(ನ್ಯೂಸ್ ಕಡಬ)newskadaba.com.ಆಲಂಕಾರು,ಜ.6.ಲೋಕೋಪಯೋಗಿ ಜಾಗವನ್ನು ಅತಿಕ್ರಮಿಸಿ ಅಕ್ರಮವಾಗಿ ನಿರ್ಮಾಣಗೊಂಡ ಅಂಗಡಿ ಕಟ್ಟಡಗಳ ತೆರವು ಕಾರ್ಯವನ್ನು ಲೋಕೋಪಯೋಗಿ ಇಲಾಖೆಯು ಆಲಂಕಾರಿನಲ್ಲಿ ಶನಿವಾರ ಬೆಳಿಗ್ಗೆ ನಡೆಸಿತು.ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಗೆ ತಾಗಿಕೊಂಡು ಸುರುಳಿ ಕ್ರಾಸ್ ಬಳಿ ಅಕ್ರಮವಾಗಿ ತಲೆಯೆತ್ತಿದ ತರಕಾರಿ ಅಂಗಡಿಯಿಂದಾಗಿ ಸಾರ್ವಜನಿಕರಿಗೆ ಮತ್ತು ವಾಹನ ಓಡಾಟಕ್ಕೆ ತೊಂದರೆಯಾಗಿದೆ, ಈ ಕಟ್ಟಡಗಳನ್ನು ತೆರವುಗೊಳಿಸುವಂತೆ ಸ್ಥಳೀಯ ನಿವಾಸಿ ಎ.ಬಿ.ಸುಂದರರವರು ಸ್ಥಳವನ್ನು ಪರಿಶೀಲಿಸಿ ಕಟ್ಟಡ ತೆರವುಗೊಳಿಸವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದ್ದರು. ಮತ್ತು ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ತೂರು ಪೊಲೀಸ್ ಉಪನಿರೀಕ್ಷಕರಿಗೆ ದಕ್ಷಿಣ ಕನ್ನಡ ಜಿಲ್ಲಾ ದಲಿತ ಸೇವಾ ಸಮಿತಿ ಪುತ್ತೂರು ಇದರ ಮೂಲಕ ದೂರು ನೀಡಿದ್ದರು.
ದೂರನ್ನು ಪರಿಶೀಲಿಸಿದ ಲೋಕೋಪಯೋಗಿ ಇಲಾಖೆಯು ಡಿ.24ರಂದು ಕಟ್ಟಡ ತೆರವುಗೊಳಿಸಲು ದಿನ ನಿಗದಿ ಪಡಿಸಿತ್ತು. ಆದರೆ ತುರ್ತು ಕರ್ತವ್ಯದ ನಿಮಿತ್ತ ಲೋಕೋಪಯೋಗಿ ಇಂಜಿನಿಯರ್ ಬೆಂಗಳೂರಿಗೆ ತೆರಳಿದ ಕಾರಣ ತೆರವು ಕಾರ್ಯವನ್ನು ರದ್ದು ಪಡಿಸಲಾಗಿತ್ತು. ಈ ಬಗ್ಗೆ ಕುಪಿತಗೊಂಡಿದ್ದ ಜಿಲ್ಲಾ ದಲಿತ ಸೇವಾ ಸಮಿತಿಯು ಶೀಘ್ರದಲ್ಲೇ ಅಕ್ರಮಕಟ್ಟಡವನ್ನು ತೆರವುಗೊಳಿಸದಿದ್ದಲ್ಲಿ ಜಿಲ್ಲಾ ದಲಿತ ಸೇವಾ ಸಮಿತಿಯು ಪ್ರತಿಭಟನೆಯನ್ನು ನಡೆಸಲಿದ್ದೇವೆ ಎಂದು ಲೋಕೋಪಯೋಗಿ ಇಲಾಖೆಗೆ ಎಚ್ಚರಿಕೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯು ಜ.5ರಂದು ದಿನ ನಿಗದಿಪಡಿಸಿ ಸಂಬಂಧಿಸಿದ ಕಟ್ಟಡ ಮಾಲಿಕರಿಗೆ ಮತ್ತು ಸೂಚನಾ ಪತ್ರವನ್ನು ನೀಡಿತ್ತು. ಆದರೆ ಕೊನೆಕ್ಷಣದವರೆಗೂ ವ್ಯಾಪರಸ್ಥ ಕಟ್ಟಡದಿಂದ ಸಾಮಾನುಗಳನ್ನು ತೆರವುಗೊಳಿಸದೆ ವ್ಯಾಪಾರ ವಹಿವಾಟು ನಡೆಸಿದ್ದರು. ಸ್ಥಳಕ್ಕೆ ಪೊಲೀಸರು ಮತ್ತು ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಆಗಮಿಸಿದ ಬಳಿಕ ವ್ಯಾಪಾರಸ್ಥ ಸಾಮಾನುಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾದರು. ಸಾಮಾನು ತೆರವುಗೊಳಿಸಿದ ತಕ್ಷಣ ಜೆಸಿಬಿ ಯಂತ್ರ ಮೂಲಕ ಅಕ್ರಮವಾಗಿ ನಿರ್ಮಾಣವಾಗಿದ್ದ ಕಟ್ಟಡವನ್ನು ತೆರವುಗೊಳಿಸಲಾಯಿತು.
