ದಂತ ಚಿಕಿತ್ಸೆಯಲ್ಲಿ ಲೇಸರ್ ► ಡಾ| ಮುರಲೀ ಮೋಹನ್ ಚೂಂತಾರು ರವರ ಲೇಖನ

(ನ್ಯೂಸ್ ಕಡಬ) newskadaba.com.ಜ.2 ಇತ್ತೀಚಿನ ದಿನಗಳಲ್ಲಿ ದಂತ ವೈದ್ಯಕೀಯ ರಂಗದಲ್ಲಿ ಚಿಕಿತ್ಸೆಗಾಗಿ ಲೇಸರ್ ಬಳಕೆ ಹೆಚ್ಚುತ್ತಿದೆ. ಲೇಸರ್ ಕಿರಣ ಬಳಸಿ ದೇಹದಲ್ಲಿನ ಜೇವಕೋಶಗಳ ಬೆಳವಣಿಗೆಯನ್ನುನಿಯಂತ್ರಿಸಲಾಗುತ್ತದೆ. ಮತ್ತು ಕೆಲವೊಮ್ಮೆ ಅನಗತ್ಯವಾದ ಜೀವಕೋಶಗಳ ಬೆಳವಣಿಗೆಯನ್ನು ನಿಲ್ಲಿಸಲಾಗುತ್ತದೆ. ದಂತ ಚಿಕಿತ್ಸೆಯಲ್ಲಿ ಸೌಂದರ್ಯಕ್ಕೆ ಹೆಚ್ಚು ಗಮನ ನೀಡುವುದರಿಂದ ಹಲ್ಲಿನ ವಸಡಿನ ಸೌಂದರ್ಯವನ್ನು ಹೆಚ್ಚಿಸಲೂ ಇತ್ತೀಚಿಗೆ ಲೇಸರ್ ಕಿರಣಗಳ ಬಳಕೆಯನ್ನು ಹೆಚ್ಚು ಹೆಚ್ಚಾಗಿ ಮಾಡುತ್ತಾರೆ.

ದಂತ ವೈದ್ಯಕೀಯದಲ್ಲಿ ಬಳಸುವ ಲೇಸರ್‍ಗಳನ್ನು ಎರಡು ನಿಧಾನಗಳಾಗಿ ವಿಂಗಡಿಸಲಾಗಿದೆ.
1. ಗಟ್ಟಿಯಾದ ವಸ್ತುಗಳ ಮೇಲೆ ಬಳಸುವ ಲೇಸರ್:- ಇಂತಹ ಲೇಸರ್‍ಗಳನ್ನು ಸಾಮಾನ್ಯವಾಗಿ ಹಲ್ಲುಗಳ ಮೇಲೆ ಬಳಸಲಾಗುತ್ತದೆ. ಹಲ್ಲುಗಳಲ್ಲಿ ಉಂಟಾದ ದಂತ ಕ್ಷಯವನ್ನು ಪತ್ತೆ ಹಚ್ಚಲು ಮತ್ತು ಹಲ್ಲಿನಲ್ಲಿ ಸಣ್ಣ ಪುಟ್ಟ ತೂತುಗಳನ್ನು ಮಾಡಲು ಕೂಡಾ ಲೇಸರ್ ಕಿರಣ ಬಳಸುತ್ತಾರೆ. ಹಲ್ಲಿನಲ್ಲಿರುವ ಕ್ಯಾಲ್ಸಿಯಂ ಪಾಸ್ಫೇಟನ್ನು ಭೇಧಿಸಿ ಹಲ್ಲಿನಲ್ಲಿ ಸಣ್ಣ ರಂಧ್ರ ಮಾಡಿ ಹಲ್ಲಿಗೆ ಹಲ್ಲಿನ ಬಣ್ಣದ ಸಿಮೆಂಟ್ ತುಂಬಿಸಲಾಗುತ್ತದೆ. ಅದೇ ರೀತಿ ಹಲ್ಲಿನ ರೂಪವನ್ನು ಮಾರ್ಪಡಿಸಲು ಕೂಡಾ ಲೇಸರ್ ಬಳಸುತ್ತಾರೆ. ಹಲ್ಲಿನಲ್ಲಿ ಅತೀ ಸಂವೇಂದನೆ ಇದ್ದಲ್ಲಿ ಲೇಸರ್ ಬಳಸಿ ಹಲ್ಲಿನ ಅತೀ ಸಂವೇದನೆಯನ್ನು ಕಡಮೆ ಮಾಡಲಾಗುತ್ತದೆ. ಇಂತಹಾ ಲೇಸರ್‍ಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗುತ್ತದೆ. ಹೆಚ್ಚಿನ ಜನರು ಹಲ್ಲನ್ನು ಡ್ರಿಲ್ ಮಾಡುವ ಶಬ್ದಕ್ಕೆ ಹೆದರುವ ಕಾರಣದಿಂದಲೇ ಈ ರೀತಿಯ ಲೇಸರ್‍ಗಳಿಗೆ ಜನರು ಹೆಚ್ಚು ಹೆಚ್ಚು ಮಾರು ಹೋಗುತ್ತಿದ್ದಾರೆ.

