(ನ್ಯೂಸ್ ಕಡಬ) newskadaba.com.ಮಂಗಳೂರು,ಜ.2.ವೀರ ರಾಣಿ ಅಬ್ಬಕ್ಕ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಈಗಾಗಲೇ ಒಂದು ಸುತ್ತಿನ ಸಭೆಯನ್ನು ನಡೆಸಿದ್ದು, ಎಲ್ಲರ ಸಲಹೆಗಳನ್ನು ಪರಿಗಣಿಸಿ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಸೂಚನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಅಬ್ಬಕ್ಕ ಉತ್ಸವ ಕುರಿತಾದ ಸಭೆಯಲ್ಲಿ ಎಲ್ಲರೂ ಜತೆಯಾಗಿ ಸೇರಿ ವೀರರಾಣಿ ಅಬ್ಬಕ್ಕ ಉತ್ಸವ ಮಾಡೋಣ ಎಂದು ಸಚಿವರು ಅಭಿಪ್ರಾಯಪಟ್ಟರು.
ಈ ಬಾರಿಯ ಅಬ್ಬಕ್ಕ ಉತ್ಸವವನ್ನು ಫೆ.೨-೩ರಂದು ಉಳ್ಳಾಲದಲ್ಲಿ ನಡೆಸಲಾಗುವುದು. ಬೀಚ್ ಉತ್ಸವ ಈ ವರ್ಷದ ಅಬ್ಬಕ್ಕ ಉತ್ಸವದ ವಿಶೇಷ ಆಕರ್ಷಣೆಯಾಗಲಿದೆ ಎಂದು ಸಚಿವ ಖಾದರ್ ಹೇಳಿದರು. ಜಿಲ್ಲಾಧಿಕಾರಿಯವರು ಮಾತನಾಡಿ, ಅಬ್ಬಕ್ಕ ಉತ್ಸವವನ್ನು ಸರ್ಕಾರದ ಕಾರ್ಯಕ್ರಮವಾಗಿ ನಡೆಸಲು ಸೂಚನೆ ಬಂದಿದ್ದು, ಅದರಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉತ್ಸವ ನಡೆಯಲಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|ಆರ್.ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ಕುಮಾರ್, ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಉಪ ಪೊಲೀಸ್ ಆಯುಕ್ತೆ ಉಮಾ ಪ್ರಶಾಂತ್, ಮಂಗಳೂರು ಮಹಾ ನಗರಪಾಲಿಕೆಯ ಆಯುಕ್ತ ಮೊಹಮ್ಮದ್ ನಝೀರ್ ಮೊದಲಾದವರು ಉಪಸ್ಥಿತರಿದ್ದರು.