29 ವರ್ಷಗಳ ಬಳಿಕ ಕೂರ ಅಂಗನವಾಡಿ ಕೇಂದ್ರಕ್ಕೆ ಸಿಗಲಿದೆ ಆರ್.ಟಿ.ಸಿ.

(ನ್ಯೂಸ್ ಕಡಬ) newskadaba.com.ಕಡಬ,ಜ. 4. 1989ರಲ್ಲಿ ಸ್ಥಾಪನೆಗೊಂಡ ಕುದ್ಮಾರು ಗ್ರಾಮದ ಕೂರ ಅಂಗವವಾಡಿ ಕೇಂದ್ರಕ್ಕೆ 29 ವರ್ಷಗಳ ಬಳಿಕ ಆರ್‍ಟಿಸಿ ದೊರೆಯಲಿದೆ. ಆರ್‍ಟಿಸಿ ರಚನೆ ಕುರಿತಂತೆ ಪೂರಕ ಪ್ರಕ್ರಿಯೆಗಳಿಗೆ ಇದೀಗ ವೇಗ ದೊರೆತಿದೆ. ಅಂಗನವಾಡಿ ಕಾರ್ಯಕರ್ತೆ ಕಳೆದ 25 ವರ್ಷಗಳಿಂದ ಗ್ರಾಮಸಭೆ ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ಆರ್‍ಟಿಸಿ ಮಾಡಿಕೊಡುವಂತೆ ಮನವಿ ನೀಡುತ್ತಾ ಬಂದಿದ್ದು, ಇದೀಗ ಮನವಿಗೆ ಸ್ಪಂದನೆ ಸಿಕ್ಕಿದೆ. ಅಂಗನವಾಡಿ ಕೇಂದ್ರದ ಜಾಗವು ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿದೆ ಎಂಬ ಗುಮಾನಿಯಿಂದಾಗಿ ಇದುವರೆಗೆ ಕೂರ ಅಂಗನವಾಡಿ ಕೇಂದ್ರಕ್ಕೆ ಆರ್‍ಟಿಸಿ ನೀಡುವಲ್ಲಿ ತೊಡಕಾಗಿ ಪರಿಣಮಿಸಿತ್ತು. ವಾಸ್ತವವಾಗಿ ಕೂರ ಅಂಗನವಾಡಿ ಕೇಂದ್ರವು ಮುಖ್ಯರಸ್ತೆಯಿಂದ 40 ಮೀಟರ್ ದೂರದಲ್ಲಿದೆ.ಅಂಗನವಾಡಿ ಕೇಂದ್ರದ ಆರ್‍ಟಿಸಿ ಮಾಡಿಕೊಡಲು ಕಂದಾಯ ಇಲಾಖೆಯಿಂದ ಸಾಧ್ಯವಿಲ್ಲವೆಂದಾದಲ್ಲಿ ಪತ್ಯೇಕ ಸರಕಾರಿ ಜಾಗದಲ್ಲಾದರೂ ನಿವೇಶನಕ್ಕಾಗಿ ಜಾಗ ಕಾದಿರಿಸುವಂತೆ ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ವಸಂತಿ ಅವರು ದುಂಬಾಲು ಬಿದ್ದು ನಿರಂತರವಾಗಿ ವಿನಂತಿಸಿಕೊಳ್ಳುತ್ತಿದ್ದರು. ಸಿಡಿಪಿಒ ಕೂಡ ಈ ನಿಟ್ಟಿನಲ್ಲಿ ತಹಸೀಲ್ದಾರ್ ಅವರಲ್ಲಿ ಕೋರಿಕೊಂಡಿದ್ದರು. ಆದರೆ, ಅದ್ಯಾವ ಪ್ರಯತ್ನವೂ ಕೈಗೂಡಿರಲಿಲ್ಲ.

ಸೌಲಭ್ಯ ಪಡೆಯಲು ತೊಡಕು

Also Read  ನಿಲ್ಲಿಸಿದ್ದ ಲಾರಿಗೆ ರಿಕ್ಷಾ ಡಿಕ್ಕಿ ➤ ಮೀನು ವ್ಯಾಪಾರಿಯಾಗಿದ್ದ ರಿಕ್ಷಾ ಚಾಲಕ ಮೃತ್ಯು