ಇನ್ನಷ್ಟು ಅಕ್ರಮ ಕಟ್ಟಡಗಳ ತೆರವು ಕಾರ್ಯ ಮಾಡಲಾಗುವುದು _ ರಾಜು ಹೊಸ್ಮಠ
ದಲಿತರ ಜಾಗವನ್ನು ಸಮಾಜ ಉಳಿದ ಜನಾಂಗದವರು ಅತಿಕ್ರಮಿಸಿಕೊಂಡು ಕಟ್ಟಡ ನಿರ್ಮಾಣಕ್ಕೆ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಕೆಲವೊಂದು ಜನರು ತಾತ್ಕಾಲಿಕ ಕಟ್ಟಡವನ್ನು ನಿರ್ಮಾಣ ಮಾಡಿದ್ದಾರೆ. ಈ ತಾತ್ಕಾಲಿಕ ಕಟ್ಟಡವನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಬರೆಯಲಾಗಿದೆ. ತೆರವುಗೊಳಿಸದಂತೆ ಕಾಣದ ಕೈಗಳು ಕೆಲಸ ನಿರ್ವಹಿಸುತ್ತಿವೆ ಎಂಬ ಮಾಹಿತಿಗಳಿವೆ. ದಲಿತರಿಗೆ ಅನ್ಯಾಯವಾಗುವ ರೀತಿಯಲ್ಲಿರುವ ಎಷ್ಟೇ ಪ್ರಭಾವಶಾಲಿ ವ್ಯಕ್ತಿಯ ಕಟ್ಟಡವಾಗಿದ್ದರೂ ತೆರವುಗೊಳಿಸದೆ ಬಿಡುವುದಿಲ್ಲ. ಇದಕ್ಕಾಗಿ ಪ್ರತಿಭಟನೆಗೂ ಸಿದ್ದ ಎಂದು ಕಟ್ಟಡ ತೆರವಿನ ಸ್ಥಳದಲ್ಲಿ ಉಪಸ್ಥಿತರಿದ್ದ ಪುತ್ತೂರು ತಾಲೂಕು ದಲಿತ ಸೇವಾ ಸಮಿತಿಯ ಅಧ್ಯಕ್ಷ ರಾಜು ಹೊಸ್ಮಠ ಪತ್ರಿಕೆಗೆ ತಿಳಿಸಿದರು. ಲೋಕೋಪಯೋಗಿ ಇಲಾಖಾ ಇಂಜಿನಿಯರ್ರಾಜಾರಂ, ಪ್ರಮೋದ್ ದಲಿತ ಸೇವಾ ಸಮಿತಿಯ ಜಿಲ್ಲಾ ಅಧ್ಯಕ್ಷ ಸೇಸಪ್ಪ ಬೆದ್ರಕಾಡು, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಶೀನ ಮೂಲೆತ್ತಮಜಲು, ದಾಮೋದರ, ದಲಿತ ಮಹಿಳಾ ಗೌರವಾಧ್ಯಕ್ಷೆ ಲಲಿತಾ ನಾಯ್ಕ, ತಾಲೂಕು ಸಮಿತಿಯ ಅಧ್ಯಕ್ಷ ಕೇಶವ ಕುಪ್ಲಾಜೆ, ಜಿಲ್ಲಾ ಕಾರ್ಯದರ್ಶಿ ಧನಂಜಯ ಬಲ್ನಾಡು, ಮೊದಲಾದವರು ಉಪಸ್ಥಿತರಿದ್ದರು.