ಉಪ್ಪಿನಂಗಡಿ: ಬಡ ಯುವಕನಿಗೆ ದಾನಿಗಳ ನೆರವು ಬೇಕಾಗಿದೆ

(ನ್ಯೂಸ್ ಕಡಬ) newskadaba.comಉಪ್ಪಿನಂಗಡಿ,  ಜ.09. ಉಪ್ಪಿನಂಗಡಿ: ಕೂಲಿ ಕೆಲಸದ ಮಾಡಿಕೊಂಡು ಮನೆಗೆ ಆಧಾರ ಸ್ತಂಭವಾಗಿದ್ದ ಯುವಕನೀಗ ತನ್ನೆರಡೂ ಕಿಡ್ನಿ ವೈಫಲ್ಯಗೊಂಡಿದ್ದರಿಂದ ದುಡಿಯಲಾರದ ಸ್ಥಿತಿ ತಲುಪಿದ್ದಾನೆ. ತನ್ನ ಕಿಡ್ನಿ ನೀಡಿ ಮಗನಿಗೆ ಬದುಕು ನೀಡಲು ಮುಂದಾದ ತಾಯಿಯೀಗ ಅದಕ್ಕೆ ತಗಲುವ ವೈದ್ಯಕೀಯ ವೆಚ್ಚ ಭರಿಸಲಾಗದೆ ಕಂಗಾಲಾಗಿದ್ದು, ದಾನಿಗಳಲ್ಲಿ ಮಗನ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕಾಗಿ ಸಹಾಯ ಯಾಚಿಸಿದ್ದಾರೆ. ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಹರಿನಗರ ನಿವಾಸಿ ಜಯಂತಿ ಅವರ ಕುಟುಂಬದ ಕರುಣಾಜನಕ ಕಥೆ. ಕೂಲಿ ಮಾಡಿ ಜೀವಿಸುವ ತೀರಾ ಬಡಕುಟುಂಬದ ಜಯಂತಿ ಅವರು ಇಲ್ಲಿನ ಜನತಾ ಕಾಲನಿಯಲ್ಲಿ ಸಿಮೆಂಟ್ ಶೀಟು ಹಾಸಲ್ಪಟ್ಟ ಸಣ್ಣ ಮನೆಯೊಂದರಲ್ಲಿ ವಾಸಿಸುತ್ತಿದ್ದು, ಕಳೆದ ಮೂರು ವರ್ಷಗಳ ಹಿಂದೆ ಮನೆಗೆ ಆಧಾರಸ್ತಂಭವಾಗಿದ್ದ ಪತಿ ಕರಮ ಅವರನ್ನು ಕಳೆದುಕೊಂಡರು. ಬಳಿಕ ಇವರ ಇಬ್ಬರೂ ಮಕ್ಕಳು ಶಾಲೆ ಬಿಟ್ಟು ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡರು.

