(ನ್ಯೂಸ್ ಕಡಬ) newskadaba.com ಕಡಬ, ಜು.28. ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಯ ಗ್ರಾಮದ ದೇರಾಜೆಕ್ರಾಸ್ – ಗಾಣದಕೊಟ್ಟಿಗೆ ಸಂಪರ್ಕ ರಸ್ತೆಯ ಗಾಣದಕೊಟ್ಟಿಗೆ ಎಂಬಲ್ಲಿ ರಸ್ತೆಯಲ್ಲಿ ಹರಿಯುತ್ತಿರುವ ನೀರನ್ನು ಖಾಸಗಿ ವ್ಯಕ್ತಿಗಳಿಬ್ಬರು ತಮ್ಮ ಸ್ವಹಿತಕ್ಕಾಗಿ ತಡೆಹಿಡಿದ ಪರಿಣಾಮ ರಸ್ತೆಯಲ್ಲಿ ನೀರು ನಿಂತು ಸಂಚರಿಸಲು ಅಸಾಧ್ಯವಾಗಿದೆ ಎಂದು ಆರೋಪಿಸಿ ಗಾಣದಕೊಟ್ಟಿಗೆ ನಿವಾಸಿಗಳು ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ಅವರಿಗೆ ಲಿಖಿತ ದೂರು ನೀಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಸ್ಥಳಿಯಾಡಳಿತ ಅಧೀನದ ಈ ರಸ್ತೆಯನ್ನು ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ಉಪಯೋಗಿಸುತ್ತಿವೆ. ಈ ರಸ್ತೆಯ ಗಾಣದಕೊಟ್ಟಿಗೆ ಎಂಬಲ್ಲಿ ಮೋರಿ ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ ಮಳೆ ನೀರು ರಸ್ತೆಗೆ ಅಡ್ಡವಾಗಿ ಹರಿಯುತ್ತಿದೆ. ತೋಡಿನಂತಾಗಿರುವ ರಸ್ತೆಯ ಪಕ್ಕದಲ್ಲಿರುವ ವ್ಯಕ್ತಿಗಳಿಬ್ಬರು ಹರಿಯುವ ನೀರನ್ನು ತಡೆಹಿಡಿದು ತನ್ನ ಗದ್ದೆಯಲ್ಲಿ ಬೇಸಾಯಕ್ಕಾಗಿ ಉಪಯೋಗಿಸುತ್ತಿದ್ದಾರೆ. ನೀರನ್ನು ತಡೆಹಿಡಿದ ಪರಿಣಾಮ ರಸ್ತೆ ನೀರಿನಿಂದ ಆವೃತವಾಗಿ ಕೆರೆಯಂತಾಗಿ ಸಂಚಾರ ಅಸಾಧ್ಯವಾಗಿದೆ. ದಿನನಿತ್ಯ ನಡೆದಾಡಲು ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಮಂದಿ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಸೂಕ್ತ ಕ್ರಮಕೈಗೊಳ್ಳಿ ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ಕುಟ್ರುಪಾಡಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಕಡಬ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಕಡಬ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಅವರಿಗೂ ದೂರು ನೀಡಲಾಗಿದೆ.