(ನ್ಯೂಸ್ ಕಡಬ) newskadaba.com ಕಡಬ, ಜು.28. ಬಿಳಿನೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಟ್ಟಣದ ಮರವಂಜಿ ಎಂಬಲ್ಲಿ ನಿರ್ಮಾಣವಾಗುತ್ತಿರುವ ನೂತನ ಕಟ್ಟಡದಲ್ಲಿ ಮದ್ಯದಂಗಡಿ ತೆರಯಲು ತೆರೆಮರೆಯಲ್ಲಿ ಕಸರತ್ತು ನಡೆಸಲಾಗುತ್ತಿದೆ ಎನ್ನುವ ಸಾರ್ವಜನಿಕರ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಸ್ಥಳಕ್ಕಾಗಮಿಸಿದ ಕಡಬ ತಹಶೀಲ್ದಾರ್ ಅವರು ಕಟ್ಟಡ ಕಾಮಗಾರಿ ನಡೆಸದಂತೆ ಸೂಚನೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನೆಟ್ಟಣದ ರಾಜ್ಯ ಹೆದ್ದಾರಿಯ ಬದಿಯಲ್ಲಿದ್ದ ಮದ್ಯದಂಗಡಿಯನ್ನು ತೆರವುಗೊಳಿಸಿ ಇದನ್ನು ಮರವಂಜಿಯಲ್ಲಿ ತೋಮ್ಸನ್ ಎಂಬವರು ತನ್ನ ಸ್ವಂತ ಜಾಗದಲ್ಲಿ ನಿರ್ಮಾಣ ಮಾಡುತ್ತಿರುವ ಕಟ್ಟಡದಲ್ಲಿ ಮರು ಸ್ಥಾಪಿಸುತ್ತಾರೆ ಎಂದು ಗ್ರಾಮಸ್ಥರು ತಹಶೀಲ್ದಾರ್ ರವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಡಬ ವಿಶೇಷ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಅವರು ಸ್ಥಳಕ್ಕೆ ತೆರಳಿ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವಂತೆ ಸೂಚನೆ ನೀಡಿದರು. ಶುಕ್ರವಾರ ಮಧ್ಯಾಹ್ನದ ವೇಳೆಗೆ ಬಿಳಿನೆಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ಪ್ರಸಾದ್ ಕಟ್ಟಡ ನಿರ್ಮಾಣ ಕಾಮಗಾರಿ ನಿಲ್ಲಿಸುವಂತೆ ಸೂಚನೆ ನೀಡಿ ಬಂದಿದ್ದರು. ಸಂಜೆ ನಡೆದ ಬೆಳವಣಿಗೆಯಲ್ಲಿ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿದರು. ತಹಶೀಲ್ದಾರ್ ಆಗಮಿಸುತ್ತಿದ್ದಂತೆ ಬಾರ್ ವಿರೋಧಿಗಳು ನೂರಾರು ಜನ ಸ್ಥಳದಲ್ಲಿ ಜಮಾಯಿಸಿ ಕಟ್ಟಡ ನಿರ್ಮಾಣದ ವಿರುದ್ಧ ಘೋಷಣೆ ಕೂಗಿದರು, ಇದೇ ವೇಳೆ ಸ್ಥಳಕ್ಕಾಗಮಿಸಿದ ಬಿಳಿನೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ಈ ಕಟ್ಟಡ ನಿರ್ಮಾಣ ಪರವಾನಿಗೆ ನೀಡಿಲ್ಲ. ಅರ್ಜಿ ಬಂದರೂ 60 ದಿನಗಳ ಕಾಲ ಅರ್ಜಿಯನ್ನು ವಿಲೇವಾರಿ ಮಾಡದೆ ಅದರ ಸಾಧಕ ಬಾಧಕಗಳನ್ನು ನೋಡಿಕೊಂಡು ಮತ್ತೆ ಪರವಾನಿಗೆ ನೀಡುವ ನಿಯಮಾವಳಿ ಇದೆ. ಈ ಕಟ್ಟಡದಲ್ಲಿ ಮದ್ಯದಂಗಡಿ ತೆರಯಲಾಗುತ್ತದೆ ಇದಕ್ಕೆ ಅನುಮತಿ ನೀಡಬಾರದು ಎಂದು ಪಂಚಾಯಿತಿಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಮಾತ್ರವಲ್ಲದೆ ಗ್ರಾಮ ಸಭೆಯಲ್ಲಿ ಕೂಡಾ ವಿರೋಧ ವ್ಯಕ್ತವಾಗಿದೆ. ಇದೇ ಹಿನ್ನೆಯಲ್ಲಿ ಕಟ್ಟಡ ನಿರ್ಮಿಸಬೇಡಿ ಎಂದು ಪಂಚಾಯಿತಿ ವತಿಯಿಂದ ಸೂಚನೆ ನೀಡಲಾಗಿದೆ ಎಂದರು.
ಈ ವೇಳೆ ತಹಶೀಲ್ದಾರ್ ಜಾನ್ ಪ್ರಕಾಶ್ ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಯಲ್ಲಿ ಕಟ್ಟಡ ಕಾಮಗಾರಿ ಮುಂದುವರಿಸಬೇಡಿ ಎಂದು ಕಟ್ಟಡ ಮಾಲಕ ತೋಮ್ಸನ್ ಅವರಿಗೆ ಸೂಚಿಸಿದರು. ಅದಕ್ಕೆ ಉತ್ತರಿಸಿದ ಕಟ್ಟಡ ಮಾಲಕರು ನಾನು ನನ್ನ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವುದನ್ನು ತಡೆಯುವುದು ಸರಿಯಲ್ಲ. ಇದರಲ್ಲಿ ಕಮರ್ಶಿಯಲ್ ಉದ್ದೇಶವಿದ್ದು, ಬಾರ್ ಪ್ರಾರಂಭಿಸುವುದು ಬಿಡುವುದು ಆಮೇಲಿನ ವಿಚಾರ ಎಂದರು. ಇದರಿಂದ ಅಸಮಾಧಾನಗೊಂಡ ತಹಶೀಲ್ದಾರ್ ಕಟ್ಟಡಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ತರಿಸಿಕೊಂಡು ಭೂಪರಿವರ್ತನೆ ಪ್ರತಿ ಪಡೆದು ಇದನ್ನು ಕ್ಯಾನ್ಸಲ್ ಮಾಡುವಂತೆ ಸ್ಥಳದಲ್ಲಿದ್ದ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆಯವರಿಗೆ ಸೂಚಿಸಿದರು. ಕಟ್ಟಡ ಕಾಮಗಾರಿ ಮುಂದುವರಿಸಿದರೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಮೇಫಿ ಚೆರಿಯನ್, ಸದಸ್ಯ ಮನೋಜ್ ಕುಮಾರ್, ಮದ್ಯದಂಗಡಿ ವಿರೋಧಿ ಮುಖಂಡ ರಾಧಾಕೃಷ್ಣ, ಕಡಬ ಎ.ಎಸ್.ಐ. ರವಿ, ಹೆಡ್ ಕಾನ್ಸ್ಟೇಬಲ್ ತಾರಾನಾಥ್ ಮುಂತಾದವರು ಉಪಸ್ಥಿತರಿದ್ದರು.