2. ಮೃದು ವಸ್ತುಗಳ ಮೇಲೆ ಬಳಸುವ ಲೇಸರ್‍ಗಳು :- ಇಂತಹಾ ಲೇಸರ್ ಕಿರಣಗಳನ್ನು ಹಲ್ಲಿನ ಸುತ್ತ ಇರುವ ವಸಡುಗಳ ಬಣ್ಣ ಬದಲಾಯಿಸುವ ಮತ್ತು ವಸಡುಗಳ ಗಾತ್ರವನ್ನು ಸಣ್ಣ ಮಾಡಲು ಬಳಸಲಾಗುತ್ತ್ತದೆ. ಈ ಲೇಸರ್ ಕಿರಣಗಳು ರಕ್ತದಲ್ಲಿನ ಹಿಮೋಗ್ಲೋಬಿನ್ ಮತ್ತು ನೀರಿನ ಅಂಶವನ್ನು ಹೀರಿಕೊಂಡು, ರಕ್ತನಾಳಗಳ ಮೇಲೂ ಪರಿಣಾಮ ಬೀರುತ್ತದೆ. ವಸಡಿನಲ್ಲಿರುವ ಮೆಲನೋಸೈಟ್ ಎಂಬ ಬಣ್ಣವಾಹಕ ವಸ್ತುವಿನ ಮೇಲೆ ಕೂಡಾ ಪರಿಣಾಮ ಬೀರಿ ವಸಡಿನ ಬಣ್ಣ ಬದಲಾಗಿಸುತ್ತದೆ. ಹೆಚ್ಚಾಗಿ ಬೆಳೆದ ವಸಡಿನ ಭಾಗವನ್ನು ಕತ್ತರಿಸಿ ಹಲ್ಲಿನ ಕಿರೀಟದ ಗಾತ್ರ ಹೆಚ್ಚಿಸಲಾಗುತ್ತದೆ ಮತ್ತು ಹಲ್ಲಿನ ಸುತ್ತ ಇರುವ ವಸಡಿನ ಆಕಾರವನ್ನು ಬದಲಾಯಿಸಿ ನಗುವಿನ ಶೈಲಿಯನ್ನೇ ಬದಲಾಯಿಸಲಾಗುತ್ತದೆ. ಕೆಲವೊಮ್ಮೆ ನಾಲಗೆಯ ತಳಭಾಗದಲ್ಲಿರುವ “ಪ್ರೀನಮ್” ಇದರ ಗಾತ್ರವನ್ನು ಕುಗ್ಗಿಸಿ, ನಾಲಗೆಯ ಚಲನೆಗೆ ಅನುಕೂಲ ಮಾಡಲು ಲೇಸರ್ ಬಳಕೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬಾಯಿಯ ಹುಣ್ಣಿನ ನೋವು ಕಡಿಮೆ ಮಾಡಲು ಮತ್ತು ಚಿಕಿತ್ಸೆಗಾಗಿ ಲೇಸರ್ ಬಳಕೆ ಹೆಚ್ಚಾಗುತ್ತಿದೆ. ವಸಡಿನ ಉರಿಯೂತವನ್ನು ಸರಿಪಡಿಸಲು ಲೇಸರ್ ಬಳಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಬಾಯಿಯಲ್ಲಿ ಬಿಳಿ ಮತ್ತು ಕೆಂಪು ಕಲೆಗಳು ಅಥವಾ ಸಣ್ಣ ಗಡ್ಡೆಗಳು ಬೆಳೆದಿದ್ದಲ್ಲಿ ಲೇಸರ್ ಮುಖಾಂತರ ತೆಗೆದು ಹಾಕಲಾಗುತ್ತದೆ. ಸಣ್ಣ ಸಣ್ಣ ಜೊಲ್ಲು ಗುಳ್ಳೆಗಳ ಚಿಕಿತ್ಸೆಗಾಗಿಯೂ ಲೇಸರ್ ಬಳಕೆ ಮಾಡಲಾಗುತ್ತದೆ. ಕೆಲವೊಮ್ಮೆ ನರಕ್ಕೆ ಗಾಯವಾಗಿದ್ದಾಗ, ನರದ ಗಾಯ ಬೇಗ ವಾಸಿಯಾಗಲು ಲೇಸರ್ ಬಳಸುತ್ತಾರೆ. ಬುದ್ಧಿ ಶಕ್ತಿ ಹಲ್ಲು ಬರುವ ಸಮಯದಲ್ಲಿ ಅದರ ಸುತ್ತ ಬೆಳೆದ ಮಾಂಸವನ್ನು ಕಿತ್ತು ಹಾಕಲು ಕೂಡಾ ಲೇಸರ್ ಬಳಕೆ ಮಾಡಲಾಗುತ್ತದೆ. ಒಟ್ಟಿನಲ್ಲಿ ದಿನೇ ದಿನೇ ಲೇಸರ್ ಬಳಕೆ ಜನಪ್ರಿಯವಾಗುವುದಂತೂ ನಿಜವಾದ ಮಾತು.

