(ನ್ಯೂಸ್ ಕಡಬ) newskadaba.com.ಕಡಬ, ಡಿ.31. ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಡಿ.29ರಂದು ಬೇಟಿ ನೀಡಿ, ಶಾಲಾ ಸಮಸ್ಯೆಗಳ ಬಗ್ಗೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣ ಗೌಡ ಹಾಗೂ ಶಾಲಾ ಮುಖ್ಯ ಶಿಕ್ಷಕ ಶ್ರೇಯಾಂಸ್ ರೊಂದಿಗೆ ಚರ್ಚಿಸಿದರು.ಶಾಲಾ ಹಳೆಯ ಕಟ್ಟಡ ಸಂಪೂರ್ಣ ನಾದುರಸ್ತಿಯಲ್ಲಿದ್ದು, ಹೊಸ ಕಟ್ಟಡಕ್ಕೆ ಸಹಾಯಧನ ಒದಗಿಸುವಂತೆ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣ ಗೌಡ, ಮುಖ್ಯ ಗುರು ಶ್ರೇಯಾಂಸ್ ಸಂಸದರಿಗೆ ಮನವಿ ಮಾಡಿದರು. ಸರಕಾರಿ ಶಾಲೆಗಳಿಗೆ ಬೇಕಾದ ರೀತಿಯಲ್ಲಿ ಸಹಾಯ ಧನ ನೀಡಲಾಗುವುದು, ಆದರೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಿ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವಲ್ಲಿ ತಾವುಗಳು ಶ್ರಮಿಸಬೇಕೆಂದು ಸೂಚಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಮಕ್ಕಳ ಪೋಷಕರೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಶಾಲಾ ಅಭಿವೃದ್ಧಿಯತ್ತ ಎಲ್ಲರೂ ಕೈಜೋಡಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪುತ್ತೂರು ಪಿ.ಎಲ್.ಡಿ.ಬ್ಯಾಂಕಿನ ಕೋಶಾಧಿಕಾರಿ ಭಾಸ್ಕರ ಗೌಡ ಇಚ್ಲಂಪಾಡಿ, ಕಡಬ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ಕಡಬ ಸಿಎ ಬ್ಯಾಂಕ್‍ನ ಮಾಜಿ ನಿರ್ದೇಶಕ ಚಂದ್ರಶೇಖರ ಗೌಡ ನೂಜಿ, ಗ್ರಾ.ಪಂ.ಸದಸ್ಯರಾದ ರಾಮಚಂದ್ರ ಗೌಡ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕಿಟ್ಟು ಕೆ., ಶಾಲಾ ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷ ಮೋನಪ್ಪ ಗೌಡ ಅರಿಮಜಲು ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಶಾರೀರಿಕ ಶಿಕ್ಷಕ ಬಾಲಕೃಷ್ಣ ಎಂ. ಸ್ವಾಗತಿಸಿ, ಶಿಕ್ಷಕಿ ಶ್ರೀಲತಾ ವಂದಿಸಿದರು. ಶಿಕ್ಷಕಿಯರಾದ ಸಚಿದೇವಿ, ಗೀತಾ, ಕಾವ್ಯ ಉಪಸ್ಥಿತರಿದ್ದರು.