ಪ್ರಸ್ತುತ ಅಂಗನವಾಡಿ ಕೇಂದ್ರದ ಹೆಸರಲ್ಲಿ ಆರ್‍ಟಿಸಿ ಇಲ್ಲದ ಕಾರಣ ಸರಕಾರದಿಂದ ಹೊಸ ಕಟ್ಟಡಕ್ಕೆ ಸಿಗುವ ಅನುದಾನ ಪಡೆಯಲು ಸಾಧ್ಯವಾಗಿಲ್ಲ. ಅದಲ್ಲದೇ ನಾನಾ ಕಾರಣಗಳಿಗಾಗಿ ಆರ್‍ಟಿಸಿಯ ಅಗತ್ಯತೆ ಇದ್ದು, ಇದರಿಂದಾಗಿ ಅನೇಕ ಸಮಸ್ಯೆಗಳನ್ನು ಅಂಗನವಾಡಿ ಕೇಂದ್ರ ಅನುಭವಿಸಿತ್ತು.ವಾಸ್ತವ ವಿಚಾರ ಅರಿತ ತಾಲೂಕು ಪಂಚಾಯಿತಿ ಸದಸ್ಯೆ ಲಲಿತಾ ಈಶ್ವರ ಅವರು ಲೋಕೋಪಯೋಗಿ ಇಲಾಖೆ ಹಾಗೂ ಕಂದಾಯ ಇಲಾಖೆಯನ್ನು ಸಂಪರ್ಕಿಸಿ ಸರ್ವೆ ಕಾರ್ಯ ನಡೆಸುವಂತೆ ಕೇಳಿಕೊಂಡರು. ಹೀಗಾಗಿ ಸ್ಥಳಕ್ಕಾಗಮಿಸಿದ ಪಿಡಬ್ಲ್ಯುಡಿ ಇಂಜಿನೀಯರ್ ಅಂಗನವಾಡಿ ಕೇಂದ್ರ ಪಿಡಬ್ಲ್ಯುಡಿ ರಸ್ತೆ ಅಂತರದಿಂದ ಹೊರಗಿರುವುದನ್ನು ಖಚಿತಪಡಿಸಿದರು. ಬಳಿಕ ತಾಲೂಕು ಪಂಚಾಯಿತಿ ಸದಸ್ಯೆ ಲಲಿತಾ ಅವರು ಸಂಬಂಧಪಟ್ಟ ಕಡತಗಳೊಂದಿಗೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರ ಬಳಿ ತೆರಳಿ ವಾಸ್ತವ ವಿಚಾರವನ್ನು ಮನಗಾಣಿಸಿ ಶೀಘ್ರದಲೇ ಆರ್‍ಟಿಸಿ ಮಾಡಿಕೊಡುವಂತೆ ಕೋರಿದರು.

ಸರ್ವೆ ಕಾರ್ಯ ಪೂರ್ಣ

ಮಂಗಳವಾರ ಸರ್ವೇಯರ್ ಶಿವಣ್ಣ, ಕುದ್ಮಾರು ಗ್ರಾಮದ ಗ್ರಾಮ ಕರಣಿಕ ಸಂತೋಷ್, ಗ್ರಾಮ ಸಹಾಯಕ ಯೋಗೀಶ್ ಬರೆಪ್ಪಾಡಿ, ಬಾಬಣ್ಣ ಬರೆಪ್ಪಾಡಿ ಅವರು ಕೂರ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ಸವೇ ಕಾರ್ಯ ನಡೆಸಿದರು. ಆರ್‍ಟಿಸಿಗೆ ಸಂಬಂಧಪಟ್ಟಂತ ಪ್ರಕ್ರಿಯೆ ಶೀಘ್ರದಲ್ಲೇ ಮಾಡಲಾಗುವುದು ಎಂದು ಶಿವಣ್ಣ ಇದೇ ಸಂದರ್ಭದಲ್ಲಿ ಭರವಸೆಯಿತ್ತರು. ಈ ವೇಳೆ ತಾಲೂಕು ಪಂಚಾಯಿತಿ ಸದಸ್ಯೆ ಲಲಿತಾ ಈಶ್ವರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮೇಶ್ವರಿ ಅಗಳಿ, ಬಾಲವಿಕಾಸ ಸಮಿತಿ ಝೈನಬಿ, ಮಾಜಿ ಅಧ್ಯಕ್ಷ ಮೇದಪ್ಪ ಕೆಡೆಂಜಿ, ಅಂಗನವಾಡಿ ಕಾರ್ಯಕರ್ತೆ ವಸಂತಿ, ಸಹಾಯಕಿ ಲಲಿತಾ, ಅಂಗನವಾಡಿ ಪುಟಾಣಿಗಳ ಪೋಷಕರಾದ ಲವಕುಮಾರ್ ನೂಜಿ, ಹರೀಶ್ ಜನತಾಗೃಹ ಮೊದಲಾದವರು ಈ ಸಂದರ್ಭದಲ್ಲಿದ್ದರು.

Also Read  ಕಡಬ: ಪಿಜಕ್ಕಳ ಪಾಲೋಳಿ ಸೇತುವೆಯ ಸ್ಟ್ರೀಟ್ ಲೈಟು ಕಳ್ಳತನ

 

 

error: Content is protected !!
Scroll to Top