ತಾಯಿ-ಮಗುವಿನ ಪ್ರಾಣ ಉಳಿಸಲು ಗ್ರಾ.ಪಂ. ನೌಕರರಿಂದ ಧನ ಸಹಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.28. ಕಳೆದ ಹಲವು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮ ಪಂಚಾಯತ್‍ನಲ್ಲಿ ಕನಿಷ್ಠ ವೇತನದಲ್ಲಿ ಸೇವೆ ಸಲ್ಲಿಸುತ್ತಿರುವ ಪುಷ್ಪಾವತಿ ಎಂಬಾಕೆಯು ಹೆಚ್1ಎನ್1 ಜ್ವರದಿಂದ ಬಳಲುತ್ತಿದ್ದು 10 ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ತುಂಬು ಗರ್ಭಿಣಿಯಾಗಿದ್ದ ಅವರಿಗೆ ವಾರದ ಹಿಂದೆ ವಿಪರೀತ ಜ್ವರ ಬಂದ ಕಾರಣ ತುರ್ತು ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ಹೊರತೆಗೆದು ಹೆಚ್ಚಿನ ಚಿಕಿತ್ಸೆಗೆ ಮಗುವನ್ನು ಹಾಗೂ ಪುಷ್ಪಾವತಿಯವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿಲಾಗಿತ್ತು. ರಾಜ್ಯ ಸರಕಾರದ ಪಂಚಾಯತ್ ರಾಜ್ ಇಲಾಖೆಯಡಿ ಸ್ಥಳೀಯಾಡಳಿತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್ ನೌಕರರಿಗೆ (ಇಎಸ್‍ಐ) ಯಾವುದೇ ವೈದಕೀಯ ಭದ್ರತೆಯ ಸೌಲಭ್ಯಗಳಿಲ್ಲದ ಕಾರಣ ಪುಷ್ಪಾವತಿ ಕುಟುಂಬಸ್ಥರು ವೈದ್ಯಕೀಯ ಚಿಕಿತ್ಸೆಯ ವೆಚ್ಚ ಭರಿಸಲು ಅಶಕ್ತರಾಗಿದ್ದರು. ಇದನ್ನರಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯಾಭಿವೃದ್ಧಿ ಸಂಘದ ಸದಸ್ಯರು ರಾಜ್ಯದ ವಿವಿಧ ಗ್ರಾ.ಪಂ. ನೌಕರರ ನೆರವು ಪಡೆದು ಪುಷ್ಪಾವತಿ ಕುಟುಂಬಕ್ಕೆ 1 ಲಕ್ಷದ 50 ಸಾವಿರ ರೂ.ಗಳನ್ನು ಹಸ್ತಾಂತರಿಸಿದರು.

error: Content is protected !!
Scroll to Top