ್ವಪ್ನವಾಗಿ ಕಾಡುತ್ತಾ ತನ್ನ ಅಪಾಯಕಾರಿ ಸ್ವರೂಪವನ್ನು ಮುಂದುವರಿಸುತ್ತಲೇ ಬಂದಿತ್ತು.  ಅದೆಷ್ಟೋ ಜೀವಗಳನ್ನು ಬಲಿ ತೆಗೆದುಕೊಂಡು ಇಂದಿನ ವರೆಗೂ ಆತಂಕ ಮುಂದವರಿದೆ. ಈ ಸರಕಾರಿ ವ್ಯವಸ್ಥೆಯಲ್ಲಿ ಹೊಸ ಸೇತುವೆ ನಿರ್ಮಾಣವಾಗದೆ ಇನ್ನೆಷ್ಟು ಜೀವಗಳ ಬಲಿದಾನವಾಗಬೇಕೋ ಎನ್ನವ ಆತಂಕ ಈ ಭಾಗದ ಜನರಲ್ಲಿ ಮಡಗಟ್ಟಿಯೇ ಇತ್ತು.

Also Read  ಪರಿಶ್ರಮದಿಂದ ಆರ್ಥಿಕ ಪುನ:ಶ್ಚೇತನ ಸಾಧ್ಯ ➤ ಮೀನಾಕ್ಷಿ ಶಾಂತಿಗೋಡು

 

ಇದನ್ನೆಲ್ಲಾ  ಕೊನೆಗಾಣಿಸಬೇಕೆಂದು ಇಲ್ಲಿನ ಶಾಸಕ ಎಸ್.ಅಂಗಾರ ಅವರ ಮನವಿಗೆ ಸ್ಪಂದಿಸಿ ಏಳು  ವರ್ಷಗಳ ಹಿಂದೆ ರಾಜ್ಯ ಸರಕಾರ   7.5 ಕೋಟಿ ರೂ ಮಂಜೂರಾತಿ ನೀಡಿತ್ತು. ಟೆಂಡರ್ ಕೂಡಾ ಕರೆಯಲಾಗಿತ್ತು. ಆದರೆ ನಾಲ್ಕು ವರ್ಷಗಳಲ್ಲಿ ಟೆಂಡರ್ ಪ್ರಕ್ರಿಯೆ ಅಂತಿಮವಾಗಲೇ ಇಲ್ಲ. ಕೊನೆಗೆ ಕಾಸರಗೋಡು ಮೂಲದ  ಸುಬ್ರಹ್ಮಣ್ಯದಲ್ಲಿ  ಕುಮಾರಧಾರ ಸೇತುವೆ ನಿರ್ಮಾಣ ಮಾಡಿರುವ ಲೂಫ್ ಕನ್‍ಸ್ಟ್ರಕ್ಷನ್ ಸಂಸ್ಥೆ ಗುತ್ತಿಗೆ ಪಡೆದುಕೊಂಡು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಡಿಯಲ್ಲಿ ಅನುದಾನ ಮಂಜೂರುಗೊಂಡು 2014 ರಲ್ಲಿ ಕಾಮಗಾರಿ ಆರಂಭಗೊಂಡು ಕಾಮಗಾರಿ ಮುಕ್ಕಾಲು ಭಾಗ ಮುಗಿದಿದೆ. ಹಳೆಯ ಮುಳುಗು ಸೇತುವೆಯಿಂದ  ಕೆಳಗಡೆ ತಡೆಬೇಲಿಯನ್ನೊಳಗೊಂಡ ಸುಂದರ ಸೇತುವೆ ನಿರ್ಮಾಣವಾಗಿದೆ.

ಹಳೆಯ ಸೇತುವೆಯಿಂದ ನಾಲ್ಕು ಮೀಟರ್ ಎತ್ತರದಲ್ಲಿ ಹೊಸ ಸೇತುವೆ ನಿರ್ಮಾಣವಾಗಿದೆ. 125 ಮೀಟರ್ ಉದ್ದ 12 ಮೀಟರ್ ಅಗಲದಲ್ಲಿ ಸೇತುವೆ ಆರು ಪಿಲ್ಲರ್‍ಗಳಲ್ಲಿ ಎದ್ದು  ನಿಂತಿದೆ. ನಿಗಮದ ನಿಯಮಾನುಸಾರ ನಿಗದಿತ ಸಮಯಕ್ಕೆ, ಹಳೆ ಸೇತುವೆಯನ್ನು ಹಾಗೆಯೇ ಉಳಿಸಿಕೊಂಡು ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ.  ಸುಸಜ್ಜಿತ ಸೇತುವೆ ನಿರ್ಮಾಣವಾದರೂ ಸಂಪರ್ಕ ರಸ್ತೆಗಳನ್ನು ನಿರ್ಮಾಣವಾಗದೆ ಸೇತುವೆ ಆದರೂ ಬಳಕೆ ಮಾಡುವಂತಿಲ್ಲ ಎನ್ನುವಂತಾಗಿತ್ತು. ಇದೀಗ ಎಲ್ಲವೂ ಸುಗಮವಾಗಲಿದೆ.

Also Read  ಬಂಟ್ವಾಳ ಚೇಳೂರಿನಲ್ಲಿ ರಸ್ತೆ ಅಪಘಾತ ➤ ಸ್ಥಳಕ್ಕೆ ಶಾಸಕ ಯು.ಟಿ ಖಾದರ್ ಭೇಟಿ

 

error: Content is protected !!
Scroll to Top