ಇತ್ತ ಜಯಂತಿ ಅವರೂ ಬೀಡಿ ಕಟ್ಟಿ ಬರುವ ಆದಾಯದಿಂದ ಸಂಸಾರದ ನೊಗ ಸರಿದೂಗಿಸಲು ನೆರವಾಗಿದ್ದರು. ಆದರೆ ಕಳೆದ ಒಂದು ವರ್ಷದ ಹಿಂದೆ ಜಯಂತಿ ಅವರ ಪುತ್ರ 24ರ ಹರೆಯದ ದಿನೇಶ್ ಕುಮಾರ್ ಅವರ ಎರಡೂ ಕಿಡ್ನಿಗಳು ವೈಫಲ್ಯಕ್ಕೀಡಾದವು. ಆ ಸಂದರ್ಭ ಮಂಗಳೂರಿನ ಎಜೆ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು. ಅಲ್ಲಿನ ವೈದ್ಯರು ಅವರನ್ನು ಪರೀಕ್ಷಿಸಿ ಡಯಾಲಿಸ್‍ಗೆ ಮೊದಲ ಆರು ತಿಂಗಳು ಪ್ರತಿ ತಿಂಗಳಿಗೆ 20 ಸಾವಿರದಿಂದ 25 ಸಾವಿರದವರೆಗೆ ಖರ್ಚು ಬರುತ್ತದೆ. ಆ ಬಳಿಕ ಜೀವನದ ಕೊನೆಯವರೆಗೂ ಡಯಾಲಿಸಿಸ್ ಮಾಡಲು ತಿಂಗಳಿಗೆ 10 ರಿಂದ 15 ಸಾವಿರದವರೆಗೆ ಖರ್ಚು ಬರುತ್ತದೆ ಹಾಗೂ ಕಿಡ್ನಿ ಕಸಿ ಮಾಡಲು ಐದು ಲಕ್ಷದಿಂದ 6 ಲಕ್ಷದಷ್ಟು ಖರ್ಚು ಬರುತ್ತದೆ ಎಂದು ತಿಳಿಸಿದ್ದರು. ಇದನ್ನು ಕೇಳಿ ಈ ಬಡ ಕುಟುಂಬ ಕಂಗಾಲಾದರೂ ಮಗನ ಚಿಕಿತ್ಸೆಗೆ ತಾಯಿ ಜಯಂತಿ ಮುಂದಾಗಿ ಸಿಕ್ಕ ಸಿಕ್ಕ ಕಡೆ ಸಾಲ ಮಾಡಿ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸತೊಡಗಿದರು. ಆದರೆ ಆರ್ಥಿಕವಾಗಿ ಅವರು ತೀರಾ ಕಂಗೆಟ್ಟಾಗ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‍ಗೆ ಮುಂದಾದರೂ. ಮಗನಿಗೆ ಬದುಕು ನೀಡಲು ನಿಶ್ಚಯಿಸಿದ ತಾಯಿ ಜಯಂತಿ ಅವರು ತನ್ನ ಒಂದು ಕಿಡ್ನಿಯನ್ನು ಮಗನಿಗೆ ನೀಡಲು ನಿರ್ಧರಿಸಿದ್ದು, ಇವರ ಈ ಕಿಡ್ನಿಯು ದಿನೇಶ್ ಅವರಿಗೆ ತಾಳೆಯಾಗುತ್ತದೆ. ಆದರೆ ಕಿಡ್ನಿ ಕಸಿ ಮಾಡಲು ಐದು ಲಕ್ಷದಿಂದ ಆರು ಲಕ್ಷದವರೆಗೆ ಹಣ ಖರ್ಚಾಗಲಿದ್ದು, ಇದನ್ನು ಹೊಂದಿಸಲು ಸಾಧ್ಯವಾಗದೇ ಕಣ್ಣೀರಿಡುತ್ತಿದ್ದಾರೆ. ಕೊನೆಗೆ ಇದೀಗ ಅವರು ತನ್ನ ಮಗನಿಗೆ ಬದುಕು ನೀಡಲು ದಾನಿಗಳ ಮೊರೆ ಹೋಗಿದ್ದು, ಮಗನ ಚಿಕಿತ್ಸೆಗೆ ನೆರವಾಗಲು ಸಹೃದಯ ದಾನಿಗಳಲ್ಲಿ ವಿನಂತಿಸಿದ್ದಾರೆ.

Also Read  ತುಳು ನಟ ಸುರೇಂದ್ರನನ್ನು ಕೊಲೆಗೈದಿದ್ದು ನಾನೇ ➤ ಇದು ಕಿಶನ್ ಹೆಗ್ಡೆ ಸಾವಿನ ಪ್ರತೀಕಾರ ಎಂದ ಆರೋಪಿ


ದಿನೇಶ್ ಕುಮಾರ್ ಅವರಿಗೆ ಕಿಡ್ನಿ ಕಸಿ ಮಾಡಲು ಧನ ಸಹಾಯ ಮಾಡುವ ದಾನಿಗಳು ಉಪ್ಪಿನಂಗಡಿಯ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ದಿನೇಶ್ ಕುಮಾರ್ ಅವರ ಉಳಿತಾಯ ಖಾತೆ ಸಂಖ್ಯೆ : 8082500100880801 (ಐಎಫ್‍ಎಸ್‍ಸಿ ಕೋಡ್: ಕೆಎಆರ್‍ಬಿ 0000808)ಗೆ ಹಣದ ಸಹಾಯ ನೀಡಬಹುದು. ಹೆಚ್ಚಿನ ಮಾಹಿತಿಗೆ ದಿನೇಶ್ ಕುಮಾರ್ (ಮೊ.ಸಂ.: 6364499117) ಅಥವಾ ದಿನೇಶ್ ಅವರ ಚಿಕ್ಕಮ್ಮ ರೋಹಿಣಿ (ಮೊ.ಸಂ.: 9880353022) ಅವರನ್ನು ಸಂಪರ್ಕಿಸಬಹುದು.

Also Read  ಸುಬ್ರಹ್ಮಣ್ಯ: ಮಗುವನ್ನು ಹಾವಿನಿಂದ ರಕ್ಷಿಸಿದ ಬೀದಿ ನಾಯಿ..!

 

error: Content is protected !!
Scroll to Top