Also Read  ನರಿಮೊಗರು: ಮಾನಸಿಕ ಅಸ್ವಸ್ಥೆಯಾಗಿದ್ದ ಯುವತಿ ನಾಪತ್ತೆ

ಲೇಸರ್ ಲಾಭಗಳು ಏನು?
1. ಲೇಸರ್ ಚಿಕಿತ್ಸೆ ಬಹಳ ಸುಲಭ ಮತ್ತು ಯಾವುದೇ ಅರಿವಳಿಕೆ ಇಂಜೆಕ್ಷನ್‍ನ ಅವಶ್ಯಕತೆ ಇರುವುದಿಲ್ಲ.
2. ಸಂಪೂರ್ಣವಾಗಿ ನೋವಿಲ್ಲದ ಪ್ರಕ್ರಿಯೆ ಇದಾಗಿರುತ್ತದೆ.
3. ಲೇಸರ್ ಚಿಕಿತ್ಸೆ ಬಳಿಕ ಯಾವುದೇ ಹೊಲಿಗೆ ಅಗತ್ಯವಿರುದಿಲ್ಲ.
4. ಲೇಸರ್ ರಕ್ತನಾಳಗಳನ್ನು ಮಚ್ಚುವುದರಿಂದ, ಸರ್ಜರಿ ಸಂಪೂರ್ಣ ರಕ್ತ ರಹಿತವಾಗಿರುತ್ತದೆ. ರಕ್ರಸ್ರಾವ ಬಹಳ ಕಡಮೆ.
5. ಲೇಸರ್ ಚಿಕಿತ್ಸೆಯ ಸಮಯದಲ್ಲಿ ಸೋಂಕು ತಗಲುವ ಸಾಧ್ಯತೆ ಬಹಳ ಕಡಮೆ ಇರುತ್ತದೆ ಮತ್ತು ಹೆಚ್ಚಿನ ಬ್ಯಾಕ್ಟೀರಿಯಾಗಳು ಕೊಲ್ಲಲ್ಪಡುತ್ತದೆ.
6. ಲೇಸರ್ ಚಿಕಿತ್ಸೆ ಅತೀ ಸುರಕ್ಷಿತ ಮತ್ತು ಬಹಳ ಕಡಮೆ ಸಮಯ ತೆಗೆದುಕೊಳ್ಳುತ್ತದೆ.

Also Read  ಮಾಜಿ ಸಚಿವ, ಕಾಂಗ್ರೇಸ್ ಮುಖಂಡ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ

ತೊಂದರೆಗಳು
1. ದುಬಾರಿ ವೆಚ್ಚ ಲೇಸರ್ ಚಿಕಿತ್ಸೆಗೆ ತಗಲುತ್ತದೆ.
2. ಲೇಸರ್ ಚಿಕಿತ್ಸೆ ಸಮಯದಲ್ಲಿ ಹಲ್ಲಿನ ದಂತ ಮಜ್ಜೆಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಸೂಕ್ತವಾದ ಮುನ್ನೆಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇರುತ್ತದೆ.
3. ಲೇಸರ್ ಚಿಕಿತ್ಸೆಯ ಸಂದರ್ಭದಲ್ಲಿ ಉಂಟಾಗುವ ಹೊಗೆಯಲ್ಲಿ ನೂರಾರು ಬಗೆಯ ರಾಸಾಯನಿಕಗಳು ಇರುತ್ತದೆ. ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಕಣ್ಣು, ಮೂಗುಗಳನ್ನು ಮುಖಗವಚ ಮತ್ತು ಕನ್ನಡದ ಧರಿಸಿ ರಕ್ಷಿಸಿಬೇಕಾದ ಅನಿವಾರ್ಯತೆ ಇರುತ್ತದೆ.
4. ಲೇಸರ್ ಚಿಕಿತ್ಸೆಯ ಸಮಯದಲ್ಲಿ ಸೋಂಕು ಹರಡುವ ಸಾಧ್ಯತೆಯೂ ಇರುತ್ತದೆ.

ಕೊನೆ ಮಾತು
ಲೈಟ್ ಆಂಪ್ಲಿಪಿಕೇಶನ್ ಸ್ಟಿಮುಲೇಟೆಡ್ ಎಮ್ಮಿಷನ್ ರೇಡಿಯೇಷನ್ ಎಂಬುದನ್ನು ಲೇಸರ್ ಎಂಬುದಾಗಿ ಕರೆಯುತ್ತಾರೆ. ಇದೊಂದು ಬಹಳ ನೇರವಾದ, ತೆಳುವಾದ ಮತ್ತು ನಿರ್ದಿಷ್ಟ ದಾರಿಯಲ್ಲಿ ಸಾಗುವಂತೆ ಮಾಡಲಾದ ಬೆಳಕಿನ ಕಿರಣಗಳಾಗಿದ್ದು ದಂತ ಚಿಕಿತ್ಸೆಯಲ್ಲಿಯೂ ಇತ್ತೀಚಿನ ದಿನಗಳಲ್ಲಿ ಬಳಸುತ್ತಿದ್ದಾರೆ. 1960 ದಶಕದಲ್ಲಿ ಈ ಲೇಸರ್ ಮೊದಲ ಬಾರಿಗೆ ಅಮೇರಿಕಾದಲ್ಲಿ ಬಳಸಲಾಯಿತು. 1990ರ ಸಮಯದಲ್ಲಿ ಬಹಳ ಜನಪ್ರಿಯಗೊಂಡಿತು. ಇದೀಗ 2000 ಇಸವಿಯ ನಂತರ ನಮ್ಮ ದೇಶದಲ್ಲಿಯೂ ಲೇಸರ್ ಬಳಕೆ ಹೆಚ್ಚು ಜನಪ್ರಿಯಗೊಂಡಿತು. ಇತ್ತೀಚೆಗೆ ಹಲ್ಲು ಬಿಳಿ ಮಾಡುವ ಪ್ರಕ್ರಿಯೆಯನ್ನು ವೇಗಗೊಳಿಸುವ ಉದ್ದೇಶದಿಂದ ಬ್ಲೀಚಿಂಗ್ ಸಮಯದಲ್ಲಿ ಈ ಲೇಸರ್ ಬಳಕೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಒಟ್ಟಿನಲ್ಲಿ ಸಾಂಪ್ರದಾಯಿಕ ದಂತ ಚಿಕಿತ್ಸೆ ಬಗ್ಗೆ ಬಹಳ ತಪ್ಪು ಕಲ್ಪನೆ ಇರುವ ಮತ್ತು ಬೆದರುವ ರೋಗಿಗಳಿಗೆ ಲೇಸರ್ ಚಿಕಿತ್ಸೆ ವರದಾನ ಎಂದರೂ ಅತಿಶಯೋಕ್ತಿಯಾಗದು. ಹೆಚ್ಚಿನ ಎಲ್ಲಾ ದಂತ ಚಿಕಿತ್ಸೆ ಮಾಡಲಾಗದಿದ್ದರೂ, ಕೆಲವೊಂದು ಹಂತ ಚಿಕಿತ್ಸೆಗಳನ್ನು ನೋವು ರಹಿತ ಮತ್ತು ಸರಳೀಕರಿಸಿ ದಂತ ಚಿಕಿತ್ಸೆಯೂ ಆರಾಮದಾಯಕ ಎಂಬ ವಿಶ್ವಾಸವನ್ನು ಜನರಲ್ಲಿ ಬಿತ್ತುವಲ್ಲಿ ಲೇಸರ್ ಯಶಸ್ವಿಲಾಗಿದೆ ಎಂದರೂ ತಪ್ಪಾಗಲಾರದು.

Also Read  ಮಂಗಳೂರು: 4 ವರ್ಷದ ಮಗುವಿನೊಂದಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ     

ಡಾ|ಮುರಲೀ ಮೋಹನ್ ಚೂಂತಾರು

 

 

error: Content is protected !!
Scroll to Top